ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಕಲ್ಯಾಣ | ಎಪಿಎಂಸಿಯಲ್ಲಿ ಕಸದ ರಾಶಿ; ಸ್ವಚ್ಛತೆ ಮರೀಚಿಕೆ

ಅಡತ್ ಬಜಾರ್ ಜಿಲ್ಲೆಯ 2ನೇ ದೊಡ್ಡ ಮಾರುಕಟ್ಟೆ
Published : 28 ಸೆಪ್ಟೆಂಬರ್ 2024, 5:32 IST
Last Updated : 28 ಸೆಪ್ಟೆಂಬರ್ 2024, 5:32 IST
ಫಾಲೋ ಮಾಡಿ
Comments

ಬಸವಕಲ್ಯಾಣ: ನಗರದ ಬಸವಗಂಜ್‌ನಲ್ಲಿರುವ ಅಡತ್ ಬಜಾರ್ ಎಂದೇ ಕರೆಯಲಾಗುವ ಕೃಷಿ ಉತ್ಪನ್ನ ಮಾರಾಟ ಸಮಿತಿಯ ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಸಂಗ್ರಹಗೊಂಡಿದ್ದು ಅಸ್ವಚ್ಛತೆ ತಾಂಡವಾಡುತ್ತಿದೆ.

ಜಿಲ್ಲೆಯಲ್ಲಿನ 2ನೇ ದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆ ಇದಾಗಿದೆ. ನಗರದ ಮಧ್ಯ ಭಾಗದಲ್ಲಿನ ಅಂಬೇಡ್ಕರ್ ವೃತ್ತದ ಹಿಂಭಾಗದ ಜನನಿಬಿಡ ಪ್ರದೇಶದಲ್ಲಿ ಮಾರುಕಟ್ಟೆ ಇದೆ. ಆದ್ದರಿಂದ ವಿವಿಧ ಓಣಿಗಳಿಗೆ ಹೋಗುವುದಕ್ಕೆ ಇಲ್ಲಿಂದ ದಾರಿಗಳಿವೆ. ಆದರೆ ಅನೇಕ ದಿನಗಳಿಂದ ಎಲ್ಲೆಂದರಲ್ಲಿ ಕಸ ಸಂಗ್ರಹಗೊಂಡಿರುವ ಕಾರಣ ದುರ್ನಾತ ಬೀರುತ್ತಿದ್ದು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.

ತಾಲ್ಲೂಕಿನ ಬಹಳಷ್ಟು ರೈತರು ಇಲ್ಲಿಗೆ ತಮ್ಮ ಉತ್ಪನ್ನಗಳನ್ನು ಮಾರಾಟಕ್ಕೆ ಬರುತ್ತಾರೆ. ಉದ್ದು ಮತ್ತು ಹೆಸರಿನ ರಾಶಿ ಆಗಿರುವುದರಿಂದ ಅವುಗಳನ್ನು ಇಲ್ಲಿಗೆ ತರಲಾಗುತ್ತಿದ್ದು, ಕೆಲ ದಿನಗಳಿಂದ ರೈತರ ಓಡಾಟವೂ ಇಲ್ಲಿ ಹೆಚ್ಚಾಗಿದೆ. ಆದರೆ, ಸಂಬಂಧಿತರು ಸ್ವಚ್ಛತೆಯ ಕಡೆಗೆ ನಿರ್ಲಕ್ಷ ವಹಿಸಿರುವ ಕಾರಣ ತೊಂದರೆ ಆಗಿದೆ.

ಸದಾನಂದ ಮಠದ ಎದುರಿನಿಂದ ಮಾರುಕಟ್ಟೆ ಪ್ರವೇಶಿಸುವಾಗ ಎಪಿಎಂಸಿಯ ಪ್ರವೇಶ ದ್ವಾರದ ಎದುರಲ್ಲೇ ರಸ್ತೆಯ ಆಚೆ– ಈಚೆ ಕಸದ ರಾಶಿ ಇದೆ. ಚರಂಡಿಯ ಮೇಲೆಯೇ ಕಸ ಬಿದ್ದಿರುವುದರಿಂದ ಮಳೆ ನೀರು ಸಹ ಮುಂದಕ್ಕೆ ಹೋಗುತ್ತಿಲ್ಲ. ಅಲ್ಲದೇ ಮಾರುಕಟ್ಟೆಗೆ ಬರುವವರು ಇಲ್ಲಿಯೇ ಮೂತ್ರ ವಿಸರ್ಜಿಸುತ್ತಾರೆ. ಹೀಗಾಗಿ ಕಸ ಕೊಳೆತು ದುರ್ನಾತ ಸೂಸುತ್ತಿದೆ. ಎಪಿಎಂಸಿ ಕಚೇರಿಯ ಸುತ್ತಲಿನ ಆವರಣಗೋಡೆಗೆ ಹತ್ತಿಕೊಂಡು ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಹಾಗೂ ನಾರಾಯಣಪುರ ರಸ್ತೆಯಿಂದ ಮಾರುಕಟ್ಟೆ ಪ್ರವೇಶಿಸುವ ಸ್ಥಳದಲ್ಲಿಯೂ ಪ್ರಥಮವಾಗಿ ಕಸದ ದರ್ಶನ ಆಗುತ್ತದೆ. ಚರಂಡಿಗಳಲ್ಲಿ ಮಣ್ಣು ತುಂಬಿಕೊಂಡಿದೆ.

`ಕಚೇರಿಯ ಮೇಲ್ಛಾವಣಿ ಕುಸಿಯುತ್ತಿದೆ. ಇಲ್ಲಿಗೆ ಬರುವ ರೈತರಿಗೆ ಕುಳಿತುಕೊಳ್ಳಲು ಕುರ್ಚಿಗಳಿಲ್ಲ. ನೀರಿನ ವ್ಯವಸ್ಥೆ ಇಲ್ಲ. ಆವರಣದೊಳಗೆ ಖಾಲಿ ಜಾಗದಲ್ಲಿ ಪಾರ್ಥೇನಿಯಂ ಬೆಳೆದಿದೆ. ಮಾರುಕಟ್ಟೆಯಲ್ಲಿಯೂ ಎಲ್ಲೆಡೆ ಮುಳ್ಳುಕಂಟೆ ಬೆಳೆದು ನಿಂತಿದೆ. ಅಲ್ಲಲ್ಲಿ ನೀರು ಸಂಗ್ರಹಗೊಂಡು ಕೆಸರು ಆಗುತ್ತಿದೆ. ಆದರೂ, ಸಂಬಂಧಿತರು ನಿರ್ಲಕ್ಷ್ಯ ತೋರಿದ್ದಾರೆ' ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ವೀರಾರೆಡ್ಡಿ ಕಿಟ್ಟಾ ಮತ್ತು ಮುಖಂಡ ಕಾಶಿನಾಥ ಬಿರಾದಾರ ದೂರಿದ್ದಾರೆ.

‘ರೈತ ಭವನದ ಎದುರಲ್ಲಿಯೂ ಹುಲ್ಲು ಬೆಳೆದಿದ್ದರಿಂದ ಸ್ವಚ್ಛತೆ ಕೈಗೊಳ್ಳುವುದಕ್ಕೆ ಸಂಬಂಧಿತರಿಗೆ ಭೇಟಿಯಾಗಿ ಕೇಳಿಕೊಂಡಿದ್ದೇವೆ' ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುಭಾಷ ರಗಟೆ ಹೇಳಿದ್ದಾರೆ.

