ಸೋಮವಾರ, ಸೆಪ್ಟೆಂಬರ್ 27, 2021
22 °C
ಜಲ ಜೀವನ ಮಿಷನ್ ಕಾರ್ಯಾಗಾರ: ಡಾ.ನಂದಕುಮಾರ ತಾಂದಳೆ ಮಾಹಿತಿ

135 ಗ್ರಾಮಗಳಲ್ಲಿ ಮನೆ ಮನೆಗೆ ನಳ ಸಂಪರ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: 2019-20ನೇ ಸಾಲಿನ ಜಲ ಜೀವನ ಮಿಷನ್ ಯೋಜನೆಯಡಿ ಶುದ್ಧ ಕುಡಿಯುವ ನೀರು ಪೂರೈಸಲು ಜಿಲ್ಲೆಯ 135 ಗ್ರಾಮಗಳಲ್ಲಿ ಮನೆ ಮನೆಗೆ ನಿರಂತರ ನಳ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಜಲ ಜೀವನ ಮಿಷನ್ ಯೋಜನೆ ತಂಡದ ನಾಯಕ ಡಾ. ನಂದಕುಮಾರ ತಾಂದಳೆ ಹೇಳಿದರು.

ಜಲ ಜೀವನ ಮಿಷನ್ ಯೋಜನೆ ಕುರಿತು ಹುಮನಾಬಾದ್ ಹಾಗೂ ಚಿಟಗುಪ್ಪ ತಾಲ್ಲೂಕುಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹುಮನಾಬಾದ್‍ನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 639 ಗ್ರಾಮಗಳು ಇವೆ. 2020-21ನೇ ಸಾಲಿನ ಯೋಜನೆಯಡಿ 150 ರಿಂದ 200 ಗ್ರಾಮಗಳನ್ನು ಆಯ್ಕೆ ಮಾಡಲಾಗುವುದು. ನಂತರ ಹಂತ ಹಂತವಾಗಿ ಉಳಿದ ಗ್ರಾಮಗಳಲ್ಲೂ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

ಯೋಜನೆಯಡಿ ಮನೆ ಮನೆಗೆ ನಿರಂತರ ನಳ ಸಂಪರ್ಕ ಕಲ್ಪಿಸಿ, ಮೀಟರ್ ಅಳವಡಿಸಿ, ದಿನವೊಂದಕ್ಕೆ ಪ್ರತಿ ವ್ಯಕ್ತಿಗೆ 55 ಲೀಟರ್ ಹಾಗೂ ಪ್ರತಿ ಜಾನುವಾರಿಗೆ 30 ಲೀಟರ್ ನೀರು ಒದಗಿಸಲಾಗುವುದು ಎಂದು ಹೇಳಿದರು.

2025 ರ ವೇಳೆಗೆ ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನೀರು ಸರಬರಾಜು ಮಾಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆಯ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಯೋಜನೆಯ ಒಟ್ಟು ಅನುಷ್ಠಾನ ವೆಚ್ಚದಲ್ಲಿ ಗ್ರಾಮ ಪಂಚಾಯಿತಿಯ 15ನೇ ಹಣಕಾಸು ನಿಧಿಯ ವಂತಿಕೆ ಶೇ 15, ಸಮುದಾಯದ ವಂತಿಕೆ ಶೇ 10 ರಷ್ಟು ಇರಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಶೇ 37.5 ರಷ್ಟು ಅನುದಾನ ಕೊಡಲಿದೆ ಎಂದು ತಿಳಿಸಿದರು.

ಯೋಜನೆಯಡಿ ಬಳಕೆಯ ನಂತರ ವ್ಯರ್ಥವಾಗಿ ಹೋಗುವ ನೀರಿನ ಮರು ಬಳಕೆಗೆ ಶುದ್ಧೀಕರಣ ಘಟಕ, ಮನೆಗಳಲ್ಲಿ ಇಂಗು ಗುಂಡಿ, ದನ ಕರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಾಣ ಹಾಗೂ ಜಲ ಮೂಲಗಳ ಪುನಃಶ್ಚೇತನಕ್ಕೂ ಅವಕಾಶ ಇದೆ ಎಂದು ವಿವರಿಸಿದರು.

ಗ್ರಾಮೀಣ ಜನರಿಗೆ ಯೋಜನೆಯ ಬಗ್ಗೆ ತಿಳಿವಳಿಕೆ ನೀಡಬೇಕು. ಸಮುದಾಯದ ಸಹಭಾಗಿತ್ವದೊಂದಿಗೆ ಯೋಜನೆ ಯಶಸ್ವಿಗೆ ಶ್ರಮಿಸಬೇಕು ಎಂದು ಹುಮನಾಬಾದ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾವ್ ಹೇಳಿದರು.

ಜಲ ಜೀವನ ಮಿಷನ್ ಯೋಜನೆಯ ಮಾರ್ಗಸೂಚಿ ಹಾಗೂ ಉದ್ದೇಶ ಕುರಿತು ಜಲ ಜೀವನ ಮಿಷನ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ಪೇತ್ರು ಮಾತನಾಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಹುಮನಾಬಾದ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದತ್ತಾತ್ರಿ ಮೇದಾ, ವೈದ್ಯಾಧಿಕಾರಿ ನಾಗನಾಥ ಹುಲಸೂರೆ, ಸಂಪನ್ಮೂಲ ವ್ಯಕ್ತಿ ಸಿರಾಜ್, ತರಬೇತಿ ಪರಿಣಿತರಾದ ದಿಲೀಪಕುಮಾರ, ಅರ್ಚನಾ, ಮಾಹಿತಿ ಶಿಕ್ಷಣ ಸಂವಹನ ಪರಿಣಿತೆ ಪ್ರಿಯಂಕಾ, ಎಂಜಿನಿಯರ್ ಸಚ್ಚಿದಾನಂದ, ಅರ್ಚನಾ, ಓಂಕಾರ ಹಿರೇಮಠ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು