ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರಕೂಡ: ‘ಹಂದರ ಅಂಬಲಿ’ಗೆ ಜನಸಾಗರ

ಹಿರೇಮಠದ ಭಜ್ಜಿ, ಭರತಾದ ಸ್ವಾದಕ್ಕೆ ಮನಸೋತ ಭಕ್ತರು
Last Updated 7 ಜನವರಿ 2020, 10:16 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಹಾರಕೂಡ ಹಿರೇಮಠದಲ್ಲಿ ಈಚೆಗೆ ಆಯೋಜಿಸಿದ್ದ ಲಿಂ.ಚನ್ನಬಸವ ಶಿವಯೋಗಿಗಳ 68 ನೇ ಜಾತ್ರೆಯ ಕೊನೆಯ ದಿನದ ‘ಹಂದರಅಂಬಲಿ’ ಔತಣಕೂಟದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಜಾತ್ರೆ ಹಿನ್ನೆಲೆಯಲ್ಲಿ ಒಂದು ವಾರ ಊರಲ್ಲಿ ಸಂಭ್ರಮ ಮನೆಮಾಡಿತ್ತು. ಪ್ರಥಮ ದಿನ ರಥೋತ್ಸವ ಹಾಗೂ ಶಿವಾನುಭವ ಚಿಂತನಗೋಷ್ಠಿ ಜರುಗಿತು. ಮರುದಿನ ಕುಸ್ತಿ ಸ್ಪರ್ಧೆ ಹಾಗೂ ಮೂರನೇ ದಿನ ಜಾನುವಾರು ಪ್ರದರ್ಶನ ಆಯೋಜಿಸಿ ಕಟ್ಟುಮಸ್ತಾದ ಎತ್ತುಗಳನ್ನು ಆಯ್ಕೆ ಮಾಡಿ ಬಹುಮಾನ ನೀಡಲಾಯಿತು. ಇದಾದ ಐದನೇ ದಿನಕ್ಕೆ ಜಾತ್ರೆಯ ಸಮಾರೋಪದ ಅಂಗವಾಗಿ ಹಂದರಅಂಬಲಿ ಔತಣಕೂಟ ಹಮ್ಮಿಕೊಳ್ಳಲಾಯಿತು.

ಮೊದಲು ಜಾತ್ರೆಯ ವ್ಯವಸ್ಥೆ ನೋಡಿಕೊಂಡವರಿಗೆ ಔತಣಕೂಟ ಏರ್ಪಡಿಸಿ ಧನ್ಯವಾದ ಹೇಳಲಾಗುತ್ತಿತ್ತು. ಆದರೆ, ಕೆಲ ವರ್ಷಗಳಿಂದ ಇದು ಬೃಹತ್ ರೂಪದಲ್ಲಿ ಆಯೋಜನೆ ಆಗುತ್ತಿದೆ. ಗದಗ ತೋಂಟದಾರ್ಯ ಮಠದ ರೊಟ್ಟಿ ಜಾತ್ರೆ, ನಾವದಗಿ ರೇವಪ್ಪಯ್ಯನವರ ಹೋಳಿಗೆ ತುಪ್ಪದ ಜಾತ್ರೆಯಂತೆಯೇ ಇದು ಭಜ್ಜಿ ಭರತಾದ ಕಾರ್ಯಕ್ರಮ ಎಂದೇ ಈ ಭಾಗದಲ್ಲಿ ಪ್ರಸಿದ್ಧವಾಗಿದ್ದು ಈ ಸಲ ಮಹಿಳೆ ಮಕ್ಕಳಾದಿಯಾಗಿ ಅನೇಕ ಭಕ್ತರು ಬಂದಿದ್ದರು.

ದೊಡ್ಡ ದೊಡ್ಡ ಪಾತ್ರೆಗಳಲ್ಲಿ ವಿವಿಧ ಕಾಳು, ತರಕಾರಿ ಸೊಪ್ಪು ಬೆರೆಸಿದ ಭಜ್ಜಿ ಸಿದ್ಧಪಡಿಸಲಾಗಿತ್ತು. ಹಸಿ ಈರುಳ್ಳಿ, ಮೆಣಸಿನಕಾಯಿ, ಎಳ್ಳು ಮಿಶ್ರಣ ಮಾಡಿ ಕುಟ್ಟಿದ್ದ ಭರತಾ, ಹುಗ್ಗಿ, ಅನ್ನ, ಸಜ್ಜಿ, ಜೋಳದ ಕಡಕ್ ರೊಟ್ಟಿಗಳನ್ನು ಊಟಕ್ಕೆ ಬಡಿಸಲಾಯಿತು. ಸಂಜೆಯ ಆಹ್ಲಾದಕರ ವಾತಾವರಣದಲ್ಲಿ ವಿದ್ಯುತ್ ದೀಪದ ಬೆಳಕಿನಲ್ಲಿ ಊಟ ಮಾಡಲಾಯಿತು. ದೂರದೂರದ ಗ್ರಾಮದವರು ಹಾಜರಿದ್ದು ಊಟ ಸವಿದರು. ಮಠಾಧಿಪತಿ ಡಾ.ಚನ್ನವೀರ ಶಿವಾಚಾರ್ಯರು ಸ್ವತಃ ಊಟ ಬಡಿಸಿ ಉದ್ಘಾಟಿಸಿದರು. ಮುಖಂಡರಾದ ಬಾಬು ಹೊನ್ನಾನಾಯಕ್, ಸಿದ್ರಾಮಪ್ಪ ಗುದಗೆ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT