ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಸೂರ: ಗ್ರಾಮೀಣ ಸಂತೆಗೆ ಬೇಕಿದೆ ಮೂಲಸೌಕರ್ಯ

ಗುರುಪ್ರಸಾದ ಮೆಂಟೇ
Published 1 ಜನವರಿ 2024, 6:40 IST
Last Updated 1 ಜನವರಿ 2024, 6:40 IST
ಅಕ್ಷರ ಗಾತ್ರ

ಹುಲಸೂರ: ರೈತರು ಮತ್ತು ಕೊಳ್ಳುವವರ ಪಾಲಿಗೆ ವರದಾನವಾಗಿದ್ದ ಗ್ರಾಮೀಣ ಸಂತೆಗಳು ಇಂದು ನೇಪಥ್ಯಕ್ಕೆ ಸರಿದಿವೆ. ಇರುವ ಸಂತೆಗಳಲ್ಲಿ ಮೂಲ ಸೌಕರ್ಯಗಳು ಮರೀಚಿಕೆ ಆಗಿದೆ. ಇದರಿಂದಾಗಿ ಗ್ರಾಮೀಣ ಜನತೆ ಬೆಲ್ಲ ಬೆಳ್ಳುಳ್ಳಿ ಬೇಕು ಎಂದರು ಪಟ್ಟಣಕ್ಕೆ ಹೋಗಿಬರಬೇಕಿದೆ.

ಪಟ್ಟಣ ಸೇರಿ ತಾಲ್ಲೂಕಿನ ಸಮೀಪದ ಮೇಹಕರ, ಅಳವಾಯಿ, ಹಲಸಿ ತುಗಾಂವ, ಸಾಯಗಾಂವ , ಅಟ್ಟರಗಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ದಶಕದಿಂದ ಗ್ರಾಮೀಣ ಸಂತೆ ನಡೆಯುತ್ತಿವೆ. ಆದರೆ ಸಂತೆಗೆ ವ್ಯವಸ್ಥಿತವಾದ ಮಾರುಕಟ್ಟೆ ಇಲ್ಲದಿರುವುದರಿಂದ ಗ್ರಾಹಕರು, ವ್ಯಾಪಾರಿಗಳು ಪ್ರತಿ ವಾರ ಬಿಸಿಲು, ಮಳೆಯಿದ್ದ ರಕ್ಷಣೆ ಪಡೆಯಲು ಟಾರ್ಪಲ್ ಹಾಕಿಕೊಂಡು ವಹಿವಾಟು ನಡೆಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಳ್ಳಿಯ ರೈತರು ಮನೆಯಲ್ಲಿ ಬೆಳೆದ ತರಕಾರಿ, ಹಣ್ಣು ಹಂಪಲುಗಳನ್ನು ನೇರವಾಗಿ ಇಲ್ಲಿಗೆ ತಂದು ಮಾರಾಟ ನಡೆಸುವ ಪರಿಪಾಠ ಹಲವು ದಶಕಗಳಿಂದ ಬೆಳೆದು ಬಂದಿದೆ. ಹೀಗಾಗಿ ಈ ಸಂತೆಗೆ ಗ್ರಾಹಕರು ಕೂಡ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಇಷ್ಟೆಲ್ಲ ಅನುಕೂಲಗಳಿದ್ದರೂ ಸಂತೆಗೆ ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಇದರಿಂದಾಗಿ ಗ್ರಾಹಕರು, ವ್ಯಾಪಾರಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

ಸಂತೆ ಎಂದರೆ ಜನಪದರು ವಾರದ ಒಂದು ನಿರ್ದಿಷ್ಟ ದಿನ, ನಿರ್ದಿಷ್ಟ ಸ್ಥಳದಲ್ಲಿ ಒಟ್ಟುಗೂಡಿ ತಮ್ಮ ಗ್ರಾಮೀಣ ಹುಟ್ಟುವಳಿಗಳನ್ನು ವಿನಿಮಯ ಮಾಡಿಕೊಳ್ಳುವ ಆರ್ಥಿಕ ವ್ಯವಸ್ಥೆ. ಜನಪದ ಗ್ರಾಮೀಣ ಸೊಗಡಿನಲ್ಲಿ ಹುಟ್ಟಿಕೊಂಡು ಬಂದಿದ್ದ ಒಂದು ವ್ಯಾಪಾರ ವ್ಯವಸ್ಥೆಯಿದು. ಆಧುನಿಕ ಯುಗದಲ್ಲೂ ಇವುಗಳ ಪ್ರಾಮುಖ್ಯಕ್ಕೆ ಕಂಡುಬಂದಿಲ್ಲ. ಇಂದಿಗೂ ಗ್ರಾಮೀಣರ ಬಹುಪಾಲು ಬೇಡಿಕೆಗಳನ್ನು ಸಂತೆಗಳು ಪೂರೈಸುತ್ತವೆ.

ಸಂತೆಗಳಲ್ಲಿ ರೈತರು ಹಾಗೂ ವ್ಯಾಪಾರಕ್ಕೆ ಬರುವವರಿಗೆ ಮೂಲ ಸೌಕರ್ಯಗಳ ಕೊರತೆ ಇದೆ. ನೀರು–ನೆರಳಿನ ಆದಿಯಾಗಿ ಯಾವೊಂದು ಸೌಲಭ್ಯಗಳು ಜನ ಸಾಮಾನ್ಯರನ್ನು ತಲುಪಿಲ್ಲ. ದಣಿಯುವ ಕಾರ್ಮಿಕರ ಉಪಚಾರಕ್ಕೆ ವ್ಯವಸ್ಥೆ, ಸಂಪರ್ಕ ರಸ್ತೆಗಳ ಅಭಿವೃದ್ಧಿ ಸಹಿತ ಅಗತ್ಯ ಸೌಲಭ್ಯಗಳು ಬೇಕು ಎನ್ನುವುದು ಜನರ ಆಗ್ರಹವಾಗಿದೆ. ಶೀಘ್ರ ಮೂಲ ಸೌಕರ್ಯಗಳೊಂದಿಗೆ ಸಂತೆ ಮಾರುಕಟ್ಟೆ ನಿರ್ಮಿಸುವ ಕುರಿತು ಸಂಬಂಧಿತರು ಗಮನಹರಿಸಬೇಕಿದೆ.

ಇತರ ಸಮಸ್ಯೆಗಳೇನು? :

  • ಗ್ರಾಮೀಣ ಸಂತೆಯಲ್ಲಿ ಎಲ್ಲಿಯೂ ಶೌಚಾಲಯದ ವ್ಯವಸ್ಥೆ ಇಲ್ಲ.

  • ಮಾರುಕಟ್ಟೆ ಪ್ರದೇಶದಲ್ಲಿ ಒಳಚರಂಡಿ ಇಲ್ಲ.

  • ಸಂತೆಯಲ್ಲಿ ಕುಡಿಯುವ ನೀರಿನ ಘಟಕ ಅಗತ್ಯವಿದೆ.

  • ಸಂತೆಯಲ್ಲಿ ಸ್ವಚ್ಛತೆಯ ಕೊರತೆ ಇದೆ.

ವಾರದ ಸಂತೆಗೆ ಬರುವ ವರ್ತಕರು, ರೈತರಿಗೆ ಕುಡಿಯುವ ನೀರು, ಶೌಚಾಲಯ ಸೌಲಭ್ಯ ಒದಗಿಸಿ ಸಂತೆ ಆರಂಭಿಸಿದರೆ ಒಳ್ಳೆಯದು.ತಾಲ್ಲೂಕಿನ ಹಲವು ಕಡೆಗಳಲ್ಲಿ ಎ.ಪಿ.ಎಂ.ಸಿ. ವತಿಯಿಂದ ಸುಸಜ್ಜಿತ ಸಂತೆ ಮಾರುಕಟ್ಟೆ ನಿರ್ಮಾಣವಾಗಬೇಕಿದೆ.
- ಶಿವರಾಜ ಖಪಲೇ ( ಸಂತೆಯ ಗ್ರಾಹಕ )
ಹಲವಾರು ವರ್ಷದಿಂದ ಇಲ್ಲಿನ ಸಂತೆಯಲ್ಲಿ ವ್ಯಾಪಾರ ನಡೆಸುತ್ತಿದ್ದೇನೆ. ಗ್ರಾಹಕರು ಸಾಕಷ್ಟು ಉತ್ಸಾಹದಿಂದ ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತಾರೆ. ಸಂತೆ ಮಾರುಕಟ್ಟೆ ಕಟ್ಟಡ ನಿರ್ಮಾಣವಾದರೆ ಇನ್ನಷ್ಟು ಅನುಕೂಲವಾಗಲಿದೆ.
- ಮಲ್ಲಪ್ಪಾ ಮೋರಂಬೇ (ತರಕಾರಿ ವ್ಯಾಪಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT