ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಭ್ರಮದ ಕಾರ ಹುಣ್ಣಿಮೆ

ವಿವಿಧೆಡೆ ಎತ್ತುಗಳನ್ನು ಅಲಂಕರಿಸಿ, ಮೆರವಣಿಗೆ ಮಾಡಿ ಸಂಭ್ರಮಿಸಿದ ರೈತರು
Last Updated 15 ಜೂನ್ 2022, 5:29 IST
ಅಕ್ಷರ ಗಾತ್ರ

ಚಿಟಗುಪ್ಪ: ಪಟ್ಟಣ ಸೇರಿದಂತೆ ತಾಲ್ಲೂಕಿನ ನಿರ್ಣಾ, ಕುಡಂಬಲ್‌ ಹಾಗೂ ಬೇಮಳಖೇಡಾ ಹೋಬಳಿಗಳ ವ್ಯಾಪ್ತಿಯಲ್ಲಿ ರೈತರು ಕಾರ ಹುಣ್ಣಿಮೆಯನ್ನು ಸಡಗರದಿಂದ ಆಚರಿಸಿದರು.

ಎತ್ತು–ಕರುಗಳ ಮೈ ತೊಳೆದು ಹೊಸ ಹಗ್ಗ, ಹಣೆಪಟ್ಟಿ, ಗೆಜ್ಜೆ ಸರ, ಮೂಗುದಾರ, ಕೊರಳಗಂಟೆ, ಅಂಗಡ, ಬಾರು, ದೃಷ್ಟಿ ಮಣಿ, ಜೂಲ, ಮಿಣಿಯೊಂದಿಗೆ ಅಲಂಕರಿಸಿ ರಂಗು ರಂಗಿನ ಬಣ್ಣ ಬಳಿದರು. ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.

ಮೆರವಣಿಗೆಯ ಬಳಿಕ ಮಹಿಳೆಯರು ಮುಖ್ಯ ದ್ವಾರದಲ್ಲಿ ಎತ್ತುಗಳಿಗೆ ಆರತಿ ಬೆಳಗಿದರು. ನಂತರ ಊಟದ ಒಳ್ಳೆಣ್ಣೆ ಕುಡಿಸಿ ಹೋಳಿಗೆ, ಸಿಹಿ ಗಡುಬು, ಅಂಬಲಿ, ಮಜ್ಜಿಗೆ ಹಾಗೂ ಅನ್ನ ತಿನ್ನಿಸಿದರು.

ರೈತರು ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರು ಹಾಗೂ ಸುತ್ತಲಿನ ಮನೆಗಳ ಕುಟುಂಬ ಸದಸ್ಯರನ್ನು ಆಹ್ವಾನಿಸಿ ಸಾಮೂಹಿಕ ಭೋಜನ ಸ್ವೀಕರಿಸಿದರು.

ತಾಲ್ಲೂಕಿನ ಶ್ರೀಕ್ಷೇತ್ರ ಚಾಂಗಲೇರಾದ ವೀರಭದ್ರೇಶ್ವರ ದೇಗುಲದ ಗೋಶಾಲೆಯಲ್ಲಿ ಅರ್ಚಕರು ನಸುಕಿನಲ್ಲಿಯೇ ಗೋವು, ಎತ್ತು ಹಾಗೂ ಆಕಳು ಕರುಗಳಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆಗಳನ್ನು ಅವುಗಳ ಬೆನ್ನ ಮೇಲೆ ಹಾಕಿದರು.

ವಿವಿಧ ಬಣ್ಣಗಳಿಂದ ಸಿಂಗರಿಸಿ ಆಭರಣಗಳನ್ನು ತೊಡಿಸಲಾಯಿತು. ವಿಶೇಷಪೂಜೆ ಮಾಡಲಾಯಿತು. ಗೋಮಂತ್ರ ಪಠಿಸಿ, ಮಂಗಳಾರತಿ ಮಾಡಲಾಯಿತು. ವಿವಿಧ ಭಕ್ಷ್ಯಗಳನ್ನು ತಿನ್ನಿಸಲಾಯಿತು.

ಸಂಜೆ ಗ್ರಾಮಗಳ ಕುಲಕರ್ಣಿ, ಪಾಟೀಲ, ಸಾಹುಕಾರ ಸೇರಿದಂತೆ ಪ್ರಮುಖರ ಮನೆಗಳಿಂದ ಒಂದೊಂದು ಹೋರಿ ಮೆರವಣಿಗೆ ಮೂಲಕ ಹನುಮಾನ ದೇಗುಲಕ್ಕೆ ತಂದು ನಂತರ ಎಲ್ಲವನ್ನೂ ಏಕಕಾಲಕ್ಕೆ ಓಡಿಸಿ ‘ಕರಿ’ ಆಚರಣೆ ಮಾಡಲಾಯಿತು. ಈ ಸಂದರ್ಭವೇ ವರ್ಷದ ಬೆಳೆಯ ಸ್ಥಿತಿ–ಗತಿ ತಿಳಿದುಕೊಳ್ಳಲಾಗುತ್ತದೆ. ಯಾವ ಬಣ್ಣದ ಹೋರಿ ಪ್ರಥಮ ಸ್ಥಾನ ಪಡೆಯುತ್ತದೆಯೋ ಆ ಬಣ್ಣದ ಬೆಳೆ ಹೊಲದಲ್ಲಿ ಉತ್ತಮವಾಗಿ ಬೆಳೆಯುತ್ತದೆ ಎಂಬ ಪುರಾತನ ನಂಬಿಕೆಯ ಪರಂಪರೆ ಬೆಳೆದು ಬಂದಿದೆ.

ಎತ್ತುಗಳಿಗೆ ಸಿಂಗಾರ

ಬೇಲೂರು (ಹುಲಸೂರ): ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ಮಂಗಳವಾರ ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿದರು.

ತಾಲ್ಲೂಕಿನ ಬೇಲೂರು ಗ್ರಾಮದಲ್ಲಿ ರೈತರು ಎತ್ತುಗಳ ಮೈ ತೊಳೆದು ಸಿಂಗಾರ ಮಾಡಿದರು. ಹನುಮಾನ್ ಮಂದಿರ ಸುತ್ತು ಹಾಕಿಸಿದರು. ಬಳಿಕ ಗ್ರಾಮದಲ್ಲಿನ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಬೇಲೂರು ಗ್ರಾಮದಲ್ಲಿ ಪಪ್ಪು ಉದಾನೆ, ಮಹಾದೇವ ಮಹಾಜನ ಸೇರಿದಂತೆ ಗ್ರಾಮದ ಯುವಕರು ಪಾಲ್ಗೊಂಡಿದ್ದರು.

ಜೋಡೆತ್ತು ಮೆರವಣಿಗೆ

ಹುಮನಾಬಾದ್: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಕಾರ ಹುಣ್ಣಿಮೆಯನ್ನು ರೈತರು ಸಂಭ್ರಮದಿಂದ ಆಚರಿಸಿದರು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ರೈತರು ಎತ್ತು ಸೇರಿ ಎಲ್ಲ ಜಾನುವಾರುಗಳ ಮೈ ತೊಳೆದು ವಿವಿಧ ರೀತಿಯ ಗೊಂಡೆ, ದಾಂಡು, ಹಣೆಕಟ್ಟು, ಗೆಜ್ಜೆ, ಹಣೆಬಾರು, ಹಣಿಗೆಜ್ಜೆ ಹಾಗೂ ಬಣ್ಣ ಹಂಚಿ ಅಲಂಕರಿಸಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.

ತಾಲ್ಲೂಕಿನ ಹಳ್ಳಿಖೇಡ್ ಕೆ. ಗ್ರಾಮದ ಯುವ ರೈತ ನಾಗರಾಜ ಗಡವಂತಿ ಅವರು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಎತ್ತುಗಳ ಮೆರವಣಿಗೆ ಮಾಡಿದರು.

ಲಿಂಗಾನಾಂದ ಚಿಕ್ಕಮಠ, ಸಂತೋಷ ಕೋರವಿ, ಸಿದ್ದು ಇಂಡಿ, ಮಹೇಶ ಗಡವಂತಿ , ಸಾಯಿಕೀರಣ ನೆಳಗಿ, ಸಂಜು ಸ್ವಂತ, ವಿವೇಕಾನಂದ ಕೋರಿ,‌ ರಾಚಣ್ಣಾ ಬುಕ್ಕಾ ,ಅಭೀಷೇಕ ಚಿಕಪಾಟೀಲ ಆಕಾಶ ಬಾಪುರೆ ಪ್ರಕಾಶ ಬಾವಗಿ ಹಾಗೂ ಸಾಗರ ಬುಕ್ಕಾ ಇದ್ದರು.

ಸರಳ ಆಚರಣೆ

ಭಾಲ್ಕಿ: ಮುಂಗಾರು ಹಂಗಾಮಿನ ರೈತರ ಮೊದಲ ಹಬ್ಬ ಕಾರ ಹುಣ್ಣಿಮೆಯನ್ನು ಪಟ್ಟಣದಲ್ಲಿ ಮಂಗಳವಾರ ಸರಳವಾಗಿ ಆಚರಿಸಲಾಯಿತು.

ಹಿರೇಮಠ ಸಂಸ್ಥಾನದ ಆವರಣದಲ್ಲಿ ಸಿಂಗರಿಸಿದ ಎತ್ತುಗಳಿಗೆ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಪೂಜೆ ಸಲ್ಲಿಸಿದರು. ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಎತ್ತುಗಳ ಮೇಲೆ ಪುಷ್ಪವೃಷ್ಟಿ ಮಾಡಿ ಈ ಬಾರಿಯ ಮುಂಗಾರಿನಲ್ಲಿ ಸಮೃದ್ಧವಾಗಿ ಮಳೆ ಬೆಳೆಯಾಗಿ ರೈತರು ಸಂಕಷ್ಟದಿಂದ ಪಾರಾಗಲಿ ಎಂದು ಹಾರೈಸಿದರು.

ಬಸವರಾಜ ಮರೆ ಸೇರಿದಂತೆ ಹಲವರು ಇದ್ದರು.

ಮೊದಲ ಹಬ್ಬ

ಭಾಲ್ಕಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲಬರ್ಗಾ, ಕರಡ್ಯಾಳ, ನಿಡೆಬನ, ಗೋರ ಚಿಂಚೋಳಿ ಸೇರಿದಂತೆ ವಿವಿಧೆಡೆ ಮಂಗಳವಾರ ಕಾರ ಹುಣ್ಣಿಮೆ ಅಂಗವಾಗಿ ರೈತರು ಎತ್ತುಗಳ ಮೈತೊಳೆದು, ಶೃಂಗರಿಸಿ ಆರತಿ ಎತ್ತಿ ನೈವೇದ್ಯ ಸಮರ್ಪಿಸಿದರು.

ಮುಂಗಾರು ಹಂಗಾಮು ಪ್ರಾರಂಭವಾಗುವ ಹೊತ್ತಿನಲ್ಲಿ ಬರುವ ರೈತರ ಮೊದಲ ಹಬ್ಬ ಇದು. ಉಳುಮೆ ಮಾಡಿದ ಎತ್ತುಗಳಿಗೆ ವಿಶ್ರಾಂತಿ ನೀಡಿ ಮುಂಗಾರಿನ ಕೃಷಿ ಕೆಲಸಕ್ಕೆ ತಯಾರಿ ನಡೆಸಲಾಗುತ್ತದೆ. ಎತ್ತುಗಳನ್ನು ಸಿಂಗರಿಸಲು ಗೆಜ್ಜೆ, ಲೂಜಾ, ಗುಮರಿ, ಗಂಟೆ, ಬಾಂಗಡಾ, ಬಾರಕೋಲು, ಹಗ್ಗ, ಮೂಗುದಾರ ಸೇರಿದಂತೆ ಹಲವು ವಸ್ತುಗಳನ್ನು ಅನ್ನದಾತರು ಖರೀದಿಸಿದ್ದರು.

ಕೃಷಿಕರಾದ ರಾಜಕುಮಾರ, ಸಂತೋಷ ಖಂಡಾಳೆ, ರಾಮಶೆಟ್ಟಿ ಖಂಡಾಳೆ, ಸಿದ್ರಾಮಪ್ಪಾ, ಕಾಶಿನಾಥ, ವಿಶ್ವನಾಥ ಹಾಗೂ ಸಾಯಿನಾಥ ಖಂಡಾಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT