ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯದ ಹಿತಕ್ಕಾಗಿ ಒಗ್ಗಟ್ಟಿನ ಹೋರಾಟ’

ಗಡಿಯಲ್ಲಿ ಅಶಾಂತಿ ಸೃಷ್ಟಿಗೆ ಅವಕಾಶ ಕೊಡಲ್ಲ; ಗಡಿ ಕನ್ನಡೋತ್ಸವದಲ್ಲಿ ಎಂಇಎಸ್‍ಗೆ ಎಚ್ಚರಿಕೆ
Last Updated 7 ಜನವರಿ 2022, 5:00 IST
ಅಕ್ಷರ ಗಾತ್ರ

ಔರಾದ್: ‘ಗಡಿ ವಿವಾದ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ. ಹೀಗಾಗಿ ಬೆಳಗಾವಿಯಲ್ಲಿ ಗಡಿ ಕ್ಯಾತೆ ತೆಗೆಯುವುದರಿಂದ ಯಾವುದೇ ಪ್ರಯೋಜನವಾಗದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಗುರುವಾರ ಇಲ್ಲಿ ನಡೆದ ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರು ಜಯಂತಿ ಹಾಗೂ ಗಡಿ ಕನ್ನಡೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾಷಾವಾರು ಪ್ರಾಂತಗಳ ಆಧಾರದ ಮೇಲೆ ರಾಜ್ಯಗಳು ರಚನೆಯಾಗಿವೆ. ಹೀಗಾಗಿ ಗಡಿ ಭಾಗದಲ್ಲಿ ವಿವಿಧ ಭಾಷಿಕರು ಪರಸ್ಪರ ಹೊಂದಿಕೊಂಡು ಇದ್ದಾರೆ. ಆದರೆ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಪದೇ ಪದೇ ಕಾಲು ಕೆದರಿ ಜಗಳ ತೆಗೆದು ಅಶಾಂತಿಯನ್ನುಂಟು ಮಾಡುವುದು ಸರಿಯಲ್ಲ. ರಾಜ್ಯದ ಹಿತ ವಿಷಯ ಬಂದಾಗ ನಾವೆಲ್ಲ ಒಂದಾಗಿ ಹೋರಾಡಬೇಕಾಗುತ್ತದೆ’ ಎಂದು ಹೇಳಿದರು.

‘ಮೈಸೂರು ಪ್ರದೇಶಕ್ಕೆ ಹೋಲಿಸಿದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಸಾಕಷ್ಟು ಅಭಿವೃದ್ಧಿ ಆಗಬೇಕು. ಈಚೆಗಂತೂ ಈ ಭಾಗಕ್ಕೆ ಅನೇಕ ಸಮಸ್ಯೆ ಕಾಡುತ್ತಿವೆ. ಈ ಸರ್ಕಾರ ಇನ್ನು ಇಲ್ಲಿ ನಿಗಮ ಮಂಡಳಿ ರಚನೆ ಮಾಡಿಲ್ಲ. 20 ಸಾವಿರಕ್ಕೂ ಜಾಸ್ತಿ ಹುದ್ದೆಗಳು ಖಾಲಿ ಇವೆ. ಕಾರಂಜಾ ಸೇರಿದಂತೆ ಅನೇಕ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಈ ಭಾಗದ ಶಾಲೆಗಳಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ತುಂಬಬೇಕಾಗಿದೆ. ಇಂತಹ ಹತ್ತಾರು ಸಮಸ್ಯೆಗಳು ಮುಂದಿಟ್ಟುಕೊಂಡು ಈ ಭಾಗದ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ’ ಎಂದು ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, ‘ಗಡಿಯಲ್ಲಿ ಸದಾ ತಂಟೆ ತೆಗೆಯುತ್ತಿರುವ ಎಂಇಎಸ್ ನಿಷೇಧಿಸುವಂತೆ ನಾವು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ ಯಾವುದೇ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಓಟ್ ಬ್ಯಾಂಕ್ ರಾಜಕಾರಣ ಅವರನ್ನು ರಕ್ಷಣೆ ಮಾಡುತ್ತಿದೆ. ಈ ರೀತಿ ಅವರು ಕಾಲು ಕೆದರಿ ನಮ್ಮ ಜೊತೆ ಜಗಳಕ್ಕೆ ಬರಲು ರಾಜಕಾರಣಿಗಳೇ ಕಾರಣ’ ಎಂದು ಹೇಳಿದರು.

‘ಕರ್ನಾಟಕ ರಕ್ಷಣಾ ವೇದಿಕೆ ಕಳೆದ 25 ವರ್ಷಗಳಿಂದ ಕನ್ನಡಕ್ಕಾಗಿಗಿ ಹೋರಾಟ ಮಾಡುತ್ತ ಬಂದಿದೆ. ಆದರೆ ಸರ್ಕಾರ ಆಗಲಿ, ಸಚಿವರಾಗಲಿ ಕನ್ನಡ ಹೋರಾಗಾರರ ಮೇಲೆ ಪ್ರಕರಣ ದಾಖಲಿಸುವುದು, ಬೆದರಿಸುವುದು ಮಾಡಿದರೆ ನಾವು ಸಹಿಸುವುದಿಲ್ಲ’ ಎಂದು ಎಚ್ಚರಿಸಿದರು.

ಸಾನಿಧ್ಯ ವಹಿಸಿದ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ‘ಕನ್ನಡ ವಿಷಯ ಬಂದಾಗ ಎಲ್ಲರೂ ಜಾತಿ, ಪಕ್ಷಬೇಧ ಮರೆತು ಒಂದಾಗಬೇಕು’ ಎಂದರು.

ಭಾಲ್ಕಿ ಮಠದ ಗುರುಬಸವ ಪಟ್ಟದ್ದೇವರು, ಮಲ್ಲಯ್ಯಗಿರಿ ಮಠದ ಡಾ. ಬಸವಲಿಂಗ ಅವಧೂತರು, ಹಣೆಗಾಂವ್ ಶಂಕರಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಕನ್ನಡೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಲಕ್ಷ್ಮಣರಾವ ಸೋರಳ್ಳಿ ಸ್ವಾಗತಿಸಿದರು. ಸೋಮನಾಥ ಮುಧೋಳಕರ್ ಪ್ರಾಸ್ತಾವಿಕ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಮೀನಾಕ್ಷಿ ಸಂಗ್ರಾಮ, ಎಕತಾ ಫೌಂಡೇಶನ್ ಅಧ್ಯಕ್ಷ ರವಿ ಸ್ವಾಮಿ, ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಸಂಜುಕುಮಾರ ಜುಮ್ಮಾ, ದೀಪಕ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಆನಂದ ಚವಾಣ್, ಬಸವರಾಜ ದೇಶಮುಖ, ರಾಮಣ್ಣ ವಡೆಯರ್, ರತಿಕಾಂತ ಮಜಗೆ, ರಾಜಕುಮಾರ ಯಡವೆ, ಶರಣಪ್ಪ ಪಾಟೀಲ ಇದ್ದರು.

ಸಮಾರಂಭಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಲಾ ತಂಡಗಳ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ, ಚಕ್ರಿ ಭಜನೆ, ಯುವಕರ ಕೋಲಾಟ, ಭಜನೆ ತಂಡಗಳು ಮೆರವಣಿಗೆ ಕಳೆ ಕಟ್ಟಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT