ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಉತ್ತಮ ಮಳೆ

ರಸ್ತೆ ಮೇಲೆ ಹರಿದ ನೀರು: ತೋಯಿಸಿಕೊಂಡೆ ಮನೆ ಸೇರಿದ ಸವಾರರು
Last Updated 16 ಜೂನ್ 2020, 16:52 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಮಂಗಳವಾರ ಉತ್ತಮ ಮಳೆ ಸುರಿಯಿತು.

ಬೀದರ್, ಔರಾದ್, ಬಸವಕಲ್ಯಾಣ, ಹುಮನಾಬಾದ್, ಕಮಲನಗರ, ಭಾಲ್ಕಿ, ಚಿಟಗುಪ್ಪ ತಾಲ್ಲೂಕುಗಳಲ್ಲಿ ಮಳೆ ಸುರಿಯಿತು.

ಮಧ್ಯಾಹ್ನ ಕೆಲ ಹೊತ್ತು ಬಿರುಸಿನಿಂದ ಸುರಿದ ಮಳೆ ಸಂಜೆವರೆಗೂ ಜಿಟಿ ಜಿಟಿಯಾಗಿ ಮುಂದುವರಿಯಿತು.

ನಗರದಲ್ಲಿ ಬೆಳಿಗ್ಗೆಯಿಂದಲೇ ದಗೆ ಇತ್ತು. ಮಧ್ಯಾಹ್ನ ವಾತಾವರಣದಲ್ಲಿ ಬದಲಾವಣೆಯಾಯಿತು. ಆಕಾಶದಲ್ಲಿ ದಟ್ಟ ಮೋಡಗಳು ಆವರಿಸಿಕೊಂಡು ಮಳೆ ಸುರಿಯಲಾರಂಭಿಸಿತು. ಸುಮಾರು 45 ನಿಮಿಷಗಳ ಕಾಲ ಉತ್ತಮ ಮಳೆ ಸುರಿಯಿತು.

ನಗರದ ಹಾರೂರಗೇರಿ ಕಮಾನ್, ರೋಟರಿ ವೃತ್ತ, ಬೊಮ್ಮಗೊಂಡೇಶ್ವರ ವೃತ್ತದಿಂದ ಅಶೋಕ ಹೋಟೆಲ್‍ಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿರುವ ರೈಲ್ವೆ ಕೆಳ ಸೇತುವೆ, ಬಸವೇಶ್ವರ ವೃತ್ತ, ಜನವಾಡ ರಸ್ತೆ, ಚಿದ್ರಿ ರಸ್ತೆ, ಶಿವನಗರ ರಸ್ತೆ ಮತ್ತಿತರ ಕಡೆಗಳಲ್ಲಿ ರಸ್ತೆಗಳ ಮೇಲೆ ನೀರು ಹರಿಯಿತು.

ಅನೇಕ ಬೈಕ್ ಸವಾರರು ಮಳೆಯಲ್ಲಿ ನೆನೆಸಿಕೊಂಡೇ ಮನೆಗಳಿಗೆ ತೆರಳಿದರೆ, ಚಿಣ್ಣರು ತೊಯ್ಯಿಸಿಕೊಂಡು ಸಂಭ್ರಮಿಸಿದರು.

ಜನ ಜೀವನ ಅಸ್ತವ್ಯಸ್ತ: ಮಳೆಯಿಂದಾಗಿ ಮಧ್ಯಾಹ್ನ ಹಾಗೂ ಸಂಜೆ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.

ಅಂಗಡಿ ಮುಂಗಟ್ಟುಗಳಲ್ಲಿ ನಿರೀಕ್ಷಿತ ವ್ಯಾಪಾರ ಇರಲಿಲ್ಲ. ಜನ, ವಾಹನಗಳ ಸಂಚಾರವೂ ವಿರಳ ಆಗಿತ್ತು.

ಹರ್ಷ: ಮುಂಗಾರು ಹಂಗಾಮಿನಲ್ಲಿ ಆಗಾಗ ಉತ್ತಮ ಮಳೆ ಸುರಿಯುತ್ತಿರುವುದು ರೈತರಲ್ಲಿ ಹರ್ಷ ಉಂಟು ಮಾಡಿದೆ.

ಕೋವಿಡ್‌ ಸೋಂಕಿನ ಕಾರಣ ವಿಧಿಸಲಾದ ಲಾಕ್‍ಡೌನ್‍ನಿಂದ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಮುಂಗಾರು ಹಂಗಾಮಿನ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಅಂದುಕೊಂಡಂತೆ ಉತ್ತಮ ಮಳೆ ಸುರಿದರೆ ಚೆನ್ನಾಗಿ ಬೆಳೆ ಬರಲಿದೆ. ರೈತರಿಗೆ ಒಂದಿಷ್ಟು ಆರ್ಥಿಕ ಅನುಕೂಲ ಆಗಲಿದೆ ಎಂದು ಹೇಳುತ್ತಾರೆ ಹಲಬರ್ಗಾದ ಯುವ ರೈತ ರಾಜಕುಮಾರ ಚಲುವಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT