ಬುಧವಾರ, ಸೆಪ್ಟೆಂಬರ್ 22, 2021
22 °C

ರಾಜ್ಯ ಸರ್ಕಾರಿ ನೌಕರರ ಸಂಘದ ಸಾಮಾನ್ಯ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 

ಬೀದರ್: ನೌಕರರ ಭವನದ ಮುಂದುವರಿದ ಕಾಮಗಾರಿಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕವು ₹ 4 ಕೋಟಿ ಕ್ರಿಯಾಯೋಜನೆ ತಯಾರಿಸಿದೆ.

ಇಲ್ಲಿಯ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಡೆದ ಸಂಘದ 2020-21ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಈ ವಿಷಯ ತಿಳಿಸಿದರು.

ಕ್ರಿಯಾಯೋಜನೆಯು ಊಟದ ಕೋಣೆ, ಸಭಾ ಭವನ, ಗ್ರಂಥಾಲಯ, ಬಯಲು ರಂಗಮಂದಿರ, ಒಳಾಂಗಣ ಕ್ರೀಡಾಂಗಣ, 12 ಕೋಣೆಗಳ ವಿ.ಐ.ಪಿ ಅತಿಥಿಗೃಹ, ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ, ನೌಕರರ ತರಬೇತಿ ಕೇಂದ್ರ, ಆವರಣದಲ್ಲಿ ಪಾರ್ಕಿಂಗ್ ಟೈಲ್ಸ್ ಅಳವಡಿಕೆ, ಬೀದಿ ದೀಪ, ಹವಾನಿಯಂತ್ರಣ ವ್ಯವಸ್ಥೆ ಮೊದಲಾದವುಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಈಗಾಗಲೇ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರಿಗೆ ಕ್ರಿಯಾಯೋಜನೆ ಪ್ರತಿ ಸಲ್ಲಿಸಲಾಗಿದೆ. ಒಟ್ಟು ಮೊತ್ತದಲ್ಲಿ ರಾಜ್ಯ ಸರ್ಕಾರ ₹ 1 ಕೋಟಿ ಕೊಡಲಿದೆ. ಆದಷ್ಟು ಬೇಗ ₹ 50 ಲಕ್ಷ ಬಿಡುಗಡೆ ಮಾಡಿಸಲಾಗುವುದು ಎಂದು ಷಡಕ್ಷರಿ ಅವರು ಭರವಸೆ ನೀಡಿದ್ದಾರೆ. ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ಸಂಬಳ ಪಡೆದು ಉಳಿದ ₹ 3 ಕೋಟಿ ಹೊಂದಿಸಲು ಸರ್ವಾನುಮತದಿಂದ ನಿರ್ಣಯಿಸಲಾಗಿದೆ ಎಂದು ತಿಳಿಸಿದರು.

ಕಾಮಗಾರಿಗಳು ಪೂರ್ಣಗೊಂಡ ನಂತರ ಭವನ ಹೈಟೆಕ್ ಹಾಗೂ ಮಾದರಿ ಆಗಲಿದೆ. ನೌಕರರ ಸಭೆ, ಸಮಾರಂಭ, ವೈಯಕ್ತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ನೌಕರರ ಭವನಕ್ಕಾಗಿ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ತಲಾ ಒಂದು ಎಕರೆ ನಿವೇಶನ ಒದಗಿಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ನಿವೇಶನ ಕೊಟ್ಟ ನಂತರ ಸರ್ಕಾರದಿಂದ ಅನುದಾನ ಪಡೆದು ಭವನ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಬೀದರ್‌ನಲ್ಲಿ ಸರ್ಕಾರಿ ನೌಕರರ ಕ್ಯಾಂಟೀನ್ ಶುರು ಮಾಡಲಾಗುವುದು. ಹೊಸ ಬಡಾವಣೆ ರಚಿಸಿ ನೌಕರರಿಗೆ ಕಡಿಮೆ ದರದಲ್ಲಿ ನಿವೇಶನ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಬೀದರ್ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವಿಭಜನೆ, ಎನ್‍ಪಿಎಸ್ ರದ್ದತಿ, ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರಕ್ಕೆ ಸರಿಸಮನಾದ ವೇತನ, ನೌಕರರ ಕುಟುಂಬಗಳಿಗೆ ನಗದು ರಹಿತ ವೈದ್ಯಕೀಯ ಸೇವೆ ಬೇಡಿಕೆಗಳ ಈಡೇರಿಕೆಗೆ ಶ್ರಮಿಸಲಾಗುವುದು ಎಂದು ಹೇಳಿದರು.

ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಮಡಿವಾಳ, ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಹಿರಿಯ ಉಪಾಧ್ಯಕ್ಷ ರಾಜಕುಮಾರ ಹೊಸದೊಡ್ಡಿ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಖಜಾಂಚಿ ಅಶೋಕ ರೆಡ್ಡಿ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ರಾಜಪ್ಪ ಪಾಟೀಲ, ಶಿವಕುಮಾರ ಘಾಟೆ, ರಾಜಕುಮಾರ ಬೇಲೂರ, ಲಿಂಗಾನಂದ ಮಹಾಜನ್ ಇದ್ದರು. ಮನೋಹರ ಕಾಶಿ ನಿರೂಪಿಸಿದರು. ಬಳವಂತ ರಾಠೋಡ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.