ಗುರುವಾರ , ಜೂನ್ 30, 2022
24 °C
ನುಗ್ಗೆಕಾಯಿ ದರ ಹೆಚ್ಚಳ, ಇಳಿದ ತೊಂಡೆಕಾಯಿ

ಪ್ರಮುಖ ತರಕಾರಿ ಬೆಲೆ ಜಿಗಿತ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಗೆ ಮುಂಗಾರು ಪ್ರವೇಶಿಸಲು ಇನ್ನೂ ಎರಡು ವಾರ ಇವೆ. ಒಮ್ಮೆ ಮಾತ್ರ ಅಕಾಲಿಕ ಮಳೆ ಅಬ್ಬರಿಸಿದೆ. ಅಲ್ಲಲ್ಲಿ ಸಾಧಾರಣ ಮಳೆ ಸುರಿದರೂ ಸೆಕೆ ಕಡಿಮೆಯಾಗಿಲ್ಲ. ಬೇಸಿಗೆ ಕಾರಣ ಮಾರುಕಟ್ಟೆಗೆ ಹೆಚ್ಚು ತರಕಾರಿ ಬರುತ್ತಿಲ್ಲ. ಇದೇ ಕಾರಣಕ್ಕೆ ಹಲವು ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ.

ಹಸಿ ಮೆಣಸಿನಕಾಯಿ ಹಾಗೂ ನುಗ್ಗೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 4 ಸಾವಿರ ಹೆಚ್ಚಾಗಿದೆ. ನುಗ್ಗೆಕಾಯಿ ಸಾರಿಗೆ ಹೆಚ್ಚು ಬೇಡಿಕೆ ಇರುವ ಕಾರಣ ಬಹುತೇಕ ಮದುವೆ ಸಮಾರಂಭಗಳಲ್ಲಿ ನುಗ್ಗೆಕಾಯಿ ಸಾರು ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಮಳೆಯೂ ಆರಂಭ ವಾಗುವ ಕಾರಣ ಇನ್ನು ದೇಹ ದಲ್ಲಿ ಒಂದಿಷ್ಟು ಉಷ್ಣಾಂಶ ಕಾಯ್ದು ಕೊಳ್ಳಬೇಕಿದೆ. ಬಹುಶಃ ಇದೇ ಕಾರಣ ನುಗ್ಗೆ ಕಾಯಿ ಬೆಲೆಯ ಅಟ್ಟ ಏರಿ ಕುಳಿತಿದೆ.

ಟೊಮೆಟೊ, ಡೊಣ ಮೆಣಸಿನ ಕಾಯಿ, ಮೆಂತೆ ಸೊಪ್ಪು, ಕೊತಂಬರಿ ಬೆಲೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರ, ಗಜ್ಜರಿ, ಬೆಳ್ಳುಳ್ಳಿ , ಎಲೆಕೋಸು ₹ 1 ಸಾವಿರ ಹೆಚ್ಚಳವಾಗಿದೆ. ಟೊಮೆಟೊ ಬೇಸಿಗೆ ಮುಗಿಯುವ ಹಂತದಲ್ಲಿ ಇನ್ನಷ್ಟು ಕೆಂಪಾಗಿ ಮಾರುಕಟ್ಟೆಯಲ್ಲಿ ಶತಕ ಬಾರಿಸಿದೆ.

ಬೀನ್ಸ್‌ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 6 ಸಾವಿರ ಇಳಿದಿದೆ. ತೊಂಡೆಕಾಯಿ ₹ 2 ಸಾವಿರ, ಕರಿಬೇವು ಹಾಗೂ ಚವಳೆ ಕಾಯಿ ಬೆಲೆಯಲ್ಲಿ ₹ 1 ಸಾವಿರ ಕಡಿಮೆ ಯಾಗಿದೆ. ಈರುಳ್ಳಿ,  ಆಲೂಗಡ್ಡೆ, ಬೀಟ್‌ ರೂಟ್‌, ಬದನೆಕಾಯಿ, ಬೆಂಡೆಕಾಯಿ, ಹಿರೇಕಾಯಿ, ಪಾಲಕ್‌, ಹೂಕೋಸು ಹಾಗೂ ಸಬ್ಬಸಗಿ ಬೆಲೆ ಸ್ಥಿರವಾಗಿದೆ.

ಹೋಟೆಲ್‌, ಖಾನಾವಳಿಗಳಲ್ಲಿ ಬೆಲೆ ಕಡಿಮೆ ಇರುವ ಆಲೂಗಡ್ಡೆ, ಬೀಟ್‌ರೂಟ್‌ ಪಲ್ಯ ತಯಾರಿಸಲಾಗುತ್ತಿದೆ. ಬಹುಬೇಡಿಕೆಯ ಬದನೆಕಾಯಿ ಪ್ರತಿ ಕ್ವಿಂಟಲ್‌ಗೆ ₹ 3 ಸಾವಿರಕ್ಕೆ ಮಾರಾಟವಾಗಿದೆ. ತರಕಾರಿ ರಾಜ ತುರಾಯಿ ಬೆಳೆಸಿಕೊಂಡ ತರಕಾರಿ ಸಾಲಿನಲ್ಲೇ ಕುಳಿತುಕೊಳ್ಳುವಂತಾಗಿದೆ.

ಬೆಳಗಾವಿ ಪರಿಸರದಲ್ಲಿ ಒಂದು ವಾರದಿಂದ ಮಳೆ ಸುರಿಯುತ್ತಿರುವ ಕಾರಣ ಹಸಿ ಮೆಣಸಿನಕಾಯಿ ಬೆಲೆ ಪ್ರತಿ ಕೆ.ಜಿ.ಗೆ ದಿಢೀರ್‌ ₹ 100ಗೆ ಏರಿಕೆಯಾಗಿದೆ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ತುಮಕೂರಿನಿಂದ ಟೊಮೆಟೊ, ಬೆಳಗಾವಿಯಿಂದ ಮೆಣಸಿನಕಾಯಿ, ಹೈದರಾಬಾದ್‌ನಿಂದ ನುಗ್ಗೆಕಾಯಿ, ಡೊಣ ಮೆಣಸಿನಕಾಯಿ, ಗಜ್ಜರಿ, ಬೀಟ್‌ರೂಟ್‌, ತೊಂಡೆಕಾಯಿ, ಚವಳೆಕಾಯಿ, ಬೂದು ಕುಂಬಳಕಾಯಿ ಬೀದರ್‌ ತರಕಾರಿ ಸಗಟು ಮಾರುಕಟ್ಟೆಗೆ ಆವಕವಾಗಿದೆ. ಚಿಟಗುಪ್ಪ ಹಾಗೂ ಭಾಲ್ಕಿ ತಾಲ್ಲೂಕಿನಿಂದ ಬದನೆಕಾಯಿ, ಎಲೆಕೋಸು, ಹಿರೇಕಾಯಿ, ಸಬ್ಬಸಗಿ ಹಾಗೂ ಕರಿಬೇವು ನಗರದ ಮಾರುಕಟ್ಟೆಗೆ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು