ಗುರುವಾರ , ಆಗಸ್ಟ್ 5, 2021
25 °C
ಒಂದೇ ದಿನ 36 ಮಂದಿಗೆ ಕೋವಿಡ್ ಸೋಂಕು

ಜಿಲ್ಲೆಯ ಜನರಲ್ಲಿ ಹೆಚ್ಚುತ್ತಿರುವ ಆತಂಕ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಲ್ಲಿ ಮತ್ತೆ 36 ಜನರಿಗೆ ಕೋವಿಡ್‌ 19 ಸೋಂಕು ತಗುಲಿದೆ. ಇಬ್ಬರು ಬಾಲಕಿಯರು, 14 ಮಹಿಳೆಯರು ಹಾಗೂ 20 ಪುರುಷರಿಗೆ ಸೋಂಕು ಇರುವುದು ದೃಢಪಟ್ಟಿದೆ. ಕೋವಿಡ್‌ ವೈರಾಣು ಪೀಡಿತರ ಸಂಖ್ಯೆ 651ಕ್ಕೆ ತಲುಪಿದೆ. ಇದರಿಂದಾಗಿ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿದೆ.

ಜಿಲ್ಲೆಯಲ್ಲಿ ಎರಡು ಮೂರು ಕೋವಿಡ್‌ ಪ್ರಕರಣ ಕಾಣಿಸಿಕೊಂಡಾಗ 18 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಕಟ್ಟೆಚ್ಚರ ವಹಿಸಲಾಗಿತ್ತು. ಇದೀಗ ಮೃತರ ಸಂಖ್ಯೆಯೇ 21ಕ್ಕೆ ಏರಿದ್ದು, ಕೋವಿಡ್ 19 ಸೋಂಕಿತರ ಸಂಖ್ಯೆ 651ಕ್ಕೆ ತಲುಪಿದೆ. ಆದರೂ ಮೂರು ಚೆಕ್‌ಪೋಸ್ಟ್‌ ಹೊರತು ಪಡಿಸಿ ಉಳಿದೆಲ್ಲ ಚೆಕ್‌ಪೋಸ್ಟ್‌ಗಳನ್ನು ಬಂದ್‌ ಮಾಡಲಾಗಿದೆ.

ಅಂತರ ರಾಜ್ಯ ಬಸ್‌ ಸಂಚಾರ ಸ್ಥಗಿತಗೊಂಡಿದೆ. ಆದರೆ ಖಾಸಗಿ ವಾಹನಗಳ ಸಂಚಾರ ಮುಂದುವರಿದಿದೆ. ಮುಂಬೈ, ಪುಣೆ ಕಡೆಯಿಂದ ಅನೇಕರು ಮಹಾರಾಷ್ಟ್ರದ ಗಡಿ ಅಂಚಿನಲ್ಲಿ ಬಂದು ಇಳಿಯುತ್ತಿದ್ದಾರೆ. ಅಲ್ಲಿಂದ ಕಳ್ಳದಾರಿಗಳ ಮೂಲಕ ಜಿಲ್ಲೆಯ ತಮ್ಮ ಊರು ಸೇರುತ್ತಿದ್ದಾರೆ.

ಜಿಲ್ಲೆಯಲ್ಲಿ ಪೊಲೀಸ್‌ ಬಲ ಕುಗ್ಗಿದೆ. 92 ಪೊಲೀಸರು ಹೋಮ್‌ ಕ್ವಾರಂಟೈನ್‌ನಲ್ಲಿ ಇದ್ದಾರೆ. ಕೆಲವರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಲಾಗಿದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ. ಇದರಿಂದ ಚೆಕ್‌ಪೋಸ್ಟ್‌ಗಳ ಮೇಲೆ ಪರಿಣಾಮ ಬೀರಿದೆ.

ಅಧಿಕಾರಿಗಳಲ್ಲಿ ಸಮನ್ವಯ ಕೊರತೆ
ಆರೋಗ್ಯ ಇಲಾಖೆ ಹಾಗೂ ಬ್ರಿಮ್ಸ್‌ನಲ್ಲಿ ಅಧಿಕಾರಿಗಳ ಮಧ್ಯೆ ಸಮನ್ವಯದ ಕೊರತೆ ಇದೆ. ವೈಯಕ್ತಿಕ ಪ್ರತಿಷ್ಠೆ ಆರೋಗ್ಯ ಇಲಾಖೆಯ ಕಾರ್ಯವೈಖರಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯ ಮಾತಿಗೆ ಕೆಳಹಂತದ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ. ಡಿಎಚ್‌ಒ ಅವರು ಕೆಳ ಹಂತದ ಅಧಿಕಾರಿಗಳಿಗೆ ಆದೇಶಪತ್ರ ಕಳಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಕೆಳ ಹಂತದ ಅಧಿಕಾರಿಗಳು ಗಂಭೀರವಾಗಿಲ್ಲ. ಸರ್ಕಾರದ ಆದೇಶ ಅಚ್ಚುಕಟ್ಟಾಗಿ ಪರಿಪಾಲನೆ ಆಗುತ್ತಿಲ್ಲ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಕೋವಿಡ್ 19 ಸೋಂಕು ನಿಯಂತ್ರಣಕ್ಕೆ ಗ್ರಾಮ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಸಮಿತಿಗಳ ಪದಾಧಿಕಾರಿಗಳು ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಾಗ ಡಿಎಚ್‌ಒ ಹಾಗೂ ಡಿಎಸ್‌ಒ ಅವರಿಗೆ ನೇರವಾಗಿ ಸಂಪರ್ಕಿಸಿದರೂ ಅವರು ಸ್ಪಂದಿಸುತ್ತಿಲ್ಲ. ಇದು ಗ್ರಾಮ ಮಟ್ಟದ ಸಮಿತಿಗಳ ಉತ್ಸಾಹ ಕುಗ್ಗಿಸಿದೆ ಎಂದು ಕಮಲನಗರ ತಾಲ್ಲೂಕಿನ ಗ್ರಾಮಗಳ ಕೊರೊನಾ ವಾರಿಯರ್ಸ್‌ ಹೇಳುತ್ತಾರೆ.

‘ಗ್ರಾಮ ಮಟ್ಟದ ಸಮಿತಿಗಳನ್ನು ರಚಿಸಿರುವುದೇ ಬಹಳಷ್ಟು ಜನರಿಗೆ ಗೊತ್ತಿಲ್ಲ. ಜಾಗೃತಿಯ ಕೆಲಸ ಪರಿಣಾಮಕಾರಿಯಾಗಿಲ್ಲ. ಜನರಿಗೆ ಅರಿವಿಗೆ ಬಾರದ ಕಾರಣ ಕೋವಿಡ್‌ ಸೋಂಕಿಗೆ ಒಳಗಾಗುತ್ತಿದ್ದಾರೆ. ಜಿಲ್ಲಾಡಳಿತ ಈ ದಿಸೆಯಲ್ಲಿ ಹೆಚ್ಚು ಕೆಲಸ ಮಾಡಬೇಕಿದೆ’ ಎಂದು ಡಿಎಸ್‌ಎಸ್‌ ಸಂಚಾಲಕ ಧನರಾಜ್‌ ಮುಸ್ತಾಪುರ ಹೇಳುತ್ತಾರೆ.

ಮದುವೆಗಳಲ್ಲಿ ಪಾಲನೆಯಾಗದ ನಿಯಮ
ಜಿಲ್ಲೆಯಲ್ಲಿ ಕಲ್ಯಾಣ ಮಂಟಪಗಳನ್ನು ಬಿಟ್ಟರೆ ಎಲ್ಲೆಡೆ ಮದುವೆ ಸಮಾರಂಭಗಳು ನಡೆಯುತ್ತಿವೆ. ಮದುವೆಗಳಲ್ಲಿ ಸಾವಿರದಿಂದ ಎರಡು ಸಾವಿರ ಜನ ಒಂದೇ ಕಡೆ ಸೇರುತ್ತಿದ್ದಾರೆ. ಜನ ಒಂದೆಡೆ ಸೇರುವುದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎನ್ನುವ ದೂರುಗಳು ಕೇಳಿ ಬರುತ್ತಿವೆ.

ಮದುವೆ ಸಮಾರಂಭಗಳಿಂದಾಗಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡುವ ಭೀತಿ ಎದುರಾಗಿದೆ. ಕಾರ್ಯಕ್ರಮಕ್ಕೆ ಹೆಚ್ಚಿನವರು ಮಾಸ್ಕ್‌ ಧರಿಸಿ ಬರುತ್ತಿಲ್ಲ. ಮುಂಬೈ, ಪುಣೆ ನಗರಗಳಿಂದಲೂ ಜನ ಬಂದು ಮದುವೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚುವ ಭೀತಿ ಎದುರಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು