ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಲ್ಲುವ ಭಾಷೆ ಬಲಿಷ್ಠ, ಗೆಲ್ಲುವ ಭಾಷೆ ಪೇಲವ

21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಸಾಹಿತಿ ಶಿವಗಂಗಾ ರುಮ್ಮಾ ವಿಷಾದ
Published 10 ಮಾರ್ಚ್ 2024, 13:49 IST
Last Updated 10 ಮಾರ್ಚ್ 2024, 13:49 IST
ಅಕ್ಷರ ಗಾತ್ರ

ಬೀದರ್‌: ‘ಕೊಲ್ಲುವ ಭಾಷೆ ಹತ್ತು ದಿಕ್ಕುಗಳಿಂದ ಬಲಿಷ್ಠವಾಗಿ ಬರುತ್ತಿದೆ. ಗೆಲ್ಲುವ ಭಾಷೆಯೇಕೆ ಪೇಲವವಾಗುತ್ತಿದೆ’ ಎಂದು ಸಾಹಿತಿ ಶಿವಗಂಗಾ ರುಮ್ಮಾ ಪ್ರಶ್ನಿಸಿದರು.

21ನೇ ಬೀದರ್‌ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾವ್ಯಗಳು ಸಾರ್ವತ್ರಿಕವಾಗಿರಬೇಕು. ಕಾವ್ಯ ಜೀವಂತವಾಗಿರಬೇಕಾದರೆ ಅವು ಸಾರ್ವತ್ರಿಕವಾಗಿರುವುದು ಬಹಳ ಮುಖ್ಯ. ಕಾವ್ಯ ತಲ್ಲಣಗೊಳಿಸದಿದ್ದರೆ ಏನು ಪ್ರಯೋಜನ? ಇದರ ಬಗ್ಗೆ ಕವಿಗಳಾದವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮೊಘಲರ ಕಾಲದಲ್ಲಿ, ವಿಜಯನಗರ ಅರಸರ ಕಾಲದಲ್ಲಿ, ಬ್ರಿಟಿಷರ ಕಾಲದಲ್ಲಿ, ಸ್ವಾತಂತ್ರ್ಯ ಬಂದ ನಂತರ ಹೀಗೆ ಬೇರೆ ಬೇರೆ ಕಾಲಘಟ್ಟದಲ್ಲಿ ಕಾವ್ಯಗಳನ್ನು ಹೇಗೆ ರಚಿಸಲಾಗಿತ್ತು. ಅವರೆಲ್ಲ ಹೇಗೆ ಬರೆಯುತ್ತಿದ್ದರು ಎನ್ನುವುದನ್ನು ಆಧುನಿಕ ಕವಿಗಳು ಪ್ರಶ್ನಿಸಿಕೊಳ್ಳಬೇಕು ಎಂದು ತಿಳಿಸಿದರು.

ನಾನು ಬರೆದ ಕಾವ್ಯ ನನ್ನ ಅನ್ನ, ಉದ್ಯೋಗ, ಶಿಕ್ಷಣಕ್ಕೆ ಒತ್ತು ಕೊಡದಿದ್ದರೆ ಅದು ನಮ್ಮ ಮಕ್ಕಳಿಗೆ ಮುಟ್ಟುವುದಿಲ್ಲ. ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ, ಆಉತ್ತಿದೆ ಎನ್ನುವುದರ ಬಗ್ಗೆ ಕವಿಗಳಿಗೆ ಅರಿವಿರಬೇಕು. ಈಗ ಪ್ರಶ್ನಿಸುವವರನ್ನು ವಿಲನ್‌, ಒಬ್ಬಂಟಿ ಮಾಡಲಾಗುತ್ತಿದೆ. ಹೆಜ್ಜೆ ಹೆಜ್ಜೆಗೂ ಬಸವಾದಿ ಶರಣರ ಹೆಸರುಗಳನ್ನು, ವಿಚಾರಗಳನ್ನು ಹೇಳುತ್ತೇವೆ. ಆದರೆ, ಅವರು ತಿಳಿಸಿದ ಹಾಗೆ ಪ್ರಶ್ನಿಸುವುದನ್ನು ನಾವು ಬಿಟ್ಟಿದ್ದೇವೆ ಎಂದರು.

ನಮ್ಮ ಬರವಣಿಗೆಯಲ್ಲಿ ರಾಜಕೀಯ ಪ್ರಜ್ಞೆ ಇರದಿದ್ದರೆ ಬಸವಾದಿ ಶರಣರು ನಮಗೆ ಅರ್ಥವಾಗುವುದಿಲ್ಲ. ಯಾಕೆ ಕಾವ್ಯ ಓದಬೇಕು? ಯಾಕೆ ನಾವು ಸಮಕಾಲೀನ ವಿಷಯಗಳ ಕುರಿತು ಕಾವ್ಯ ಬರೆಯುತ್ತಿಲ್ಲ ಎಂಬುದನ್ನು ನಾವ್ಯಾಕೆ ಕೇಳಿಕೊಳ್ಳುತ್ತಿಲ್ಲ. ಧ್ಯಾನಸ್ಥ ಸ್ಥಿತಿಯಲ್ಲಿ ಕಾವ್ಯದ ಆಳಕ್ಕೆ ಇಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕ ವಿಕ್ರಂ ವಿಸಾಜಿ ಆಶಯ ನುಡಿಗಳನ್ನಾಡುತ್ತ, ಹೊಸ ಕವಿಗಳು ಪುರಾಣ, ಜನಪದ, ಹಳ್ಳಿ, ನಿಸರ್ಗ, ಒಕ್ಕಲುತನದಿಂದ ದೂರವಾಗಿದ್ದಾರೆ. ಜೀವಾನಾನುಭವ ಕಾವ್ಯದಿಂದ ವಂಚಿತವಾಗುತ್ತಿದೆ. ಭಾಷೆಯ ದೃಷ್ಟಿಯಿಂದ ಬದಲಾಗುತ್ತಿದ್ದೇವೆ. ಇದು ಅಪಾಯಕಾರಿ ಸೂಚನೆ. ಉದಾಸೀನರಾಗಿ ಕಾವ್ಯ ಬರೆಯುವ ಕಾಲ ಇದಲ್ಲ ಎಂದು ಎಚ್ಚರಿಸಿದರು.

ಕವಿತೆ ಸಂತೋಷವೂ ಹೌದು, ದರ್ಶನವೂ ಹೌದು. ವಚನ, ತತ್ವಪದ, ಕೀರ್ತನೆಗಳು ಜೀವನದ ಮೌಲ್ಯಗಳನ್ನು ಅರ್ಥಪೂರ್ಣ ಭಾಷೆಯಲ್ಲಿ ಕಟ್ಟಿಕೊಡಲಾಗಿದೆ. ಕಾವ್ಯ ಇಲ್ಲದ ಜಗತ್ತಿನ ಕಲ್ಪನೆಯೇ ಕಷ್ಟ. ಕಾವ್ಯ ಜನಜೀವನದಲ್ಲಿ ಹಾಸು ಹೊಕ್ಕಾಗಿದೆ. ಮದುವೆ, ತೊಟ್ಟಿಲು ಸೇರಿದಂತೆ ಏನೇ ಇರಲಿ ಅದರೊಂದಿಗೆ ಕಾವ್ಯ ಬೆಸೆದುಕೊಂಡಿದೆ. ಕಾವ್ಯದ ಜತೆಗೆ ಜೀವನದ ಆರಂಭ ಹಾಗೂ ಮುಕ್ತಾಯವಾಗುತ್ತದೆ. ಅದಕ್ಕೆ ಪವಿತ್ರ ಸ್ಥಾನವಿದೆ ಎಂದು ಹೇಳಿದರು.

ಕಾವ್ಯದ ಭಾಷೆ ಬದಲಾಗುತ್ತಿದೆ. ಆಗ ಜಗತ್ತು ನೋಡುವ ಕ್ರಮವೂ ಬದಲಾಗುತ್ತೆ. ಜಗತ್ತನ್ನು ಆರೋಗ್ಯಪೂರ್ಣ, ವೈಚಾರಿಕವಾಗಿ ನೋಡಿದವರು ದಾರ್ಶನಿಕರಾಗಿದ್ದಾರೆ. ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ರನ್ನ, ಪಂಪ, ಕವಿರಾಜಮಾರ್ಗಕಾರ ನಮ್ಮ ಪ್ರತಿಯೊಂದು ಮಾತಿನಲ್ಲಿ ಇದ್ದಾರೆ. ಆದರೆ, ಹಿಂದಿ, ಇಂಗ್ಲಿಷ್‌ ಸೇರಿದಂತೆ ಬೇರೆ ಭಾಷೆಗಳಲ್ಲಿ ಇದು ಇಲ್ಲ. ಸಾವಿರಾರು ಲೋಕ ದರ್ಶನ, ಯೋಚನಾ ಕ್ರಮಗಳು ಕನ್ನಡ ಕಾವ್ಯ ಲೋಕದಲ್ಲಿವೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಬಸವಕಲ್ಯಾಣ ಹರಳಯ್ಯ ಪೀಠದ ಅಕ್ಕ ಗಂಗಾಂಬಿಕೆ, ಶ್ರೀದೇವಿ ಹೂಗಾರ, ಕಸ್ತೂರಿ ಪಟಪಳ್ಳಿ, ಗಂಗಶೆಟ್ಟಿ ಖಾನಾಪುರ, ಬಸವರಾಜ ಬಶೆಟ್ಟಿ ಹಾಜರಿದ್ದರು. 40 ಕವಿಗಳು ಕವನ ವಾಚನ ಮಾಡಿದರು.

ಸಾಹಿತ್ಯ ಸಮ್ಮೇಳನದ ಎರಡನೇ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು
ಸಾಹಿತ್ಯ ಸಮ್ಮೇಳನದ ಎರಡನೇ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು
ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಚಿತ್ರಸಂತೆಯಲ್ಲಿ ಕಲಾಕೃತಿಯನ್ನು ವೀಕ್ಷಿಸಿದ ಸಾಹಿತ್ಯಾಸಕ್ತರು
–ಪ್ರಜಾವಾಣಿ ಚಿತ್ರಗಳು
ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಚಿತ್ರಸಂತೆಯಲ್ಲಿ ಕಲಾಕೃತಿಯನ್ನು ವೀಕ್ಷಿಸಿದ ಸಾಹಿತ್ಯಾಸಕ್ತರು –ಪ್ರಜಾವಾಣಿ ಚಿತ್ರಗಳು

Highlights -

Quote - ನಮ್ಮ ಸುತ್ತಮುತ್ತಲಿನ ಪರಿಸರ ಕುಲುಮೆಯಲ್ಲಿ ಬೇಯುವಾಗ ವೈಯಕ್ತಿಕ ವಿಷಯಗಳ ಕುರಿತು ಕಾವ್ಯ ಬರೆಯುವುದು ಹೇಳುವುದು ಎಷ್ಟು ಸರಿ. –ಶಿವಗಂಗಾ ರುಮ್ಮಾ ಸಾಹಿತಿ

Quote - ಕಾವ್ಯದ ಭಾಷೆ ಚಪ್ಪಟೆ ಸಪ್ಪೆ ಏಕಮುಖವಾಗುತ್ತಿದೆ. ಹೊಸ ಸ್ತರಗಳಿಗೆ ಸಮಕಾಲೀನ ಕಾವ್ಯಗಳು ಹೋಗುತ್ತಿಲ್ಲ. –ವಿಕ್ರಂ ವಿಸಾಜಿ ಲೇಖಕ

Cut-off box - ಎರಡನೇ ದಿನವೂ ಸಂಭ್ರಮ 21ನೇ ಬೀದರ್‌ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಕೂಡ ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಸಂಭ್ರಮ ಮನೆ ಮಾಡಿತು. ಬೆಳಿಗ್ಗೆ ಕವಿಗೋಷ್ಠಿ ನಡೆಯಿತು. ಮಧ್ಯಾಹ್ನವೆಲ್ಲ ಗೋಷ್ಠಿಗಳು ಜರುಗಿದವು. ಸಂಜೆ ಮತ್ತೊಂದು ಕವಿಗೋಷ್ಠಿಗೆ ಸಮ್ಮೇಳನ ಸಾಕ್ಷಿಯಾಯಿತು. ಇದಾದ ಬಳಿಕ ಬಹಿರಂಗ ಅಧಿವೇಶನ ನಡೆಯಿತು.  ಎಲ್ಲ ಗೋಷ್ಠಿಗಳಲ್ಲಿ ಸಾಹಿತ್ಯಾಸಕ್ತರು ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ ಉಪ್ಪಿಟ್ಟು ಪುಲಾವ್‌ ಉಪಾಹಾರಕ್ಕೆ ವ್ಯವಸ್ಥೆ ಮಾಡಿದರೆ ಮಧ್ಯಾಹ್ನ ರೊಟ್ಟಿ ಭಜ್ಜಿ ಹುಗ್ಗಿ ಅನ್ನ ಸಾಂಬಾರ ಮಿರ್ಚಿ ಹಪ್ಪಳ ಅಂಬ್ಲಿ ಇಡಲಾಗಿತ್ತು.  ಗೋಷ್ಠಿಗಳ ಜೊತೆಗೆ ಛಾಯಾಚಿತ್ರ ಪ್ರದರ್ಶನ ಚಿತ್ರಕಲಾ ಪ್ರದರ್ಶನವನ್ನು ಜನ ವೀಕ್ಷಿಸಿದರು. ದಿನವಿಡೀ ರಂಗಮಂದಿರದಲ್ಲಿ ಜಾತ್ರೆಯ ವಾತಾವರಣ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT