ತನಿಖೆ ನಡೆಸಿ ಶಿಸ್ತು ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ
‘ಜನಿವಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸದ ಪ್ರಕರಣದ ತನಿಖೆಯನ್ನು ಉಪವಿಭಾಗಾಧಿಕಾರಿ ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಿ, ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಬೇಕು. 24 ಗಂಟೆಯೊಳಗೆ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ನಿರ್ದೇಶನ ನೀಡಿದ್ದಾರೆ. ‘ಬೀದರ್‌ನ ಚೌಬಾರ ನಿವಾಸಿ ಸುಚಿವ್ರತ್ ಅವರು ಕೆ–ಸಿಇಟಿ ಗಣಿತ ವಿಷಯದ ಪರೀಕ್ಷೆ ಬರೆಯಲು ಸಾಯಿ ಸ್ಫೂರ್ತಿ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದರು. ಜನಿವಾರ ತೆಗೆದಿಡದ ಹೊರತು ಪರೀಕ್ಷಾ ಕೊಠಡಿಗೆ ಬಿಡುವುದಿಲ್ಲ ಎಂದು ಸಿಬ್ಬಂದಿ ತಡೆ ಒಡ್ಡಿದ್ದಾರೆ. ಆ ವಿದ್ಯಾರ್ಥಿ ಪರೀಕ್ಷೆ ಬರೆಯದೇ ಮನನೊಂದು ಮನೆಗೆ ತೆರಳಿದ್ದಾನೆ. ಆ ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯವೇ ನಾಶವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.