ಬುಧವಾರ, ಜನವರಿ 29, 2020
29 °C
ಕಾನೂನು ಅರಿವು–ನೆರವು: ನ್ಯಾಯಾಧೀಶ ಸಿದ್ರಾಮ ಟಿ.ಪಿ ಸಲಹೆ

ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳಸದಿರಿ: ಸಿದ್ರಾಮ ಟಿ.ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್:  ‘ಬಡತನದ ನೆಪ ಹೇಳಿ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸಬಾರದು. ಕೆಲಸಕ್ಕೆ ಕಳುಹಿಸಿದವರಿಗೆ ಶಿಕ್ಷೆ ಅನಿವಾರ್ಯ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ ಹೇಳಿದರು.

ನೌಬಾದ್ ಆಟೊ ನಗರದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ‘ಬಡತನ ನಿರ್ಮೂಲನೆಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಸೌಕರ್ಯ ಹಾಗೂ ಉಚಿತ ಪಡಿತರ, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಬಟ್ಟೆ, ಷೂಗಳನ್ನು ವಿತರಿಸಲಾಗುತ್ತಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಅವರ ಭವಿಷ್ಯ ಉಜ್ವಲಗೊಳಿಸಬೇಕು’ ಎಂದು ತಿಳಿಸಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕವಿತಾ ಹುಷಾರೆ ಮಾತನಾಡಿ, ‘18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಸೇರಿಸಿ ಅವರ ಭವಿಷ್ಯದೊಂದಿಗೆ ಚೆಲ್ಲಾಟವಾಡಬಾರದು. ಮಕ್ಕಳಿಗೆ ಶಿಕ್ಷಣದ ಜತೆಗೆ ಅವರ ಹಕ್ಕುಗಳನ್ನು ಅನುಭವಿಸಲು ಅವಕಾಶ ಮಾಡಿಕೊಡಬೇಕು’ ಎಂದರು.

ಕಾರ್ಮಿಕ ನಿರೀಕ್ಷಕ  ಪ್ರಸನ್ನ ಮಾತನಾಡಿ, ‘18 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಕಳುಹಿಸಿದಲ್ಲಿ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ, 2016ರಂತೆ  ₹ 50 ಸಾವಿರ ದಂಡ ಮತ್ತು 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ  ವಿಧಿಸಲು ಅವಕಾಶವಿದೆ. ಅಲ್ಲದೇ ಪರಿಹಾರ ಮೊತ್ತವಾಗಿ ₹ 20 ಸಾವಿರ ವಸೂಲಾತಿ ಮಾಡಲಾಗುತ್ತದೆ’ ಎಂದು ವಿವರಿಸಿದರು.

ಆಟೊನಗರ ಯೂನಿಯನ್ ಅಧ್ಯಕ್ಷ ಬಾಬಾ ಶೇರಿಕಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಂದ್ರಕಾಂತ ಜಾಧವ್ ಮಾತನಾಡಿದರು.

ಎನ್.ಜಿ.ಒ ಜಿಲ್ಲಾ ಒಕ್ಕೂಟದ ಗೌರವಾಧ್ಯಕ್ಷ ಶಫಿಯೊದ್ದಿನ್ ಇದ್ದರು. ಗೌರಿ ಶಂಕರ ಪರ್ತಾಪುರೆ ನಿರೂಪಿಸಿದರು. ಜಿಲ್ಲಾ ಬಾಲ ಕಾರ್ಮಿಕ ನಿರ್ಮೂಲನಾ ಯೋಜನೆಯ ಯೋಜನಾ ನಿರ್ದೇಶಕ ಅರ್ಜುನ ಸಿತಾಳಗೇರಾ ವಂದಿಸಿದರು.  

ಪ್ರತಿಕ್ರಿಯಿಸಿ (+)