ಗುರುವಾರ , ಮಾರ್ಚ್ 30, 2023
21 °C

ಗಡಿ ಭಾಗದ ಮಾದರಿ ಸರ್ಕಾರಿ ಆಸ್ಪತ್ರೆ

ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಔರಾದ್: ನೆರೆಯ ತೆಲಂಗಾಣ ರಾಜ್ಯದ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕಿನ ಚಿಂತಾಕಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಉತ್ತಮ ಆರೋಗ್ಯ ಸೇವೆಯಿಂದ ಗಮನ ಸೆಳೆದಿದೆ.

ಖಾಸಗಿ ಆಸ್ಪತ್ರೆಗಳಿಗೆ ಸರಿ ಸಮಾನವಾದ ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿದೆ. ಇಲ್ಲಿಯ ತುರ್ತು ನಿಗಾ ಘಟಕದಲ್ಲಿ ಸುಧಾರಿತ ಚಿಕಿತ್ಸಾ ಉಪಕರಣಗಳ ಜೊತೆಗೆ ನುರಿತ ವೈದ್ಯ ಸಿಬ್ಬಂದಿ ಇದ್ದಾರೆ.

ಹಾವು ಕಡಿತ, ವಿಷ ಸೇವನೆ, ಅಪಘಾತದಂತಹ ಸಂದರ್ಭದಲ್ಲಿ ತುರ್ತು ಚಿಕಿತ್ಸಾ ಸೇವೆಯ ವ್ಯವಸ್ಥೆ ಇದೆ. ವಾರಕ್ಕೆ ಎರಡು ದಿನ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಯುತ್ತದೆ. 25 ರಿಂದ 30 ಜನ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ.

ಆರು ಹಾಸಿಗೆಯುಳ್ಳ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಆರು ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ನಿತ್ಯ 60ಕ್ಕೂ ಹೆಚ್ಚು ಹೊರ ರೋಗಿಗಳು ಆರೋಗ್ಯ ತಪಾಸಣೆ ಮಾಡಿಕೊಳ್ಳುತ್ತಾರೆ. 8 ರಿಂದ 10 ಮಂದಿ ಒಳ ರೋಗಿಗಳಾಗಿ ಚಿಕಿತ್ಸೆ ನೀಡಲಾಗುತ್ತದೆ.

ಮಹಿಳೆ ಮತ್ತು ಮಕ್ಕಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಹೆರಿಗೆಯಾದವರಿಗೆ ಮತ್ತು ಶಿಶು ಆರೈಕೆಗೆ ಆಧುನಿಕ ಸೌಲಭ್ಯವಿದೆ. ತುರ್ತು ಪರಿಸ್ಥಿತಿಗೆ ಅಗತ್ಯವಾದ ಹೈಟೆಕ್ ಆ್ಯಂಬುಲೆನ್ಸ್ ವ್ಯವಸ್ಥೆಯೂ ಇದೆ. ಆಮ್ಲಜನಕ ಸೇರಿದಂತೆ ಇತರೆ ತುರ್ತು ಚಿಕಿತ್ಸಾ ಸೌಲಭ್ಯ ಹೊಂದಿದೆ.

‘ಆಸ್ಪತ್ರೆಯ ಸ್ವಚ್ಛ ಪರಿಸರ ಮತ್ತು ಸಿಬ್ಬಂದಿ ಕರ್ತವ್ಯನಿಷ್ಠೆ ಗಮನ ಸೆಳೆಯುತ್ತದೆ. ಗ್ರಾಮೀಣ ಪ್ರದೇಶದ ಆಸ್ಪತ್ರೆಯು ರೋಗಿಗಳಿಗೆ ಗುಣಮಟ್ಟದ ಸೇವೆ ನೀಡುತ್ತಿರುವುದನ್ನು ಪರಿಗಣಿಸಿ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಗುಣಮಟ್ಟದ ಮೌಲ್ಯಮಾಪನ ಪ್ರಮಾಣ ಪತ್ರ ಘೋಷಣೆ ಮಾಡಿದೆ. ಈ ಪ್ರಮಾಣ ಪತ್ರ ಪಡೆಯಲು ಅರ್ಹತೆ ಪಡೆದ ಜಿಲ್ಲೆಯ ಮೂರು ಪ್ರಾಥಮಿಕ ಕೇಂದ್ರಗಳ ಪೈಕಿ ಚಿಂತಾಕಿ ಕೇಂದ್ರ ಮೊದಲ ಸ್ಥಾನದಲ್ಲಿದೆ. ಇದು ತಾಲ್ಲೂಕಿಗೆ ಹೆಮ್ಮೆಯ ಸಂಗತಿ’ ಎಂದು ಸ್ಥಳೀಯರು ಹೇಳುತ್ತಾರೆ.

‘ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಸೇವೆ ನೀಡುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಗುರುತಿಸಲು ತಜ್ಞರ ಸಮಿತಿಯನ್ನು  ಕೇಂದ್ರ ಸರ್ಕಾರ ರಚಿಸಿದೆ. ಆ ಸಮಿತಿಯವರು ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು, ರೋಗಿಗಳು, ಸ್ಥಳೀಯರನ್ನು ಮಾತನಾಡಿಸಿ ಮಾಹಿತಿ ಕಲೆ ಹಾಕುತ್ತಾರೆ. ಆ ಮಾಹಿತಿ ಆಧಾರದ ಮೇಲೆ ಪ್ರಮಾಣ ಪತ್ರ ನೀಡಲಾಗುತ್ತದೆ. ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರವು ರಾಜ್ಯದ ಎರಡನೇ ಹಾಗೂ ಜಿಲ್ಲೆಯ ಪ್ರಥಮ ಗುಣಮಟ್ಟದ ಆಸ್ಪತ್ರೆ ಎಂದು ಗುರುತಿಸಿಕೊಂಡಿದೆ’ ಎನ್ನುತ್ತಾರೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಾಯತ್ರಿ.

*ಕೇಂದ್ರದ ಮೌಲ್ಯಮಾಪನದಲ್ಲಿ ಚಿಂತಾಕಿ ಪ್ರಾಥಮಿಕ ಆರೋಗ್ಯ ಕೇಂದ್ರವು ಪ್ರಥಮ ಸ್ಥಾನ ಪಡೆದಿದೆ. ಇದರ ಶ್ರೇಯಸ್ಸು ಆರೋಗ್ಯ ಸಿಬ್ಬಂದಿಗೆ ಸಲ್ಲಬೇಕು

ಡಾ. ಪ್ರವೀಣ ಮಾಸಿಮಾಡೆ, ಔರಾದ್ ತಾಲ್ಲೂಕು ಆರೋಗ್ಯಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.