ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹5 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

ಚಿಂತಾಕಿಯಲ್ಲಿ ಜನರಿಂದ ಅಹವಾಲು ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌
Last Updated 25 ನವೆಂಬರ್ 2020, 3:18 IST
ಅಕ್ಷರ ಗಾತ್ರ

ಔರಾದ್: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮಂಗಳವಾರ ತಾಲ್ಲೂಕಿನ ವಿವಿಧೆಡೆ ₹5 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ‘ದುಡುಕನಾಳ, ವನಮಾರಪಳ್ಳಿ, ಬಾದಲಗಾಂವ್, ನಾರಾಯಣಪುರ, ಮಮದಾಪುರ, ಯನಗುಂದಾ, ಸುಂದಾಳ, ಜಕನಾಳ, ಮಾನೂರ, ನಾಗನಪಲ್ಲಿ, ಕರಂಜಿ ಸೇರಿದಂತೆ ಚಿಂತಾಕಿ ಹೋಬಳಿ ವ್ಯಾಪ್ತಿಯಲ್ಲಿ ಬರುವ 26 ಗ್ರಾಮಗಳಲ್ಲಿ ಶಾಲೆ, ಚರ್ಚ್‌, ಸ್ಮಶಾನ ಭೂಮಿ ರಿಪೇರಿ ಮತ್ತು ಸುತ್ತುಗೋಡೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಗತ್ಯವಿರುವ ಕಡೆ ಕುಡಿಯುವ ನೀರು, ಸಿಸಿ ರಸ್ತೆ ಕಾಮಗಾರಿ ಶುರು ಮಾಡಲಾಗಿದೆ’ ಎಂದು ತಿಳಿಸಿದರು.

‘2008ರಲ್ಲಿ ಶಾಸಕನಾದಾಗಿನಿಂದ ಪ್ರತಿ ವರ್ಷ ಗ್ರಾಮ ಸಂಚಾರ ಮಾಡುವುದನ್ನು ರೂಢಿಸಿಕೊಂಡು ಬಂದಿದ್ದೇನೆ. ಈ ಬಾರಿ ಸಚಿವನಾಗಿ ಜನರ ಅಹವಾಲು ಕೇಳುವ ಸೌಭಾಗ್ಯ ದೊರೆತಿದೆ. ಇಂದಿನ ಪ್ರವಾಸದಲ್ಲಿ ಸಾಕಷ್ಟು ಕಡೆ ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ ಕೊಡಿಸಲಾಗಿದೆ. ಈಗ ಯಾವ ಗ್ರಾಮದಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಮಾರ್ಚ್‌ ತನಕ ಆ ಎಲ್ಲ ಕೆಲಸಗಳನ್ನು ಮಾಡಿಸಿಕೊಡಲಾಗುವುದು’ ಎಂದು ಭರವಸೆ ನೀಡಿದರು.

‘ಕೋವಿಡ್‌ನಿಂದಾಗಿ ಕೆಲ ಕಾಮಗಾರಿಗಳು ವಿಳಂಬ ಆಗಿವೆ. ಕೌಠಾ ಸೇತುವೆ ರಿಪೇರಿ ಕಾಮಗಾರಿ ಶುರುವಾಗಿದೆ. ಆದರೆ ಬೀದರ್-ಔರಾದ್ ರಸ್ತೆ ರಿಪೇರಿಗೆ ಟೆಂಡರ್ ಕರೆದರೂ ಗುತ್ತಿಗೆದಾರರು ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಈ ಕುರಿತು ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಜತೆ ಚರ್ಚಿಸಿ ಆದಷ್ಟು ಬೇಗ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು’ ಎಂದು ಹೇಳಿದರು.

‘ಬೀದರ್-ಔರಾದ್ ಹೆದ್ದಾರಿಗೆ ಅನುದಾನ ಮಂಜೂರಾಗಿದೆ. ಆದರೆ ಟೆಂಡರ್ ಪ್ರಕ್ರಿಯೆಯಲ್ಲಿ ಸಮಸ್ಯೆಯಾಗಿದೆ. ಈ ಕುರಿತು ಸಂಸದ ಭಗವಂತ ಖೂಬಾ ಅವರ ಜತೆಗೂಡಿ ಕೇಂದ್ರ ಭೂ ಸಾರಿಗೆ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಆದಷ್ಟ ಬೇಗ ಈ ರಸ್ತೆ ಕಾಮಗಾರಿ ಶುರು ಆಗಲಿದೆ’ ಎಂದು ಭರವಸೆ ನೀಡಿದರು.

‘ಸಂತಪುರ- ವಡಗಾಂವ್ ಸೇರಿದಂತೆ ತಾಲ್ಲೂಕಿನಲ್ಲಿ ಹಾಳಾದ ಎಲ್ಲ ರಸ್ತೆಗಳು ಆದಷ್ಟು ಬೇಗ ಅಭಿವೃದ್ಧಿಪಡಿಸ ಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮಾರುತಿ ರಾಠೋಡ, ಮಾಜಿ ಸದಸ್ಯ ಕಾಶಿನಾಥ ಜಾಧವ್, ವಸಂತ ಬಿರಾದಾರ, ರಾಮಶೆಟ್ಟಿ ಪನ್ನಾಳೆ, ಅಶೋಕ ಅಲ್ಮಾಜೆ, ದಯಾನಂದ ಹಳ್ಳಿಖೇಡೆ, ಶರಣಪ್ಪ ಪಾಟೀಲ, ರಾವುಸಾಬ್ ಪಾಟೀಲ, ಸಹಾಯಕ ಆಯುಕ್ತೆ ಗರಿಮಾ ಪನ್ವಾರ್, ತಹಶೀಲ್ದಾರ್ ಎಂ. ಚಂದ್ರಶೇಖರ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ವೀರಶೆಟ್ಟಿ ರಾಠೋಡ, ಅಶೋಕ ಸಜ್ಜನಶೆಟ್ಟಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರಣಯ್ಯ ಸ್ವಾಮಿ, ತಾಲ್ಲೂಕು ಪಂಚಾಯಿತಿ ಮುಖ್ಯಾಧಿಕಾರಿ ಮಾಣಿಕರಾವ ಪಾಟೀಲ ಉಪಸ್ಥಿತರಿದ್ದರು.

ನನ್ನ ಕುರ್ಚಿ ಭದ್ರ: ಸಚಿವ ಚವಾಣ್

ಔರಾದ್: ‘ಸಚಿವ ಸಂಪುಟ ವಿಸ್ತರಣೆ ಕುರಿತು ಉಹಾಪೋಹ ಹರಡುತ್ತಿವೆ. ನನ್ನ ಕುರ್ಚಿ ಭದ್ರವಾಗಿರುವುದರಿಂದ ನಾನು ತಲೆಕೆಡಿಸಿಕೊಂಡಿಲ್ಲ’ ಎಂದು ಸಚಿವ ಪ್ರಭು ಚವಾಣ್ ಹೇಳಿದರು.

ತಾಲ್ಲೂಕಿನ ಚಿಂತಾಕಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಕಟೀಲ್ ಅವರನ್ನು ಭೇಟಿ ಮಾಡಿದ್ದೇನೆ. ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ. ಹೀಗಾಗಿ ನಿಮಗೆ ಯಾವುದೇ ಸಮಸ್ಯೆಯಾಗಲ್ಲ ಎಂದು ಭರವಸೆ ನೀಡಿದ್ದಾರೆ. ಇಷ್ಟಕ್ಕೂ ಈಗ ನಡೆಯಲಿರುವುದು ಸಚಿವ ಸಂಪುಟದ ಪುನಾರಚನೆ ಅಲ್ಲ. ವಿಸ್ತರಣೆ ಮಾತ್ರ’ ಎಂದು ತಿಳಿಸಿದರು.

‘ಮರಾಠಿ ಅಭಿವೃದ್ಧಿ ಅಲ್ಲ’

‘ಸರ್ಕಾರ ಸ್ಥಾಪಿಸಿದ್ದು ಮರಾಠಾ ಸಮಾಜದ ಅಭಿವೃದ್ಧಿ ನಿಗಮವೇ ಹೊರತು; ಮರಾಠಿ ಅಭಿವೃದ್ಧಿ ನಿಗಮ ಅಲ್ಲ. ಅದರಂತೆ ಬಹುದಿನಗಳ ಬೇಡಿಕೆಯಾದ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ. ಇದಕ್ಕೂ ಕೆಲವರು ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ಈ ವಿಷಯದಲ್ಲಿ ವಿನಾಃ ಕಾರಣ ವಿವಾದ, ವಿರೋಧ ಮಾಡುವುದು ಸರಿಯಲ್ಲ’ ಎಂದು ಸಚಿವ ಚವಾಣ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT