ಬುಧವಾರ, ಮಾರ್ಚ್ 29, 2023
27 °C
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅಸಮಾಧಾನ

ಜಿಲ್ಲಾ ಕನ್ನಡ ಭವನಕ್ಕೆ ಅನುದಾನ ಕೊಡಲು ಹಿಂದೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಸಂಘ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಹಂಚಿಕೆ ಮಾಡುತ್ತಿರುವ ಸರ್ಕಾರ ಜಿಲ್ಲಾ ಕನ್ನಡ ಭವನ ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ಕೊಡಲು ಹಿಂದೇಟು ಹಾಕುತ್ತಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಜಗೀರಾದ ಮಾತೃಭೂಮಿ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಾಂಸ್ಕೃತಿಕ ಚಟುವಟಿಕೆ ಮೂಲಕ ಕನ್ನಡ ಕಲಿಕೆ ಕನ್ನಡ ಸ್ವಯಂ ಶಿಕ್ಷಕ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಭವನಕ್ಕೆ ₹ 1 ಕೋಟಿ ಮಂಜೂರು ಮಾಡಿ ವಾಪಸ್‌ ಪಡೆದಿದೆ. ಒಂದು ವರ್ಷದಿಂದ ಜಿಲ್ಲಾ ಕೇಂದ್ರದಲ್ಲಿರುವ ಕನ್ನಡ ಭವನದದ ಕಾಮಗಾರಿ ಸ್ಥಗಿತಗೊಂಡಿದೆ. ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಕೇಳಿದರೆ ಸರ್ಕಾರದ ಬಳಿ ಹಣವೇ ಇಲ್ಲವೆಂದು ಹೇಳುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲಾ ಕನ್ನಡ ಭವನ ಇಡೀ ಕನ್ನಡಿಗರಿಗೆ ಸಂಬಂಧಿಸಿದ್ದಾಗಿದೆ. ಯಾವುದೋ ಒಂದು ಸಮುದಾಯ ಅಥವಾ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಆದರೆ, ಕನ್ನಡ ಭವನದ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಆಸಕ್ತಿ ತೋರಿಸುತ್ತಿರುವುದು ಗಡಿನಾಡ ಜನರಿಗೆ ನೋವು ತಂದಿದೆ’ ಎಂದು ಬೇಸರ ವ್ಯಕ್ತ‍ಪಡಿಸಿದರು.

‘ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕನ್ನಡದ ಕಾಳಜಿ ಮೆಚ್ಚುವಂಥದ್ದಾಗಿದೆ. ಎರಡು ರಾಜ್ಯಗಳಿಗೆ ಗಡಿ ಹಂಚಿಕೊಂಡಿರುವ ಬೀದರ್‌ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಕನ್ನಡದ ಉತ್ತೇಜನಕ್ಕೆ ಅರ್ಥಪೂರ್ಣವಾದ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದೆ. ಇದು ಇಲ್ಲಿಗೆ ಮುಕ್ತಾಯವಾಗಬಾರದು. ಬೀದರ್‌ ಜಿಲ್ಲೆಯಿಂದ ಆರಂಭವಾಗಿರುವ ಈ ಯೋಜನೆ ರಾಜ್ಯದ ಎಲ್ಲ ಗಡಿ ಜಿಲ್ಲೆಗಳಲ್ಲೂ ವಿಸ್ತರಣೆಯಾಗಬೇಕು’ ಎಂದು ಮನವಿ ಮಾಡಿದರು.

‘ಕನ್ನಡ ಉಳಿಯಲು ನಾಡಿನಲ್ಲಿರುವ ಕನ್ನಡ ಶಾಲೆಗಳು ಉಳಿಯಬೇಕು. ಕನ್ನಡ ಅನ್ನದ ಭಾಷೆಯಲ್ಲ ಎಂಬ ಜನರಲ್ಲಿನ ಭಾವನೆ ಅಳಿಯಬೇಕು. ಕನ್ನಡ ಸ್ವಯಂ ಶಿಕ್ಷಕ ಯೋಜನೆಯನ್ನು ನಿಲ್ಲಿಸದೇ ಮುಂದುವರಿಸಬೇಕು’ ಎಂದು ಮನವಿ ಮಾಡಿದರು.

‘ಸಾಂಸ್ಕೃತಿಕ ಚಟುವಟಿಕೆ ಮೂಲಕ ಕನ್ನಡ ಕಲಿಕೆ ಕನ್ನಡ ಸ್ವಯಂ ಶಿಕ್ಷಕ ಯೋಜನೆಯಡಿ ನೇಮಕಗೊಂಡ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳಬೇಕಾಗಿದೆ. ನೆಲ ಮೂಲದ ಸಂಸ್ಕೃತಿ ನೆಲೆಗೊಳ್ಳಲು ಕನ್ನಡ ಸ್ವಯಂ ಶಿಕ್ಷಕರನ್ನು ಖಾಸಗಿ ಶಾಲೆಗಳಲ್ಲಿ ನಿಯೋಜಿಸಿಕೊಳ್ಳಲು ಸಾಧ್ಯವಿರುವ ಪ್ರಯುತ್ನ ಮಾಡಲಾಗುವುದು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು