ಬೀದರ್: ‘ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸಲು ಇಂದ್ರ ಧನುಷ್ ಲಸಿಕೆ ಸಹಕಾರಿಯಾಗಿದ್ದು, ಜನಿಸಿದ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
‘ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನ‘ ಹಾಗೂ ವಿಶ್ವ ಹೆಪಟೈಟಿಸ್ ದಿನಾಚರಣೆಗೆ ನಗರದ 100 ಹಾಸಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ಚಾಲನೆ ನೀಡಿ ಮಾತನಾಡಿದರು. ಲಸಿಕೆ ಪಡೆದ ಮಕ್ಕಳ ತಾಯಂದಿರಿಗೆ ಪ್ರಮಾಣ ಪತ್ರ ವಿತರಿಸಿದರು.
ಗರ್ಭಿಣಿಯರು ಪೌಷ್ಟಿಕಾಂಶದ ಕೊರತೆ, ಪರಿಸರ ಮಾಲಿನ್ಯದಿಂದ ರೋಗಗಳಿಂದ ಬಳಲುತ್ತಿದ್ದರೆ ಅದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಪೋಲಿಯೋ ಲಸಿಕೆಯಂತೆ ಮಾರಕ ರೋಗಗಳಿಂದ ಇಂದ್ರ ಧನುಷ್ ಲಸಿಕೆ ರಕ್ಷಿಸುತ್ತದೆ. ತಪ್ಪದೇ ಹಾಕಿಸಬೇಕು ಎಂದು ಕಿವಿಮಾತು ಹೇಳಿದರು.
ಹೆರಿಗೆ ಸಮಯದಲ್ಲಿ ತಾಯಿ ಹಾಗೂ ಮಕ್ಕಳ ಮರಣ ಹೊಂದುವ ಪ್ರಮಾಣ ಇತ್ತೀಚೆಗೆ ಕಡಿಮೆಯಾಗಿದೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಹೋಗಿ ರೋಗ ನಿರೋಧಕ ಲಸಿಕೆ ಪಡೆದು ಸುರಕ್ಷಿತವಾಗಿರಬೇಕು. ಜನರಲ್ಲಿ ಈ ಕುರಿತು ಅರಿವು ಮೂಡಿಸಬೇಕು ಎಂದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂದ್ರ ಧನುಷ್ 5.0 ಅನುಷ್ಠಾನಗೊಳಿಸಲಾಗುತ್ತಿದೆ. ಈ ಅಭಿಯಾನವು ಆಗಸ್ಟ್ 7ರಂದು ಆರಂಭಗೊಂಡಿದ್ದು, ಸೆ. 11ರ ವರೆಗೆ ನಡೆಯಲಿದೆ. ಅಕ್ಟೋಬರ್ 9ರಿಂದ ಮೂರನೇ ಸುತ್ತಿನ ಕಾರ್ಯಕ್ರಮವು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 0 ದಿಂದ 2 ವರ್ಷ ವಯಸ್ಸಿನ 5545, 2 ರಿಂದ 5 ವರ್ಷದ 1094 ಅರ್ಹ ಫಲಾನುಭವಿ ಮಕ್ಕಳು ಇದ್ದಾರೆ. ಬ್ರಿಮ್ಸ್‌ನಲ್ಲಿ ಹೆಪಟೈಟಿಸ್.ಬಿ ರೋಗ ದೃಢಪಟ್ಟ 440 ಹಾಗೂ ಹೆಪಟೈಟಿಸ್.ಸಿ ಇರುವ 13 ಜನ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ವೇಳಾಪಟ್ಟಿ ಪ್ರಕಾರ ವಯಸ್ಸಿಗೆ ತಕ್ಕಂತೆ ಲಸಿಕೆ ಪಡೆಯದ, ಅದರಿಂದ ಬಿಟ್ಟು ಹೋದ ಮತ್ತು ಲಸಿಕಾಕರಣಕ್ಕೆ ಬಾಕಿ ಇರುವ ಗರ್ಭಿಣಿಯರು, 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪರಿಣಾಮಕಾರಿ ಇಂದ್ರಧನುಷ್ 5.0ರಲ್ಲಿ ಲಸಿಕೆ ನೀಡಲಾಗುವುದು. ವಿಶೇಷವಾಗಿ ದಡಾರ, ರುಬೆಲ್ಲಾ ರೋಗ ನಿರೋಧಕ ಅಂತರವನ್ನು ಕಡಿಮೆ ಮಾಡುತ್ತದೆ. ದುರ್ಬಲ ಸಮುದಾಯವನ್ನು ತಲುಪಿಸುವುದು, ಸಮುದಾಯವನ್ನು ಪಾಲ್ಗೊಳ್ಳುವಂತೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಖಾಸಗಿ ಶಾಲೆಯಲ್ಲಿ ಪ್ಲೇ-ಸ್ಕೂಲ್, ಎಲ್.ಕೆ.ಜಿ., ಯು.ಕೆ.ಜಿ. 5 ವರ್ಷದೊಳಗಿನ ಎಂ.ಆರ್.2 ಡಿ.ಪಿ.ಟಿ. ಬೂಸ್ಟರ್, ಓ.ಪಿ.ವಿ.ಬೂಸ್ಟರ್ ಲಸಿಕೆ ಪಡೆಯದ ಮಕ್ಕಳಿದ್ದಲ್ಲಿ ಪೋಷಕರು ಲಸಿಕೆ ಹಾಕಿಸಬೇಕು. ಹೊಸದಾಗಿ ಶಾಲೆಗಳಲ್ಲಿ ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ ಈ ಹಿಂದೆ ಪಡೆದಿರುವ ಲಸಿಕೆಗಳ ಪರಿಶೀಲನೆ ಮಾಡಿ ಲಸಿಕೆ ಪಡೆಯದ ಮಕ್ಕಳಿಗೆ ಹಾಕಿಕೊಳ್ಳುವಂತೆ ಸೂಚಿಸಬೇಕು. ಶಾಲೆಯಲ್ಲಿ ಯಾವುದೇ ಮಕ್ಕಳಿಗೆ ದಡಾರ, ರುಬೆಲ್ಲಾ ರೋಗಗಳ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕೆಂದು ಹೇಳಿದರು.
ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರತಿಕಾಂತ ಸ್ವಾಮಿ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ರಾಜಶೇಖರ ಪಾಟೀಲ, ಜಿಲ್ಲಾ ಕ್ಷಯರೋಗ ನಿಯಂತ್ರಣಾ ಅಧಿಕಾರಿ ಡಾ.ಶರಣಯ್ಯಾ ಸ್ವಾಮಿ, 100 ಹಾಸಿಗೆಗಳ ಆಸ್ಪತ್ರೆಯ ಡಾ.ಸೊಹೇಲ್ ಹುಸೇನ್, ಹೆಪಟೈಟಿಸ್ ಕಾರ್ಯಕ್ರಮ ಅಧಿಕಾರಿ ಸುವೀನ್ ಪಾಟೀಲ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.
ಇಂದ್ರ ಧನುಷ್ ರೋಗ ನಿರೋಧಕ ಮಕ್ಕಳ ಜೀವ ಉಳಿಸಲು ಸಹಕಾರಿ 5 ವರ್ಷದೊಳಗಿನ ಎಲ್ಲರಿಗೆ ಹಾಕಿಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.