‘ಎಪಿಎಂಸಿ ಪರಿಸರದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವುದಕ್ಕೆ ಪ್ರಯತ್ನಿಸಲಾಗುವುದು. ಕಚೇರಿ ಕಟ್ಟಡ ಹಳೆಯದಾಗಿದ್ದು, ಹೊಸ ಕೊಠಡಿಗಳ ನಿರ್ಮಾಣಕ್ಕೆ ಮತ್ತು ಚರಂಡಿಗಳ ವ್ಯವಸ್ಥೆ ಕೈಗೊಳ್ಳುವುದಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ' ಎಂದು ಎಪಿಎಂಸಿ ಕಾರ್ಯದರ್ಶಿ ಸಂತೋಷ ಮದಗೊಂಡ ತಿಳಿಸಿದ್ದಾರೆ.

ಬಸವಕಲ್ಯಾಣದ ಎಪಿಎಂಸಿ ಪ್ರವೇಶ ದ್ವಾರದ ಎದುರಿನ ರಸ್ತೆ ಪಕ್ಕದಲ್ಲಿ ಕಸ ಸಂಗ್ರಹಗೊಂಡಿದೆ
ಬಸವಕಲ್ಯಾಣದ ಎಪಿಎಂಸಿ ಪ್ರವೇಶ ದ್ವಾರದ ಎದುರಿನ ರಸ್ತೆ ಪಕ್ಕದಲ್ಲಿ ಕಸ ಸಂಗ್ರಹಗೊಂಡಿದೆ
ಬಸವಕಲ್ಯಾಣದ ಎಪಿಎಂಸಿ ಆವರಣಕ್ಕೆ ನಾರಾಯಣಪುರ ರಸ್ತೆಯಿಂದ ಪ್ರವೇಶಿಸುವ ಸ್ಥಳದಲ್ಲಿ ಕಸ ಸಂಗ್ರಹಗೊಂಡಿದೆ
ಬಸವಕಲ್ಯಾಣದ ಎಪಿಎಂಸಿ ಆವರಣಕ್ಕೆ ನಾರಾಯಣಪುರ ರಸ್ತೆಯಿಂದ ಪ್ರವೇಶಿಸುವ ಸ್ಥಳದಲ್ಲಿ ಕಸ ಸಂಗ್ರಹಗೊಂಡಿದೆ
ಬಸವಕಲ್ಯಾಣದ ಎಪಿಎಂಸಿ ಕಚೇರಿಯ ಆವರಣದೊಳಗೆ ಪಾರ್ಥೇನಿಯಂ ಹುಲ್ಲು ಬೆಳೆದಿದೆ
ಬಸವಕಲ್ಯಾಣದ ಎಪಿಎಂಸಿ ಕಚೇರಿಯ ಆವರಣದೊಳಗೆ ಪಾರ್ಥೇನಿಯಂ ಹುಲ್ಲು ಬೆಳೆದಿದೆ
ಮಾರುಕಟ್ಟೆಯ ವ್ಯವಸ್ಥೆ ಹಾಗೂ ನಿಯಂತ್ರಣ ಮಾತ್ರ ಎಪಿಎಂಸಿಗೆ ಸಂಬಂಧಿಸಿದ್ದು ಸ್ವಚ್ಛತೆ ಕೈಗೊಳ್ಳಲು ನಗರ ಸಭೆಯವರಿಗೆ ಕೇಳಿಕೊಳ್ಳಲಾಗುವುದು.
-ಸಂತೋಷ ಮದಗೊಂಡ, ಕಾರ್ಯದರ್ಶಿ ಬಸವಕಲ್ಯಾಣ ಎಪಿಎಂಸಿ
ಮಾರುಕಟ್ಟೆಗೆ ಪ್ರತಿದಿನವೂ ರೈತರು ಬರುವುದರಿಂದ ಸಂಬಂಧಿತರು ಎಲ್ಲೆಡೆ ಸ್ವಚ್ಛತೆ ಕೈಗೊಳ್ಳಬೇಕು. ಅಲ್ಲಲ್ಲಿ ಮೂತ್ರಾಲಯದ ವ್ಯವಸ್ಥೆ ಮಾಡಬೇಕು.
-ಸುಭಾಷ ರಗಟೆ ಅಧ್ಯಕ್ಷ, ತಾಲ್ಲೂಕು ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT