ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಬಾರರ ಜೀವನಾದಾಯಕ್ಕೆ ಕೊಕ್ಕೆ

ಬೇಸಿಗೆ ಮುಗಿಯುತ್ತ ಬಂದರೂ ನಡೆಯದ ಮಡಕೆ ವ್ಯಾಪಾರ
Last Updated 18 ಮೇ 2021, 3:12 IST
ಅಕ್ಷರ ಗಾತ್ರ

ಚಿಟಗುಪ್ಪ: ಕೊರೊನಾ ಲಾಕ್‌ಡೌನ್‌ ವ್ಯವಸ್ಥೆಯಿಂದ ಗುಡಿಕೈಗಾರಿಕೆಗಳು, ಮುಖ್ಯವಾಗಿ ಬೇಸಿಗೆ ಕಾಲದಲ್ಲಿ ಶ್ರಮದಿಂದ ದುಡಿದು ಮಡಕೆ ತಯಾರಿಸಿ ಮಾರಾಟ ಮಾಡುವ ಕುಂಬಾರರ ಅನ್ನಕ್ಕೂ ಕುತ್ತು ತಂದಿದೆ. ಜೀವನಾದಾಯ ಕಸಿದಿದೆ.

ಬೇಸಿಗೆಯಲ್ಲಿಯೇ ಮಡಕೆಗಳ ಹೆಚ್ಚಿನ ಮಾರಾಟ ನಡೆಯುತ್ತದೆ. ಪಟ್ಟಣ, ತಾಲ್ಲೂಕಿನ ನಿರ್ಣಾ, ಮನ್ನಾಎಖ್ಖೇಳಿ, ಬೇಮಳಖೇಡಾ ಗ್ರಾಮಗಳಲ್ಲಿ ಮಡಕೆ ಸಿದ್ಧಪಡಿಸುವ ಕುಂಬಾರರ ಮನೆಯಂಗಳದಲ್ಲಿ ನೂರಾರು ಮಡಕೆಗಳನ್ನು ಮಾರಾಟಕ್ಕೆ ಇಡಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಸಮಸ್ಯೆಯಿಂದಾಗಿ ಮಡಕೆಗಳ ಖರೀದಿಗೆ ಜನರು ಬರುತ್ತಿಲ್ಲ.

‘ಕೊರೊನಾ ನಮ್ಮ ಬದುಕು ಬೀದಿಪಾಲು ಮಾಡಿದೆ. ನಮ್ಮ ಶ್ರಮ ವ್ಯರ್ಥವಾಗಿದೆ’ ಎಂದು ಶಂಕರೆಪ್ಪ ಅಳಲು ತೋಡಿಕೊಂಡರು.

‘ಲಾಕ್‌ಡೌನ್‌ ಘೋಷಣೆಗಿಂತ ಮೊದಲು ಸಾಲ ಮಾಡಿ ಜಿಲ್ಲೆಯ ನೌಬಾದ್, ತೆಲಂಗಾಣ ರಾಜ್ಯದಿಂದ ಸಗಟು ಮಡಕೆಗಳನ್ನು ಖರೀದಿ ಮಾಡಿಕೊಂಡು ತರಲಾಗಿದೆ. ಈಗ ಲಾಕ್‌ಡೌನ್‌ನಿಂದ ವ್ಯಾಪಾರ ಮಾಡಲು ಅವಕಾಶವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೇನು ಮುಂಗಾರು ಆರಂಭವಾಗಲಿದ್ದು, ಆಗ ಮಡಕೆ ಕೇಳುವವರೇ ಇಲ್ಲದಂತಾಗುತ್ತದೆ. ನಮ್ಮ ಸಾಲದ ಮೊತ್ತಕ್ಕೆ ಬಡ್ಡಿ ಕಟ್ಟಬೇಕು. ಖರೀದಿಸಿದ ಮಡಕೆಗಳು ಮಾಡುವುದಾದರೂ ಏನು? ಎಂಬ ಚಿಂತೆ ಶುರುವಾಗಿದೆ’ ಎಂದು ಮಡಕೆ ವ್ಯಾಪಾರಿ ರಮೇಶ್ ನೋವಿನಿಂದ ನುಡಿಯುತ್ತಾರೆ.

‘ಮಣ್ಣಿನ ಮಡಕೆಗಳಿಗೆ ಬಿಸಿಲಿನ ತಾಪ ಹೆಚ್ಚಾದಂತೆ ಬೇಡಿಕೆ ಹೆಚ್ಚುತ್ತದೆ. ಮಣ್ಣಿನ ದೊಡ್ಡ ಹೂಜಿ, ರಂಜಣಿಗೆ, ನಲ್ಲಿ ಪಾತ್ರೆ ಮಡಕೆಗಳಿಗೆ ಈ ಭಾಗದಲ್ಲಿ ಬೇಡಿಕೆ ಹೆಚ್ಚು. ಸಂಘ– ಸಂಸ್ಥೆಗಳು, ನಾಗರಿಕರು ಸೇರುವ ಪ್ರಮುಖ ಸ್ಥಳಗಳಲ್ಲಿ ನೀರಿನ ಅರವಟಿಗೆಗಳನ್ನು ಪ್ರಾರಂಭಿಸಲು ದೊಡ್ಡ ದೊಡ್ಡ ಮಡಕೆಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಇದರಿಂದ ವ್ಯಾಪಾರವೂ ಚೆನ್ನಾಗಿ ನಡೆಯುತ್ತಿತ್ತು. ಈ ಬಾರಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ’ ಎಂದು ಅವರು ಹೇಳಿದರು.

ಮೊದಲು ಹಳ್ಳಿಗಳಲ್ಲಿ ಅಡುಗೆ ಮಾಡಲು, ಹಾಲು ಕಾಯಿಸಲು ಹೀಗೆ ಎಲ್ಲದಕ್ಕೂ ಮಣ್ಣಿನ ಮಡಕೆಗಳನ್ನು ಬಳಸಲಾಗುತ್ತಿತ್ತು. ಇವುಗಳಲ್ಲಿ ಮಾಡಿದ ಅಡುಗೆ ಸ್ವಾದಿಷ್ಟ ಹಾಗೂ ಆರೋಗ್ಯಕ್ಕೂ ಒಳ್ಳೆಯದಾಗಿರುತ್ತಿತ್ತು. ಆದರೆ ಇಂದು ಮಡಕೆ ಕುಡಿಕೆಗಳ ಬಳಕೆ ಕಡಿಮೆ ಆಗಿರುವುದು ವ್ಯಾಪಾರಕ್ಕೆ ಕೊಕ್ಕೆ ಬಿದ್ದಿದೆ.

‘ಬೇಸಿಗೆಯಲ್ಲಿ ನೀರಿನ ದಾಹ ಹೆಚ್ಚಾಗುತ್ತದೆ. ಎಷ್ಟೇ ಬೆಲೆ ಬಾಳುವ ಆಧುನಿಕ ತಂತ್ರಜ್ಞಾನದ ಫ್ರಿಡ್ಜ್‌ನಲ್ಲಿ ಇಟ್ಟಿರುವ ನೀರಿಗೂ ಮಡಕೆ ನೀರಿಗೂ ತುಂಬ ವ್ಯತ್ಯಾಸವಿದೆ. ಮಡಕೆ ನೀರು ತಂಪಾಗಿಯೂ, ಸಿಹಿಯಾಗಿಯೂ ಮುಖ್ಯವಾಗಿ ಆರೋಗ್ಯಕ್ಕೆ ಹಿತವಾಗಿಯೂ ಇರುವುದರಿಂದ ಆಧುನಿಕತೆಯಲ್ಲಿಯೂ ಮಡಕೆಗಳಿಗೆ ಬೆಲೆ ಇದೆ’ ಎಂದು ಗ್ರಾಹಕ ರಾಜದೀಪ್ ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT