ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಪಶು ವೈದ್ಯಕೀಯ ವಿವಿ: ಯೋಧನ ಪುತ್ರಿ, ರೈತನ ಪುತ್ರನ ‘ಚಿನ್ನ'ದ ಸಾಧನೆ

ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಘಟಿಕೋತ್ಸವ
Last Updated 28 ಏಪ್ರಿಲ್ 2022, 10:46 IST
ಅಕ್ಷರ ಗಾತ್ರ

ಕಮಠಾಣ (ಬೀದರ್‌ ಜಿಲ್ಲೆ): ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ನಂದಿನಗರದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 12ನೇ ಘಟಿಕೋತ್ಸವದಲ್ಲಿ ಹರಿಯಾಣದ ರೇವಾಡಿಯ ಬಿ.ಎಸ್.ಎಫ್ ಯೋಧನ ಪುತ್ರಿ ಕನಿಕ ಯಾದವ್ ಹಾಗೂ ಬೆಳಗಾವಿ ಜಿಲ್ಲೆಯ ಹಾರೂಗೇರಿಯ ರೈತನ ಪುತ್ರ ಕಿರಣ್ ದರೂರ್ ‘ಚಿನ್ನ'ದ ಸಾಧನೆ ಮಾಡಿದರು.

ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯದ ಕನಿಕ ಯಾದವ್ 2019-20ನೇ ಸಾಲಿನ ಬಿ.ವಿ.ಎಸ್ಸಿ ಆ್ಯಂಡ್ ಎ.ಎಚ್. ಸ್ನಾತಕ ಪದವಿಯಲ್ಲಿ 13 ಚಿನ್ನದ ಪದಕಗಳನ್ನು ಪಡೆದುಕೊಂಡರೆ, ಬೆಂಗಳೂರು ಪಶು ವೈದ್ಯಕೀಯ ಮಹಾವಿದ್ಯಾಲಯದ ಕಿರಣ್ ದರೂರ್ 2020-21ನೇ ಸಾಲಿನ ಅದೇ ಸ್ನಾತಕ ಪದವಿಯಲ್ಲಿ 9 ಚಿನ್ನದ ಪದಕಗಳಿಗೆ ಕೊರಳೊಡ್ಡಿದರು.

ಕನಿಕ ತಂದೆ ಸುನೀಲಕುಮಾರ ಯೋಧರಾಗಿದ್ದರೆ, ತಾಯಿ ಸುನಿತಾ ಗೃಹಿಣಿಯಾಗಿದ್ದಾರೆ. ಸದ್ಯ ಬಿಕಾನೇರನಲ್ಲಿ ಪಿಜಿ ಓದುತ್ತಿರುವ ಕನಿಕ, ಪಿಎಚ್‍ಡಿ ಮಾಡುವ ಹಾಗೂ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುವ ಬಯಕೆ ಹೊಂದಿದ್ದಾರೆ.

ಅತಿಹೆಚ್ಚು ಚಿನ್ನದ ಪದಕ ಬಂದಿದ್ದಕ್ಕೆ ಬಹಳ ಖುಷಿಯಾಗಿದೆ. ಪ್ರಾಧ್ಯಾಪಕರ ಮಾರ್ಗದರ್ಶನ, ಪಾಲಕರ ಹಾಗೂ ಸ್ನೇಹಿತರ ಸಹಕಾರದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಹೀಗಾಗಿ ಚಿನ್ನದ ಪದಕಗಳನ್ನು ಅವರಿಗೆ ಸಮರ್ಪಿಸುತ್ತೇನೆ ಎಂದು ತಿಳಿಸಿದರು.

ಕಿರಣ್ ದರೂರ್ ತಂದೆ ಮಹಾದೇವ ಹಾಗೂ ತಾಯಿ ನಿರ್ಮಲಾ ಕೃಷಿಕರಾಗಿದ್ದಾರೆ. ಇಂದು ನಾನು 9 ಚಿನ್ನದ ಪದಕಗಳಿಗೆ ಪಾತ್ರನಾದದ್ದು ತಂದೆ-ತಾಯಿಯ ಬೆಂಬಲದಿಂದಲೇ ಎಂದು ಕಿರಣ್ ಹೆಮ್ಮೆಯಿಂದ ಹೇಳಿದರು.

ಹೆಚ್ಚು ಚಿನ್ನದ ಪದಕಗಳು ಬರಬಹುದು ಅಂದುಕೊಂಡಿದ್ದೆ. ಆದರೆ, 9 ಚಿನ್ನದ ಪದಕಗಳ ನಿರೀಕ್ಷೆ ಇರಲಿಲ್ಲ. ಅತೀವ ಸಂತಸವಾಗಿದೆ. ಮುಂದೆ ಸ್ನಾತಕೋತ್ತರ ಅಧ್ಯಯನ ಮಾಡಲಿದ್ದೇನೆ. ನಂತರ ಪಶು ವೈದ್ಯನಾಗಿ ಗ್ರಾಮೀಣ ಪ್ರದೇಶದ ಪಶುಗಳ ಸೇವೆ ಹಾಗೂ ರೈತರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಲಿದ್ದೇನೆ ಎಂದು ತಮ್ಮ ಮನದಾಳವನ್ನು ಬಿಚ್ಚಿಟ್ಟರು.

ಘಟಿಕೋತ್ಸವದಲ್ಲಿ 2018-19, 2019-20 ಹಾಗೂ 2020-21ನೇ ಸಾಲಿನ ಒಟ್ಟು 1,012 ವಿದ್ಯಾರ್ಥಿಗಳಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಪದವಿ ಹಾಗೂ 154 ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.

ವಿಶ್ವವಿದ್ಯಾಲಯದ ಸಹ ಕುಲಾಧಿಪತಿಯಾದ ಪಶು ಸಂಗೋಪನಾ ಸಚಿವ ಪ್ರಭು ಚವಾಣ್, ನವದೆಹಲಿಯ ಐಸಿಎಆರ್ ಪ್ರಾಣಿ ವಿಜ್ಞಾನ ವಿಭಾಗದ ಉಪ ಮಹಾನಿರ್ದೇಶಕ ಡಾ. ಭುಪೇಂದ್ರನಾಥ ತ್ರಿಪಾಠಿ, ಕುಲಪತಿ ಡಾ. ಕೆ.ಸಿ. ವೀರಣ್ಣ, ರಿಜಿಸ್ಟ್ರಾರ್ ಡಾ. ಬಿ.ವಿ. ಶಿವಪ್ರಕಾಶ, ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT