ಬುಧವಾರ, ಜುಲೈ 6, 2022
22 °C

ಎಂಇಎಸ್, ಶಿವಸೇನೆ ನಿಷೇಧಕ್ಕೆ ಆಗ್ರಹ- ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕನ್ನಡಿಗರು ಹಾಗೂ ಮರಾಠಿಗರ ಮಧ್ಯೆ ದ್ವೇಷ ಹುಟ್ಟುಹಾಕುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನಾ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡ ಪರ ಸಂಘಟನೆಗಳ ಒಕ್ಕೂಟ)ಯ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಮಹಾರಾಷ್ಟ್ರ ಏಕೀಕರಣ ಸಮಿತಿ, ಶಿವಸೇನಾಗೆ ಧಿಕ್ಕಾರ, ಕರ್ನಾಟಕಕ್ಕೆ ಸೋಲಾಪುರ ಬೇಕು, ಅಕ್ಕಲಕೋಟ ಬೇಕು ಎನ್ನುವ ಘೋಷಣೆಗಳನ್ನು ಕೂಗಿದರು.

‘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ' ಎಂಬಿತ್ಯಾದಿ ಬರಹ ಹೊಂದಿದ್ದ ಪೋಸ್ಟರ್‌ಗಳನ್ನು ಹಿಡಿದು ಮೆರವಣಿಗೆ ಮಾಡಿ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಮಾತನಾಡಿ, ಬೆಳಗಾವಿಯಲ್ಲಿ ಎಂಇಎಸ್ ಹಾಗೂ ಶಿವಸೇನಾ ಕಾರ್ಯಕರ್ತರು ಮರಾಠಿಗರನ್ನು ಕನ್ನಡಿಗರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಪದೇ ಪದೇ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದ್ದಾರೆ. ಮಹಾರಾಷ್ಟ್ರದ ರಾಜಕಾರಣಿಗಳು ಹಾಗೂ ಅಲ್ಲಿನ ಸರ್ಕಾರದ ಬೆಂಬಲ ಇದಕ್ಕೆ ಇದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಮಂಡಲ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಎಂಇಎಸ್ ಕುಮ್ಮಕ್ಕಿನಿಂದ ಬೆಳಗಾವಿ ಬಂದ್ ನಡೆಸಲಾಗಿದೆ. ಬೆಳಗಾವಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಲಾಗಿದೆ. ಬಸವೇಶ್ವರ ಭಾವಚಿತ್ರಕ್ಕೆ ಸೆಗಣಿ ಸವರಿ ಅವಮಾನಿಸಲಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಎಂಇಎಸ್ ಹಾಗೂ ಶಿವಸೇನಾ ನಿಷೇಧಿಸಬೇಕು. ಸೋಲಾಪುರ ಹಾಗೂ ಅಕ್ಕಲಕೋಟಗಳನ್ನು ಕರ್ನಾಟಕಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ವೇದಿಕೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗೋಪಾಲ್ ಕುಲಕರ್ಣಿ, ಸಂಘಟನಾ ಕಾರ್ಯದರ್ಶಿಗಳಾದ ಸಂತೋಷ ಚಟ್ಟಿ, ಉದಯಕುಮಾರ ಅಷ್ಟೂರೆ, ಕಾರ್ಯದರ್ಶಿ ದತ್ತಾತ್ರಿ ಅಲ್ಲಂಕರೆ, ಸಂಚಾಲಕ ತುಕಾರಾಮ ಜಾನಕನೋರ, ನಗರ ಘಟಕದ ಅಧ್ಯಕ್ಷ ವಿಶ್ವನಾಥ ಗೌಡ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ವೀರಶೆಟ್ಟಿ ಗೌಸಪುರೆ, ಬಸವಕಲ್ಯಾಣ ತಾಲ್ಲೂಕು ಘಟಕದ ಅಧ್ಯಕ್ಷ ಸಂಜು ಯಾದವ್ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು