ಜನವಾಡ: ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಶನಿವಾರ ದಿಢೀರ್ ಭೇಟಿ ನೀಡಿದರು.
ಕೇಂದ್ರದ ವಿವಿಧ ವಿಭಾಗಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿದ ಅವರು ರೋಗಿಗಳ ಆರೋಗ್ಯ ವಿಚಾರಿಸಿ ಆಸ್ಪತ್ರೆಯ ವ್ಯವಸ್ಥೆ ಬಗ್ಗೆಯೂ ಮಾಹಿತಿ ಪಡೆದರು.
ಕೇಂದ್ರದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲ. ಚಿಕಿತ್ಸೆಗೆ ಬರಲು ತಿಳಿಸಿದ್ದ ವೈದ್ಯರೇ ಬಂದಿಲ್ಲ ಎಂದು ರೋಗಿಗಳು ದೂರಿದರು.
ಬಳಿಕ ವೈದ್ಯರು ಹಾಗೂ ಸಿಬ್ಬಂದಿ ಸಭೆ ನಡೆಸಿದ ಅವರು, ‘ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಬೇಕು. ಅಗತ್ಯ ಔಷಧ ದಾಸ್ತಾನು ಇಟ್ಟುಕೊಳ್ಳಬೇಕು. ಜನರಿಂದ ದೂರು ಬರದಂತೆ ಕೆಲಸ ಮಾಡಬೇಕು. ನಿರ್ಲಕ್ಷ್ಯ ವಹಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು’ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸಂಗಾರೆಡ್ಡಿ, ಡಾ. ಸೂರ್ಯಕಾಂತ, ಭೂಷಣ್ ಇದ್ದರು.
ಬಳಿಕ ಶಾಸಕರು ಗ್ರಾಮದ ಪದವಿಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನೂತನವಾಗಿ ನಿರ್ಮಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬಾಲಕರ ವಸತಿ ನಿಲಯ ಕಟ್ಟಡಕ್ಕೂ ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.