ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್ | ಪಾರದರ್ಶಕ ಚುನಾವಣೆಗೆ ಒತ್ತಾಯ: ಜಿಲ್ಲಾಧಿಕಾರಿಗೆ ಮನವಿ

ಆರೋಗ್ಯ ಇಲಾಖೆ ನೌಕರರು, ಶಿಕ್ಷಕರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ
Published : 23 ಸೆಪ್ಟೆಂಬರ್ 2024, 15:38 IST
Last Updated : 23 ಸೆಪ್ಟೆಂಬರ್ 2024, 15:38 IST
ಫಾಲೋ ಮಾಡಿ
Comments

ಬೀದರ್: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಒತ್ತಾಯಿಸಿವೆ.

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಮಾಳಗೆ, ಪ್ರಧಾನ ಕಾರ್ಯದರ್ಶಿ ಸುನೀಲಕುಮಾರ ಕಸ್ತೂರೆ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತುಗಾಂವೆ ಈ ಕುರಿತು ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿಗೆ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದ್ದಾರೆ.

2024-2029ರ ಅವಧಿಯ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಮಿತಿಗೆ ಅಕ್ಟೋಬರ್ 28ರಿಂದ ನವೆಂಬರ್ 16ರವರೆಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ. ಅದರನ್ವಯ ಜಿಲ್ಲಾ ಘಟಕ ಜುಲೈ 1ರಂದೇ ಕರಡು ಮತದಾರರ ಪಟ್ಟಿ ಪ್ರಕಟಿಸಬೇಕಿತ್ತು. ಆದರೆ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹಾಗೂ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ ಈವರೆಗೆ ಪಟ್ಟಿ ಪ್ರಕಟಿಸದೆ ಲೋಪ ಎಸಗಿದ್ದಾರೆ ಎಂದು ದೂರಿದ್ದಾರೆ.ಲಿಖಿತ ಮನವಿ ಸಲ್ಲಿಸಿದರೂ ಮತದಾರರ ಪಟ್ಟಿ ನೀಡಿಲ್ಲ. ಹೀಗಾಗಿ ಚುನಾವಣಾ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆಯುವುದು ಅನುಮಾನ ಎಂದು ತಿಳಿಸಿದ್ದಾರೆ.

ಪ್ರತಿ ಸಲವೂ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗುವವರೆಗೆ ಯಾರಿಗೂ ಮತದಾರರ ಪಟ್ಟಿ ದೊರೆಯದಂತೆ ಮಾಡಿ, ಸ್ಪರ್ಧಿಸ ಬಯಸುವ ಪ್ರತಿಸ್ಪರ್ಧಿಗಳ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ನೌಕರರ ಹಕ್ಕು ಕಸಿಯುತ್ತಿದ್ದಾರೆ. ವಿರೋಧಿಗಳೇ ಇಲ್ಲದಂತೆ ಮಾಡಿ, ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ತಮ್ಮ ಮೂಗಿನ ನೇರಕ್ಕೆ ಕೆಲಸ ಮಾಡುವವರನ್ನು ಜಿಲ್ಲಾ ಚುನಾವಣಾಧಿಕಾರಿಯಾಗಿ ನೇಮಿಸಿಕೊಂಡು ಮನ ಬಂದಂತೆ ನಿಯಮಕ್ಕೆ ವಿರುದ್ಧವಾಗಿ ಚುನಾವಣೆ ನಡೆಸುತ್ತಿದ್ದಾರೆ. ತಾಲ್ಲೂಕು ಘಟಕಗಳ ನಾಮಪತ್ರ ಪ್ರಕ್ರಿಯೆ ಆರಂಭವಾಗಿದ್ದರೂ, ಜಿಲ್ಲಾ ಚುನಾವಣಾಧಿಕಾರಿ ಯಾರೆಂಬುದ್ದನ್ನು ಗುಪ್ತವಾಗಿ ಇಡಲಾಗಿದೆ. ಸಂಘದ ಕಚೇರಿ ತೆರೆಯದೆ, ದೂರವಾಣಿ ಕರೆ ಸ್ವೀಕರಿಸದೆ, ಸರ್ಕಾರಿ ನೌಕರರ ಭವನಕ್ಕೆ ವಿಚಾರಣೆಗೆ ಹೋದರೆ ಲಭ್ಯವಾಗದೆ ಜಿಲ್ಲೆಯ ನೌಕರರನ್ನು ಕತ್ತಲೆಯಲ್ಲಿ ಇಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರು ನೇಮಿಸಿದ ಜಿಲ್ಲಾ ಚುನಾವಣಾಧಿಕಾರಿ ಬದಲು ಸಹಕಾರ ಇಲ್ಲವೇ ಕಂದಾಯ ಇಲಾಖೆಯ ವಿಭಾಗಮಟ್ಟದ ಅಧಿಕಾರಿಗಳನ್ನು ಚುನಾವಣಾಧಿಕಾರಿಯನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT