ಬುಧವಾರ, ಜನವರಿ 22, 2020
16 °C
ರೈತ ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಸೂಚನೆ

ಕೃಷಿ ಯೋಜನೆ ಪಾರದರ್ಶಕ ಅನುಷ್ಠಾನಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: ‘ಕೃಷಿಗೆ ಸಂಬಂಧಿಸಿದ ಯೋಜನೆಗಳನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ರೈತ ದಿನಾಚರಣೆ ಪ್ರಯುಕ್ತ ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ರೈತ, ವಿಜ್ಞಾನಿ, ಅಧಿಕಾರಿಗಳ ಸಂವಾದ ಹಾಗೂ ಕೃಷಿ ತಾಂತ್ರಿಕತೆಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಗರೀಕರಣ ಹಾಗೂ ವ್ಯಾಪಾರೀಕರಣದ ಪರಿಣಾಮವಾಗಿ ಇಂದು ಕೃಷಿ ಭೂಮಿ ಕಡಿಮೆಯಾಗುತ್ತಿದೆ. ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಂಬಂಧಿಸಿದ ಇಲಾಖೆಗಳು ರೈತರ ಬೆಂಬಲಕ್ಕೆ ನಿಲ್ಲಬೇಕು’ ಎಂದು ತಿಳಿಸಿದರು.

ಕೃಷಿ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ ಬಿರಾದಾರ ಮಾತನಾಡಿ, ‘ದೇಶಕ್ಕೆ ಅನ್ನ ನೀಡುವ ರೈತರನ್ನು ಸ್ಮರಿಸುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಜನ್ಮದಿನದಂದು ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ’ ಎಂದು ಹೇಳಿದರು.

‘ಕಡಿಮೆ ಬಂಡವಾಳದಲ್ಲಿ ಹೆಚ್ಚು ಇಳುವರಿ ಪಡೆಯಲು ರೈತರು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ ಮಾತನಾಡಿ, ‘ಬೀದರ್‌ನಲ್ಲಿ ರೈತರನ್ನು ಕೃಷಿಯತ್ತ ಆಕರ್ಷಿಸುವಂತಹ ಸೃಜನಾತ್ಮಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿಯ ಇನ್ನೊಬ್ಬರು ಸದಸ್ಯೆ ತಾರಾಬಾಯಿ ಲಕ್ಷ್ಮಣ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಗತಿ ಪರ ರೈತರು ಕೃಷಿಯಲ್ಲಿ ಯಶಸ್ಸಿಗೆ ತಾವು ಅನುಸರಿಸಿದ ಮಾರ್ಗವನ್ನು ಬಿಡಿಸಿಟ್ಟರು.

ಪ್ರಗತಿ ಪರ ರೈತರಾದ ಬಗದಲ್‌ನ ಗುಲಾಮ್ ಖಾದ್ರಿ, ಚಿಟ್ಟಾದ ಕಾಶಿಲಿಂಗ ಮತ್ತು ಜಾಫರ್, ಭಾಲ್ಕಿ ತಾಲ್ಲೂಕಿನ ನೇಳಗಿಯ ಅಂತೇಶ್ವರ ವರ್ದಾ ಮತ್ತು ಕುಂಟೆಸಿರ್ಸಿಯ ಸತೀಶ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಕೃಷಿ ಕುರಿತ ಸಮಸ್ಯೆ ಹಾಗೂ ಪರಿಹಾರೋಪಾಯಗಳಿಗೆ ಸಂಬಂಧಿಸಿದಂತೆ ರೈತರು, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಂವಾದ ನಡೆಯಿತು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಜಕುಮಾರ ಪಾಟೀಲ, ಸದಸ್ಯ ರವಿಕುಮಾರ, ರೈತ ಮುಖಂಡ ದಯಾನಂದ ಸ್ವಾಮಿ, ಅಧಿಕಾರಿಗಳಾದ ಮಾಜಿದ್, ಎಂ.ಎ.ಕೆ.ಅನ್ಸಾರಿ, ಆತ್ಮ ಯೋಜನೆಯ ಅಧಿಕಾರಿ ಜಾಲಿಂದರ್, ತೋಟಗಾರಿಕೆ ಇಲಾಖೆಯ ಸುನಿಲ್, ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಸುನೀಲ್ ಕುಲಕರ್ಣಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಆರ್.ಎಲ್.ಜಾಧವ್, ಡಾ.ಅಕ್ಷಯಕುಮಾರ್, ಡಾ.ರಾಜೇಶ್ವರಿ.ಆರ್ ಉಪಸ್ಥಿತರಿದ್ದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್‌.ಎಂ. ಸ್ವಾಗತಿಸಿದರು. ಡಾ.ಮಲ್ಲಿಕಾರ್ಜುನ ನಿಂಗದಳ್ಳಿ ನಿರೂಪಿಸಿದರು. ಸಹಾಯಕ ಕೃಷಿ ನಿರ್ದೇಶಕ ಮಾರ್ಥಂಡ ವಂದಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು