ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಂದು ಸಲ ಸಸ್ಪೆಂಡ್‌ ಆಗಿದ್ದೀಯಾ? ಮತ್ತೆ ಆಗಬೇಕಾ?: ಈಶ್ವರ ಖಂಡ್ರೆ

Published 18 ಜೂನ್ 2024, 14:27 IST
Last Updated 18 ಜೂನ್ 2024, 14:27 IST
ಅಕ್ಷರ ಗಾತ್ರ

ಬೀದರ್‌: ‘ಒಂದು ಸಲ ಸಸ್ಪೆಂಡ್‌ ಆಗಿದ್ದೀಯಾ? ಮತ್ತೆ ಸಸ್ಪೆಂಡ್‌ ಆಗಬೇಕಾ? ಒಂದುವೇಳೆ ನೀವು ಅದರಲ್ಲಿ ಶಾಮಿಲಾಗಿದ್ದರೆ ನಿಮ್ಮ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು’

‌ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಮಂಜಪ್ಪ ಎಂಬುವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಮೇಲಿನಂತೆ ಎಚ್ಚರಿಕೆ ನೀಡಿದರು.

ವಿಷಯ ಪ್ರಸ್ತಾಪಿಸಿದ ವಿಧಾನ ಪರಿಷತ್‌ ಸದಸ್ಯ ಭೀಮರಾವ ಪಾಟೀಲ, ಹುಮನಾಬಾದ್‌ನಲ್ಲಿ ಮುಚ್ಚಿದ್ದ ಟೈರ್‌ ಪೈರೋಲಿಸಿಸ್‌ ಘಟಕಗಳು ಮತ್ತೆ ಆರಂಭಗೊಂಡಿವೆ. ಶಾಸಕರ (ಡಾ. ಸಿದ್ದಲಿಂಗಪ್ಪ ಪಾಟೀಲ) ಜಾಗದಲ್ಲೇ ಕಪ್ಪು ಡಸ್ಟ್‌ ಇಟ್ಟಿದ್ದಾರೆ. ಎಲ್ಲ ಓಪನ್‌ ಆಗಿ ನಡೆಯುತ್ತಿದೆ. ಅದಕ್ಕೆ ಅನುಮತಿ ಇದೆಯೇ? ಅದನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದೇ? ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು.

ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಪ್ರತಿಕ್ರಿಯಿಸಿ, ‘ಬ್ಲ್ಯಾಕ್‌ ಡಸ್ಟ್‌’ ಇಟ್ಟಂಗಿಗಳ ತಯಾರಿಕೆಗೆ ಬಳಸಲು ಕೊಂಡೊಯ್ಯುತ್ತಾರೆ’ ಎಂದಷ್ಟೇ ಹೇಳಿದರು. ‘ಯಾರೇ ಮಾಲಿನ್ಯ ಹರಡಿದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಖಂಡ್ರೆ ಹೇಳಿದರು.

ಅದಕ್ಕೆ ಮಂಜಪ್ಪ ಅವರು, ‘ಎಲ್ಲ ಪರಿಶೀಲಿಸಿದ ನಂತರ ಷರತ್ತಿನ ಮೇರೆಗೆ ಹುಮನಾಬಾದ್‌ನಲ್ಲಿ ಐದು ಕೈಗಾರಿಕೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ’ ಎಂದು ತಿಳಿಸಿದರು.

ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿ, ‘ಬೀದರ್‌ ತಾಲ್ಲೂಕಿನ ಕೊಳಾರ (ಕೆ), ಬೆಳ್ಳೂರಾ ಸೇರಿದಂತೆ ಹಲವೆಡೆ ವಿಷಕಾರಕ ರಾಸಾಯನಿಕ ನೆಲದೊಳಗೆ ಬಿಡಲಾಗುತ್ತಿದೆ. ರಾಸಾಯನಿಕ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಿದರೂ ಆರಂಭಗೊಂಡಿಲ್ಲ. ಸುತ್ತಮುತ್ತಲಿನ ಪ್ರದೇಶದ ನೀರು ವಿಷವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT