ಭಾನುವಾರ, ಜನವರಿ 26, 2020
29 °C

ಬೀದರ್: ಜಿಲ್ಲಾ ಕೇಂದ್ರದಲ್ಲೇ ಸರ್ಕಾರಿ ಶಾಲೆಗಳಿಗೆ ದುಃಸ್ಥಿತಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಶಾಲೆಗಳ ಸ್ಥಿತಿ ದಯನೀಯವಾಗಿದೆ. ಹಳ್ಳಿಗಳಿಗಿಂತಲೂ ನಗರದಲ್ಲಿರುವ ಶಾಲೆಗಳ ಸ್ಥಿತಿ ಕೆಟ್ಟದ್ದಾಗಿದೆ. ಪ್ರಾಥಮಿಕ ಶಾಲೆಗಳು ಕೊಳೆಗೇರಿಯಲ್ಲಿನ ಮನೆಗಳಂತಾಗಿವೆ. ಶಿಕ್ಷಣ ಇಲಾಖೆಯಲ್ಲಿನ ಕೆಲ ಭ್ರಷ್ಟರಿಂದಾಗಿ ವಿವಿಧೆಡೆ ಸರ್ಕಾರಿ ಶಾಲೆಯ ಪಕ್ಕದಲ್ಲಿಯೇ ಎರಡೆರಡು ಖಾಸಗಿ ಶಾಲೆಗಳು ತೆರೆದುಕೊಂಡು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಹಂತಕ್ಕೆ ತಲುಪಿವೆ.

ಸರ್ಕಾರಿ ಶಾಲೆಗಳ ದುರ್ನಾತ ವಾತಾವರಣ ನೋಡಿ ಪಾಲಕರು ತಮ್ಮ ಮಕ್ಕಳನ್ನು ಈ ಶಾಲೆಗಳಿಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ಶಾಲೆಗಳು ಅನೇಕ ವರ್ಷಗಳಿಂದ ಸುಣ್ಣ ಬಣ್ಣ ಕಂಡಿಲ್ಲ. ಕೊಠಡಿಗಳಲ್ಲಿ ಕತ್ತಲು ಆವರಿಸಿಕೊಂಡಿದೆ. ಕೆಲ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ನಿಯತ್ತಿನ ಕೊರತೆ ಎದ್ದು ಕಾಣುತ್ತಿದೆ. ಮಕ್ಕಳು ಶಾಲೆಗೆ ಬಾರದಿದ್ದರೂ ಶಿಕ್ಷಕರು ಹಾಗೆಯೇ ಕುಳಿತುಕೊಳ್ಳುತ್ತಿದ್ದಾರೆಯೇ ಹೊರತು ಅವರನ್ನು ಕರೆ ತರುವ ಪ್ರಯತ್ನ ಮಾಡುತ್ತಿಲ್ಲ.

ಹುಮನಾಬಾದ್ ರಸ್ತೆಯಲ್ಲಿರುವ ನೌಬಾದ್‌ನ ಯಲ್ಲಾಲಿಂಗ ಕಾಲೊನಿಯಲ್ಲಿ ಒಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಆದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತೆರಡು ಖಾಸಗಿ ಶಾಲೆಗಳಿಗೆ ಅನುಮತಿ ಕೊಟ್ಟಿದ್ದಾರೆ. ಈ ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದರೂ ಇಲ್ಲಿ ಮಕ್ಕಳು ಕಾಣಸಿಗುವುದೇ ಅಪರೂಪ.

ಶಾಲಾ ಕೊಠಡಿಗಳು ಆಗಲೇ ಬಿರುಕು ಬಿಟ್ಟಿವೆ. ಕಳಪೆ ಕಾಮಗಾರಿಯಿಂದಾಗಿ ಮೆಟ್ಟಿಲಿನ ತಡೆಗೋಡೆ ಬಿದ್ದಿದೆ. ಶಾಲೆಯ ಪ್ರವೇಶ ದ್ವಾರದಲ್ಲೇ ಗಟಾರ ನೀರು ಹರಿಯುತ್ತಿದೆ. 2017ರಲ್ಲಿ ಇಲ್ಲಿ 45 ಮಕ್ಕಳು ಇದ್ದರು. ಆದರೆ ಈಗ ಮಕ್ಕಳೇ ಕಾಣುವುದಿಲ್ಲ. ಇಲ್ಲಿಯ ಶಾಲೆಗೆ ಮಕ್ಕಳು ಬರುವ ಬಗ್ಗೆ ನಿವಾಸಿಗಳಿಗೂ ಅನುಮಾನ ಇದೆ.

ಇಲ್ಲಿಯ ಮುಖ್ಯ ಶಿಕ್ಷಕ ನಗರಸಭೆಗೆ ಒಂದು ಸಣ್ಣ ಅರ್ಜಿ ಕೊಟ್ಟು ಗಟಾರ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುವ ಗೋಜಿಗೆ ಹೋಗಿಲ್ಲ. ಅದೆಲ್ಲ ನಮಗೇಕೆ? ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಈ ವರ್ಷ ಒಬ್ಬ ವಿದ್ಯಾರ್ಥಿ ಮಾತ್ರ ಮೊದಲನೇ ತರಗತಿಗೆ ಪ್ರವೇಶ ಪಡೆದುಕೊಂಡಿದ್ದಾನೆ. ಇದೇ ಈ ಶಾಲೆಯ ಸಾಧನೆ.

ಒಳಕೋಟೆಯಲ್ಲಿ ಕೇವಲ 20 ಮನೆಗಳಿವೆ. ಇಲ್ಲಿಯ ಬಹುತೇಕ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಾರೆ. ಅಚ್ಚರಿಯೆಂದರೆ ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೇ ಕಾಣಸಿಗುವುದಿಲ್ಲ. ಶಿಕ್ಷಕರೊಬ್ಬರು ಆಗಾಗ ಬಂದು ಹೋಗುತ್ತಾರೆ. ಮಕ್ಕಳಿಲ್ಲದ ಶಾಲೆಗೆ ಶಿಕ್ಷಕರು ಏಕೆ ಬಂದು ಹೋಗುತ್ತಾರೆ ಗೊತ್ತಿಲ್ಲ ಎನ್ನುತ್ತಾರೆ ಇಲ್ಲಿಯ ನಿವಾಸಿಗಳು.

ರಂಗರೇಜ್‌ ಗಲ್ಲಿಯಲ್ಲಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕನ್ನಡ ಶಾಲೆ ಒಂದೇ ಕಟ್ಟಡದಲ್ಲಿ ಇವೆ. ಉರ್ದು ಶಾಲೆಯಲ್ಲಿ 42 ಮಕ್ಕಳು ಇರುವ ಕಾರಣ ಹೊಸ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಆವರಣ ಗೋಡೆಯನ್ನು ಕೆಡವಲಾಗಿದೆ.

ನಿರಂತರ ಕುಡಿಯುವ ನೀರು ಯೋಜನೆಯ ಟ್ಯಾಂಕ್‌ ನಿರ್ಮಾಣ ಸಂದರ್ಭದಲ್ಲೂ ಆವರಣ ಗೋಡೆಯ  ಕೆಲ ಭಾಗವನ್ನು ತೆರವುಗೊಳಿಸಲಾಗಿದೆ. ಹೀಗಾಗಿ ಸಂಜೆಯಾಗುತ್ತಲೇ ಶಾಲಾ ಆವರಣದೊಳಗೆ ನಾಯಿಗಳ ಹಿಂಡುಗಳು ಬಂದು ಸೇರುತ್ತಿವೆ. ಆವರಣದಲ್ಲಿ ಸಾಕಷ್ಟು ಹುಲ್ಲು ಬೆಳೆದಿದ್ದು, ಸ್ವಚ್ಛತೆ ಇಲ್ಲಿ ಕಾಣಸಿಗುವುದಿಲ್ಲ. ಶಾಲೆ ಸಂಪೂರ್ಣ ಸ್ವರೂಪ ಕಳೆದುಕೊಂಡಿದೆ.

ಕೆಲ ಕಿಡಿಗೇಡಿಗಳು ಶಾಲಾ ಆವರಣದಲ್ಲೇ ಮಲ ಮೂತ್ರ ವಿಸರ್ಜನೆ ಮಾಡಿ ಹೋಗುತ್ತಿದ್ದಾರೆ. ಕಳ್ಳರು ಬೋರ್‌ವೆಲ್‌ನ ಮೋಟರ್‌ ಕದ್ದು ಒಯ್ದಿದ್ದು, ಕೇಬಲ್‌ ಕತ್ತರಿಸಿದ್ದಾರೆ. ಕನ್ನಡ ಶಾಲೆಯ ಶೌಚಾಲಯ ಸಂಪೂರ್ಣ ಹಾಳಾಗಿದೆ. ಹೀಗಾಗಿ ಉರ್ದು ಹಾಗೂ ಕನ್ನಡ ಶಾಲೆಯ ಶಿಕ್ಷಕರು ತಾವೇ ಹಣ ಖರ್ಚು ಮಾಡಿ ಸರ್ಕಾರಿ ನಳದ ಸಂಪರ್ಕ ಪಡೆದಿದ್ದಾರೆ. 

ಶಹಾಗಂಜ್‌ ಸರ್ಕಾರಿ ಪ್ರಾಥಮಿಕ ಶಾಲೆ, ಸಿದ್ಧರಾಮೇಶ್ವರ ಕಾಲೊನಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆರಳೆಣಿಕೆಯ ಮಕ್ಕಳು ಮಾತ್ರ ಕಾಣಸಿಗುತ್ತಾರೆ. ಇಲ್ಲಿ ಮಕ್ಕಳಿಗೆ ಸರಿಯಾಗಿ ಓದಲು ಸಹ ಬರುವುದಿಲ್ಲ ಎಂದು ಪಾಲಕರು ದೂರುತ್ತಾರೆ.

ನೌಬಾದ್‌ನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅನೇಕ ವರ್ಷಗಳಿಂದ ಸುಣ್ಣಬಣ್ಣ ಕಂಡಿಲ್ಲ. ಇಲ್ಲಿ 9 ಶಿಕ್ಷಕರು 175 ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯು  ಕಟ್ಟಿದ ಶಾಲೆ ಕಟ್ಟಡ ವರ್ಷದಲ್ಲೇ ಸೋರಲು ಆರಂಭಿಸಿದೆ.

ಗೋಡೆಗಳು ಹಸಿಯಾಗಿ ಛಾವಣಿಯ ಸಿಮೆಂಟ್‌ ಕಳಚಿ ಬೀಳುತ್ತಿದೆ. ಕೊಠಡಿಯೊಳಗೆ ಸಾಕಷ್ಟು ಗಾಳಿ, ಬೆಳಕಿನ ವ್ಯವಸ್ಥೆ ಇಲ್ಲ. ಶಾಲಾ ಆವರಣದಲ್ಲಿ ಇರುವ ಹಳೆಯ ಕಟ್ಟಡವನ್ನು ಕೆಡವಿಲ್ಲ. ಹಾಗೆಯೇ ಉಳಿಸಿಕೊಂಡಿರುವ ಕಾರಣ ಮಕ್ಕಳಿಗೆ ಅಪಾಯ ಕಾದಿದೆ.

ಪ್ರತಿಕ್ರಿಯಿಸಿ (+)