ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಸಿಕೊಳ್ಳದ ಹೋಟೆಲ್ ಉದ್ಯಮ

ಕೊರೊನಾ ಸೋಂಕಿನ ಭಯ; ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿರುವ ಹೋಟೆಲ್‌ಗಳು
Last Updated 9 ಜುಲೈ 2020, 8:10 IST
ಅಕ್ಷರ ಗಾತ್ರ

ಚಿಟಗುಪ್ಪ: ಲಾಕ್‌ಡೌನ್ ಸಡಿಲ ಮಾಡಿದ ನಂತರ ಹೋಟೆಲ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೂ ಜನರು ಹೋಟೆಲ್‌ಗಳತ್ತ ಸುಳಿಯುತ್ತಿಲ್ಲ.

ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ನಿರ್ಣಾ, ಮನ್ನಾಎಖ್ಖೇಳಿ, ಬೇಮಳಖೇಡಾ, ಚಾಂಗಲೇರಾ ಸೇರು ವಿವಿಧೆಡೆ ಹೋಟೆಲ್‌ಗಳನ್ನು ಆರಂಭಿಸಲಾಗಿದೆ. ಆದರೆ, ಗ್ರಾಹಕರ ಸಂಖ್ಯೆ ಮಾತ್ರ ನಿರೀಕ್ಷಿಸಿದಷ್ಟು ಇಲ್ಲ. ಹೀಗಾಗಿ ಹೋಟೆಲ್‌ಗಳಲ್ಲಿ ಮೊದಲಿನಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುತ್ತಿಲ್ಲ.

‘ಹೋಟೆಲ್‌ಗಳಲ್ಲಿ ಕುಳಿತು ಊಟ, ಉಪಾಹಾರ ಮಾಡಲು ಸರ್ಕಾರ ಅನುಮತಿ ನೀಡಿದೆ. ಆದರೆ, ಜನರಲ್ಲಿ ಇನ್ನೂ ಕೊರೊನಾ ಸೋಂಕಿನ ಭಯ ನಿವಾರಣೆ ಆಗಿಲ್ಲ. ಸದ್ಯ ದಿನಕ್ಕೆ 40–50 ಗ್ರಾಹಕರು ಮಾತ್ರ ಬರುತ್ತಿದ್ದಾರೆ’ ಎಂದು ರೇವಣಸಿದ್ದೇಶ್ವರ ಹೋಟೆಲ್ ಮಾಲೀಕ ಪ್ರಭಾಕರ್ ತಿಳಿಸಿದರು.

ಶಾಲಾ–ಕಾಲೇಜುಗಳೂ ಇನ್ನು ಪ್ರಾರಂಭವಾಗಿಲ್ಲ. ಸರ್ಕಾರಿ ನೌಕರರು, ಬ್ಯಾಂಕ್‌, ಅಂಚೆ ಕಚೇರಿಯ ಉದ್ಯೋಗಿಗಳು ಮಾತ್ರ ಕಚೇರಿಗಳಿಗೆ ಬರುತ್ತಿದ್ದಾರೆ. ಅವರೂ ತಮ್ಮ ಜತೆಯಲ್ಲಿ ಮನೆಯಿಂದ ಊಟ ತರುತ್ತಿದ್ದಾರೆ. ಹೀಗಾಗಿ ಮಧ್ಯಾಹ್ನದ ವೇಳೆ ಹೋಟೆಲ್‌ಗಳು ಬಿಕೋ ಎನ್ನುತ್ತಿವೆ.

ಕೊರೊನಾ ವೈರಸ್‌ ನಿಯಂತ್ರಣಕ್ಕೆ ಅನಗತ್ಯವಾಗಿ ಮನೆಯಿಂದ ಹೊರಗೆ ಬಾರದಂತೆ ಸಲಹೆ ನೀಡಲಾಗುತ್ತಿದೆ. ಅದರಲ್ಲೂ ಲಾಕ್‌ಡೌನ್‌ ಅವಧಿಯಲ್ಲಿ ಬಹುತೇಕ ಮಂದಿ ಮನೆಯ ಆಹಾರಕ್ಕೆ ಒಗ್ಗಿಕೊಂಡಿದ್ದಾರೆ. ಹೀಗಾಗಿ ಹೋಟೆಲ್ ಆಹಾರದ ಗೋಜಿಗೆ ಹೋಗುತ್ತಿಲ್ಲ.
ಅದಾಗ್ಯೂ ಹೋಟೆಲ್‌ ತಿಂಡಿ ಬೇಕಾದವರು ಪಾರ್ಸೆಲ್‌ ಮಾತ್ರ ತೆಗೆದುಕೊಂಡು ಹೋಗುತ್ತಿದ್ದಾರೆ.

‘ಲಾಕ್‌ಡೌನ್‌ ಅವಧಿಯಲ್ಲಿ ನನ್ನ ಆಹಾರ ಪದ್ಧತಿ ಬದಲಿಸಿಕೊಂಡಿದ್ದೇನೆ. ಇದೀಗ ಹೋಟೆಲ್‌ಗಳು ಆರಂಭವಾಗಿದ್ದರೂ, ಮನೆಯ ಊಟವೇ ಉತ್ತಮ ಎನಿಸುತ್ತಿದೆ. ಮನೆಯಲ್ಲಿಯೇ ಬಗೆ ಬಗೆಯ ತಿಂಡಿ, ತಿನಿಸುಗಳನ್ನು ಮಾಡಿಕೊಂಡು ತಿನ್ನುವ ಅಭ್ಯಾಸ ಮೈಗೂಡಿಸಿಕೊಂಡಿದ್ದರಿಂದ ಹೋಟೆಲ್‌ಗೆ ಹೋಗುತ್ತಿಲ್ಲ’ ಎಂದು ಖಾಸಗಿ ಉದ್ಯೋಗಿ ಪ್ರಕಾಶ್ ತಿಳಿಸಿದರು.

ಕೊರೊನಾ ಭೀತಿಯ ನಡುವೆಯೂ ಹೋಟೆಲ್‌ಗಳನ್ನು ಆರಂಭಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಹೋಟೆಲ್‌ಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕು. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರಾದ ಮಲ್ಲಿಕಾರ್ಜುನ ಪಾಟೀಲ ಒತ್ತಾಯಿಸಿದರು.

ಪಾಲನೆಯಾಗದ ನಿಯಮ: ಕೊರೊನಾ ವೈರಸ್ ಭೀತಿ ಇದ್ದರೂ ತಾಲ್ಲೂಕು, ಹೋಬಳಿ, ಗ್ರಾಮೀಣ ಪ್ರದೇಶಗಳಲ್ಲಿ ಹೋಟೆಲ್‌ಗಳ ಮಾಲಿಕರು ಹೋಟೆಲ್‌ಗಳಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.

ಗ್ರಾಹಕರಿಗೆ ಕೈ ತೊಳೆಯಲು ಸ್ಯಾನಿಟೈಸರ್‌, ಸಾಬೂನು ನೀಡುತ್ತಿಲ್ಲ. ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂಬುದು ಗ್ರಾಹಕರ ದೂರು.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಗ್ರಾಹಕರು ಸ್ಟೀಲ್ ತಟ್ಟೆ, ಲೋಟಗಳನ್ನು ಬಳಸಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಕೆಲವು ಹೋಟೆಲ್‌ಗಳಲ್ಲಿ ಪೇಪರ್‌ ತಟ್ಟೆ, ಲೋಟ ಬಳಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT