ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಕಡಲೆ ಬಿಡಿ, ಜೋಳ, ತೊಗರಿ ಕೊಡಿ

ಗಡಿ ಗ್ರಾಮಗಳಲ್ಲಿ ಮೊದಲು ಥಂಬ್, ನಂತರ ಧಾನ್ಯ
Last Updated 27 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ಪಡಿತರ ಚೀಟಿದಾರರಿಗೂ ಜೋಳ ಹಾಗೂ ತೊಗರಿ ಕೊಡಬೇಕು ಎನ್ನುವ ಬೇಡಿಕೆ ಯಾವತ್ತೂ ಇದೆ. ಆದರೆ, ಸರ್ಕಾರದ ಮಟ್ಟದಲ್ಲಿ ಕಾಲ ಕಾಲಕ್ಕೆ ಬದಲಾಗುವ ನೀತಿಗಳಿಂದಾಗಿ ಬೇಡಿಕೆಗೆ ಅನುಗುಣವಾಗಿ ಫಲಾನುಭವಿಗಳಿಗೆ ಜೋಳ, ತೊಗರಿ ದೊರಕುತ್ತಿಲ್ಲ. ಜಿಲ್ಲೆಯ ಫಲಾನುಭವಿಗಳು ಈಗಲೂ ‘ಕಡಲೆ ಬಿಡಿ, ತೊಗರಿ ಕೊಡಿ‘ ಎಂದು ಮನವಿ ಮಾಡಿಕೊಳ್ಳುತ್ತಲೇ ಇದ್ದಾರೆ.

ಸ್ಥಳೀಯ ಫಲಾನುಭವಿಗಳು ಬಯಸುವ ಧಾನ್ಯವನ್ನು ಕೊಡಲು ಅವಕಾಶ ಇದೆ. ಉತ್ಪಾದನೆ ಹಾಗೂ ಮಾರಾಟ ವ್ಯವಸ್ಥೆಯಲ್ಲಿರುವ ತಾಂತ್ರಿಕ ಸಮಸ್ಯೆಗಳಿಂದ ಜಿಲ್ಲೆಯ ಫಲಾನುಭವಿಗಳಿಗೆ ಬಯಸುವ ಧಾನ್ಯಗಳು ನಿರಂತರವಾಗಿ ಲಭಿಸುತ್ತಿಲ್ಲ.

‘ಜಿಲ್ಲೆಯ ಜನ ಜೋಳದ ರೊಟ್ಟಿಯನ್ನೇ ಹೆಚ್ಚು ಇಷ್ಟಪಡುತ್ತಾರೆ. ಪಡಿತರದಾರ ಚೀಟಿದಾರರಿಗೆ ಜೋಳವನ್ನೇ ವಿತರಿಸಲು ಕ್ರಮ ಕೈಗೊಂಡರೆ ಅನುಕೂಲವಾಗಲಿದೆ. ಗೋಧಿ ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತದೆ. ಜೋಳ ದೇಹವನ್ನು ತಂಪಾಗಿರಿಸಲು ನೆರವಾಗುತ್ತದೆ. ಬಿಸಿಲ ನಾಡಿನ ಜಿಲ್ಲೆಗಳಲ್ಲಿ ಗುರುತಿಸಿಕೊಂಡಿರುವ ಬೀದರ್‌ನಲ್ಲೂ ಜೋಳ ವಿತರಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಮಹೇಶ ಗೋರನಾಳಕರ್‌ ಒತ್ತಾಯಿಸುತ್ತಾರೆ.

ಜಿಲ್ಲೆಯ ರೈತರು ತಮ್ಮ ಹೊಲದಲ್ಲಿ ಬೆಳೆದ ಜೋಳವನ್ನು ಕನಿಷ್ಠ ಬೆಂಬಲ ಬೆಲೆಗೆ ಮಾರಾಟ ಮಾಡಿದರೆ ಮಾತ್ರ ಜಿಲ್ಲೆಯ ಪಡಿತರ ಚೀಟಿದಾರರಿಗೆ ರಿಯಾಯಿತಿ ದರದಲ್ಲಿ ಜೋಳ ವಿತರಿಸಲಾಗುತ್ತದೆ. ನೆರೆಯ ಜಿಲ್ಲೆಗಳಲ್ಲೂ ರೈತರು ಜೋಳ ಮಾರಾಟ ಮಾಡಿಲ್ಲ. ಆ ಜಿಲ್ಲೆಗಳಲ್ಲಿ ಫಲಾನುಭವಿಗಳಿಗೆ ಕೊಟ್ಟು ಉಳಿದರೆ ಮಾತ್ರ ಬೀದರ್‌ ಜಿಲ್ಲೆಗೆ ಪೂರೈಕೆ ಮಾಡಲಾಗುತ್ತದೆ. ಆದರೆ, ರೈತರು ಜೋಳ ಮಾರಾಟ ಮಾಡಿದ ಜಿಲ್ಲೆಗಳಲ್ಲೇ ಪಡಿತರ ಚೀಟಿದಾರರಿಗೆ ಪೂರೈಕೆ ಮಾಡುವಷ್ಟು ಧಾನ್ಯ ದೊರಕುತ್ತಿಲ್ಲ.

ಮಧ್ಯಪ್ರದೇಶದಲ್ಲಿ ಹೆಚ್ಚುವರಿಯಾಗಿ ಉತ್ಪಾದನೆಯಾದ ಕಡಲೆಯನ್ನು ನ್ಯಾಷನಲ್ ಅಗ್ರಿಕಲ್ಚರಲ್ ಕೋ–ಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್(ನಫೇಡ್‌) ಮೂಲಕ ಖರೀದಿಸಿ ಬೀದರ್‌ ಜಿಲ್ಲೆಗೆ ಕಳಿಸಿ ಕೊಡಲಾಗಿದೆ. ಹೀಗಾಗಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಕಡಲೆ ವಿತರಿಸಲಾಗುತ್ತಿದೆ.

ಅಕ್ಕಿ ಹಾಗೂ ಗೋಧಿಗೆ ಸಾರ್ವಕಾಲಿಕ ಬೇಡಿಕೆ ಇದೆ. ಇವುಗಳನ್ನು ನಿರಂತರವಾಗಿ ಸರಬರಾಜು ಮಾಡಲಾಗುತ್ತಿದೆ. ಹಿಂದೆ ಜಿಲ್ಲೆಯಲ್ಲಿ ಪಡಿತರ ಚೀಟಿದಾರರಿಗೆ ತೊಗರಿ ಬೇಳೆ ಕೊಡಲಾಗಿದೆ. ಕಳೆದ ಬಾರಿ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 6 ಸಾವಿರ ಇತ್ತು. ಸರ್ಕಾರ ಕೇವಲ ₹ 2,500 ನಿಗದಿ ಮಾಡಿದ್ದ ಕಾರಣ ರೈತರು ಕನಿಷ್ಠ ಬೆಂಬಲ ಬೆಲೆಯಲ್ಲಿ ತೊಗರಿ ಮಾರಾಟ ಮಾಡಲು ಮುಂದೆ ಬರಲಿಲ್ಲ. ಹೀಗಾಗಿ ಗೋದಾಮಿನಲ್ಲಿ ಲಭ್ಯವಿದ್ದ ತೊಗರಿಯನ್ನು ಮಾತ್ರ ವಿತರಿಸಿ ನಂತರ ಕಡಲೆ ವಿತರಿಸಲು ಶುರು ಮಾಡಲಾಗಿದೆ.

‘ಕೇಂದ್ರ ಸರ್ಕಾರ ತೊಗರಿಯನ್ನು ಕೇವಲ ಮೂರು ತಿಂಗಳ ಅವಧಿಗೆ ಮಾತ್ರ ಕೊಟ್ಟಿತ್ತು. ಈಗ ಅದರ ಬದಲಿಗೆ ಕಡಲೆಯನ್ನು ಕೊಡಲಾಗುತ್ತಿದೆ. ಜೋಳಕ್ಕೆ ಬೇಡಿಕೆ ಇದ್ದೇ ಇದೆ. ಜನ ಗೋಧಿಯನ್ನೂ ಇಷ್ಟಪಟ್ಟು ಪಡೆದುಕೊಳ್ಳುತ್ತಿದ್ದಾರೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಬಾಬು ರೆಡ್ಡಿ ಹೇಳುತ್ತಾರೆ.


ಜಿಲ್ಲೆಯಲ್ಲಿ ಕುಟುಂಬಗಳಿಗಿಂತ ಪಡಿತರ ಚೀಟಿಗಳೇ ಅಧಿಕ
ಬೀದರ್: ಜಿಲ್ಲೆಯಲ್ಲಿ ಕುಟುಂಬಗಳಿಗಿಂತಲೂ ಪಡಿತರ ಚೀಟಿಗಳೇ ಅಧಿಕ ಇವೆ. ಅನಧಿಕೃತವಾಗಿ ಪಡಿತರ ಚೀಟಿ ಪಡೆದುಕೊಂಡಿರುವ ವ್ಯಕ್ತಿಗಳು ತಕ್ಷಣ ಆಹಾರ ಇಲಾಖೆಗೆ ಮರಳಿಸಬೇಕು ಎಂದು ಅಧಿಕಾರಿಗಳು ಅನೇಕ ಬಾರಿ ಎಚ್ಚರಿಕೆ ನೀಡಿದ್ದಾರೆ. ಇದೀಗ ನೇರವಾಗಿ ಕಾನೂನು ಕ್ರಮ ಜರುಗಿಸಲು ಸಿದ್ಧತೆ ನಡೆಸಿದ್ದಾರೆ.

ಎಪಿಎಲ್‌ ಪಡಿತರ ಚೀಟಿಗಾಗಿ 22,977 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 21,323 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸರಿಯಾಗಿ ದಾಖಲೆಗಳು ಇಲ್ಲದ 941 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 713 ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ. ಹೊಸ ಬಿಪಿಎಲ್‌ ಪಡಿತರ ಚೀಟಿಗಾಗಿ ಜಿಲ್ಲೆಯ ವಿವಿಧೆಡೆಯಿಂದ 35,550 ಅರ್ಜಿಗಳು ಬಂದಿದ್ದವು. 31,125 ಅರ್ಜಿ ಗಳನ್ನು ವಿಲೇವಾರಿ ಮಾಡಲಾಗಿದೆ. 4,425 ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ.
.

ಜಿಲ್ಲೆಯಲ್ಲಿ 724 ನ್ಯಾಯಬೆಲೆ ಅಂಗಡಿ:
ಬೀದರ್‌ ಜಿಲ್ಲೆಯಲ್ಲಿ ಒಟ್ಟ 724 ನ್ಯಾಯ ಬೆಲೆ ಅಂಗಡಿಗಳಿವೆ. ಬೀದರ್‌ ತಾಲ್ಲೂಕಿನಲ್ಲಿ 189, ಬಸವಕಲ್ಯಾಣ ತಾಲ್ಲೂಕಿನಲ್ಲಿ 152, ಔರಾದ್‌ ತಾಲ್ಲೂಕಿನಲ್ಲಿ 131, ಭಾಲ್ಕಿ ತಾಲ್ಲೂಕಿನಲ್ಲಿ 135 ಹಾಗೂ ಹುಮನಾಬಾದ್‌ ತಾಲ್ಲೂಕಿನಲ್ಲಿ 117 ನ್ಯಾಯ ಬೆಲೆ ಅಂಗಡಿಗಳು ಇವೆ.

ಪಡಿತರಕ್ಕೆ ನೆಟ್‌ವರ್ಕ್‌ ಕಿರಿಕಿರಿ
ಬೀದರ್‌: ಜಿಲ್ಲೆಯಲ್ಲಿ ಇಂಟರ್ನೆಟ್ ನೆಟ್‌ವರ್ಕ್‌ ಸಮಸ್ಯೆ ಇದೆ. ಮಹಾರಾಷ್ಟ ಹಾಗೂ ತೆಲಂಗಾಣಕ್ಕೆ ಹೊಂದಿಕೊಂಡಿರುವ ಔರಾದ್, ಕಮಲನಗರ, ಬೀದರ್‌ ಹಾಗೂ ಬಸವಕಲ್ಯಾಣದ ತಾಲ್ಲೂಕಿನ ಗಡಿ ಗ್ರಾಮಗಳ ಜನರು ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಹೆಚ್ಚು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದು ಪಡಿತರ ವಿತರಣೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ.
ಪಡಿತರ ಚೀಟಿದಾರರು ಪ್ರತಿ ತಿಂಗಳು ಹೆಬ್ಬೆರಳು ಗುರುತಿಗೆ ನಾಲ್ಕಾರು ಬಾರಿ ಅಲೆಯಬೇಕಾಗಿದೆ. ಪ್ರತಿ ತಿಂಗಳು ದಿನಾಂಕ 10 ರಿಂದ 30 ರ ವರೆಗೆ ಧಾನ್ಯ ವಿತರಿಸಬೇಕು ಎನ್ನುವ ನಿಯಮ ಇದೆ. ನೆಟ್‌ವರ್ಕ್‌ ಸಮಸ್ಯೆಯಿಂದಾಗಿಯೇ ಆಹಾರಧಾನ್ಯದಿಂದ ವಂಚಿತರಾಗಬೇಕಾದ ಸ್ಥಿತಿ ಇದೆ.

ಆಹಾರ ಇಲಾಖೆಯಿಂದ ಗ್ರಾಮಗಳಿಗೆ ಸರಿಯಾಗಿ ಆಹಾರ ಧಾನ್ಯ ತಲುಪುತ್ತಿದ್ದರೂ ನೆಟ್‌ವರ್ಕ್‌ ಸಮಸ್ಯೆಯಿಂದ ಪಡಿತರ ಪಡೆಯಲು ವಿಳಂಬವಾಗುತ್ತಿದೆ. ಜಿಲ್ಲಾಡಳಿತ ನೆಟ್‌ವರ್ಕ್‌ ಸುಧಾರಣೆಗೆ ಕ್ರಮಕೈಗೊಂಡರೆ ಅನೇಕ ಸಮಸ್ಯೆಗಳಿಗೆ ಏಕ ಕಾಲಕ್ಕೆ ಪರಿಹಾರ ದೊರಕಿಸಿಕೊಟ್ಟಂತೆ ಆಗಲಿದೆ ಎಂದು ಸಾಮಾಜಿಕ ಕಾರ್ಯಕರ್ತ ಔರಾದ್‌ ತಾಲ್ಲೂಕಿನ ಜಮಗಿಯ ಅಹಮ್ಮದ್‌ ಜಮಗಿ ಹೇಳುತ್ತಾರೆ.

ಹೆಬ್ಬೆಟ್ಟಿನ ಗುರುತು ಪತ್ತೆ ಮಾಡದ ಉಪಕರಣ
ಕಮಲನಗರ: ಪಡಿತರ ಅಂಗಡಿಗಳಲ್ಲಿ ಇಡಲಾಗಿರುವ ಉಪಕರಣಗಳು ವೃದ್ಧರ ಹೆಬ್ಬಟ್ಟಿನ ಗುರುತು ಪತ್ತೆ ಹಚ್ಚುತ್ತಿಲ್ಲ. ಹೊಲಗಳಲ್ಲಿ ಕೆಲಸ ಮಾಡುವವರ ಕೈಗಳಲ್ಲಿನ ಗುರುತುಗಳು ಮಾಯವಾಗಿವೆ. ಇದರಿಂದ ಪಡಿತರ ಧಾನ್ಯ ಪಡೆಯಲು ತೊಂದರೆಯಾಗುತ್ತಿದೆ.
ನ್ಯಾಯ ಬೆಲೆ ಅಂಗಡಿ ಮಾಲೀಕರು ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಜೋಡಿಸಿ ಒಟಿಪಿ ಕಳಿಸಿ ಆಹಾರಧಾನ್ಯ ವಿತರಿಸುತ್ತಿದ್ದಾರೆ. ಇದು ಕೂಡ ವಿಳಂಬವಾಗುತ್ತಿದೆ. ‘ನನ್ನ ಪತಿ ಮೃತಪಟ್ಟು 27 ದಿನಗಳಾಗಿವೆ. ನನ್ನ ಹೆಬ್ಬೆಟ್ಟಿನ ಗುರುತು ದಾಖಲಾಗುತ್ತಿಲ್ಲ. ಸೊಸೆಯ ಹೆಬ್ಬಟ್ಟಿನ ಗುರುತನ್ನೂ ಉಪಕರಣ ಸ್ವೀಕರಿಸುತ್ತಿಲ್ಲ. ಮೂರು ದಿನಗಳಿಂದ ನ್ಯಾಯಬೆಲೆ ಅಂಗಡಿಗೆ ಅಲೆದಾಡುತ್ತಿದ್ದೇವೆ’ ಎಂದು ಕಮಲನಗರದ ಮಲ್ಲಮ್ಮ ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT