ಶನಿವಾರ, ಜುಲೈ 24, 2021
28 °C
ಸಾರ್ವಜನಿಕರನ್ನು ಆಕರ್ಷಿಸುತ್ತಿರುವ ಕೆರೆ ಪಕ್ಕದ ವಾಕಿಂಗ್‌ ಟ್ರ್ಯಾಕ್‌

ಭಾಲ್ಕಿ: ಸೌಂದರ್ಯ ಹೆಚ್ಚಿಸಿದ ಹಸಿರು

ಬಸವರಾಜ್‌ ಎಸ್‌.ಪ್ರಭಾ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ಇಲ್ಲಿಯ ಅಂಬೇಡ್ಕರ್‌ ವೃತ್ತದಿಂದ ಸ್ವಾಮಿ ವಿವೇಕಾನಂದ ವೃತ್ತ, ಮಹಾತ್ಮ ಗಾಂಧಿ ವೃತ್ತದಿಂದ ಬಸವೇಶ್ವರ ವೃತ್ತ, ಹರಳಯ್ಯ ವೃತ್ತದಿಂದ ಹುಮನಾಬಾದ್‌ ರಸ್ತೆ ಹೊರವಲಯದವರೆಗಿನ ರಸ್ತೆಯ ಡಿವೈಡರ್‌ ಮಧ್ಯೆ ಮತ್ತು ರಸ್ತೆ ಅಕ್ಕಪಕ್ಕ ನೆಟ್ಟಿರುವ ಸುಮಾರು ಎರಡು ಸಾವಿರ ಗಿಡಗಳು ಉತ್ತಮವಾಗಿ ಬೆಳೆದಿದ್ದು, ಪಟ್ಟಣದ ಸೌಂದರ್ಯ ಹೆಚ್ಚಿಸಿವೆ. ಸಾರ್ವಜನಿಕರಿಗೆ ಆಹ್ಲಾದಕರ ವಾತಾವರಣ ಸೃಷ್ಟಿಸಿವೆ.

ಪಟ್ಟಣದ ಮಹಾತ್ಮಗಾಂಧಿ ವೃತ್ತದಿಂದ ಶಿವಾಜಿ ವೃತ್ತ, ಉಪನ್ಯಾಸಕರ ಬಡಾವಣೆ ರಸ್ತೆ, ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಎಲ್ಲ ಅಂಗಡಿ, ಮುಂಗಟ್ಟುಗಳ ಮುಂದೆ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ನೆಟ್ಟಿರುವ ಬಹುತೇಕ ಬೇವಿನ ಗಿಡಗಳು ಇದೀಗ ಮರವಾಗಿ ಬೆಳೆದಿರುವುದರಿಂದ ಪಾದಚಾರಿ ಮಾರ್ಗದ ಮೇಲೆ ನಡೆದಾಡುವ ಜನರಿಗೆ, ಅಂಗಡಿ ನಡೆಸುವವರಿಗೆ ನೆರಳು, ಉತ್ತಮ ಗಾಳಿ ಸಿಗುತ್ತಿದೆ.

ಉತ್ತಮ ಪರಿಸರದಿಂದ ಮನಸ್ಸು ಸದಾಕಾಲ ಶಾಂತ ಹಾಗೂ ಉಲ್ಲಾಸಮಯವಾಗಿರುತ್ತದೆ ಎಂದು ಬೀದಿಬದಿ ವ್ಯಾಪಾರಿ ರಾಮಚಂದ್ರ ಗವಾಳೆ ಸಂತಸದಿಂದ ತಿಳಿಸುತ್ತಾರೆ.

ಪಟ್ಟಣ ಸುಂದರವಾಗಿ ಕಾಣಬೇಕು. ಎಲ್ಲೆಡೆ ಹಸಿರು ವಾತಾವರಣ ನಿರ್ಮಿಸಬೇಕು ಎಂದು ನಾನು ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಕ್ರಿಯಾಯೋಜನೆಯಲ್ಲಿ ಹಣ ಮೀಸಲಿಟ್ಟು, ಯೋಜನೆ ರೂಪಿಸಿ ರಸ್ತೆ ಮಧ್ಯೆ (ಡಿವೈಡರ್‌ನಲ್ಲಿ) ತೆಂಗು ಹಾಗೂ ಹೂವು ಸೇರಿದಂತೆ ವಿವಿಧ ತಳಿಯ ಸುಮಾರು ಎಂಟು ನೂರು ಗಿಡಗಳನ್ನು ನೆಡಲಾಗಿತ್ತು.

ಬೇಸಿಗೆಯಲ್ಲಿ ಗಿಡಗಳಿಗೆ ನೀರಿನ ತೊಂದರೆ ಆಗಬಾರದೆಂದು ಪ್ರಮುಖರಾದ ಚನ್ನಬಸವ ಬಳತೆ ಅವರು ವೈಯಕ್ತಿಕ ಖರ್ಚಿನಲ್ಲಿ ವಾರದಲ್ಲಿ ಎರಡು ಬಾರಿ ಗಿಡಗಳಿಗೆ ನೀರು ಉಣಿಸಿದ್ದಾರೆ. ಈಗ ಕೆಲ ದಿನ ಉತ್ತಮ ಮಳೆ ಆಗಿದ್ದರಿಂದ ಗಿಡಗಳು ಎಲ್ಲೆಡೆ ನಳನಳಿಸುತ್ತಿವೆ ಎಂದು ತಹಶೀಲ್ದಾರ್‌ ಅಣ್ಣಾರಾವ್‌ ಪಾಟೀಲ ತಿಳಿಸಿದರು.

ಉತ್ತಮ ಮಳೆ ಆಗಿರುವುದರಿಂದ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದ್ದು, ಕೆರೆ, ವಾಕಿಂಗ್‌ ಟ್ರ್ಯಾಕ್‌ ಅಕ್ಕಪಕ್ಕದ ಗಿಡಗಳು ಸಮೃದ್ಧವಾಗಿ ಬೆಳೆಯುತ್ತಿದ್ದು, ಭೂಮಿ ತಾಯಿಯೂ ಹಸಿರು ಸೀರೆಯನ್ನುಟ್ಟು ಮಧುವಣಗಿತ್ತಿಯಂತೆ ಸಂಭ್ರಮಿಸುವಂತೆ ಕಂಡು ಬರುತ್ತಿದೆ. ಈ ಮುಂಚೆ ವಾಕಿಂಗ್‌ಗಾಗಿ ಪಟ್ಟಣ ವಾಸಿಗಳು ಹುಮನಾಬಾದ್‌ ರಸ್ತೆ, ಡೋಣಗಾಪೂರ್‌, ಭಾತಂಬ್ರಾ, ಬೀದರ್‌ ರಸ್ತೆ, ಉಪನ್ಯಾಸಕರ ಬಡಾವಣೆ ಹೊರ ವಲಯದ ತಳವಾಡ ರಸ್ತೆಯ ಕಡೆಗೆ ತೆರಳುತ್ತಿದ್ದರು.

2017ರ ಡಿಸೆಂಬರ್‌ ತಿಂಗಳಲ್ಲಿ ಕೆರೆ ಅಭಿವೃದ್ಧಿಗೊಂಡು, ವಾಕಿಂಗ್‌ ಟ್ರ್ಯಾಕ್‌ ನಿರ್ಮಿಸಿರುವುದರಿಂದ ಬಹುತೇಕ ಸಾರ್ವಜನಿಕರು ಬೆಳಿಗ್ಗೆ, ಸಂಜೆ ಕೆರೆಯತ್ತ ಹೆಜ್ಜೆ ಹಾಕುತ್ತಿದ್ದು, ಗೆಳೆಯರಿಗೆ ಪರಸ್ಪರವಾಗಿ ಒಂದೆಡೆ ಸೇರಲು, ಭಾವನೆಗಳನ್ನು ಹಂಚಿಕೊಳ್ಳಲು ತುಂಬಾ ಅನುಕೂಲವಾಗಿದೆ ಎನ್ನುತ್ತಾರೆ ರೈತ ಸಂಘದ ಪ್ರಮುಖ ನಾಗಶೆಟ್ಟೆಪ್ಪಾ ಲಂಜವಾಡೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.