ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಗಳಿ ಏತ ನೀರಾವರಿ ಯೋಜನೆ: ಹೆಚ್ಚುವರಿ 45 ತಿಂಗಳಾದರೂ ಕಾಮಗಾರಿ ಅಪೂರ್ಣ

ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಪೂರ್ಣಗೊಳ್ಳದ ಕೊಂಗಳಿ ಏತ ನೀರಾವರಿ ಯೋಜನೆ–ರೈತರ ಆರೋಪ
ಗುರುಪ್ರಸಾದ ಮೆಂಟೇ
Published 12 ಡಿಸೆಂಬರ್ 2023, 6:42 IST
Last Updated 12 ಡಿಸೆಂಬರ್ 2023, 6:42 IST
ಅಕ್ಷರ ಗಾತ್ರ

ಹುಲಸೂರ: ಎರಡು ವರ್ಷದ ಕಾಲಮಿತಿಯೊಳಗೆ ಪೂರ್ಣಗೊಳ್ಳ ಬೇಕಿದ್ದ ಕೊಂಗಳಿ ಏತ ನೀರಾವರಿ ಯೋಜನೆ ಹೆಚ್ಚುವರಿ 45 ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ. ನಿಧಾನಗತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆದಾರರ ವಿರುದ್ಧ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್‌ ಅಡಿಯಲ್ಲಿ ತಾಲ್ಲೂಕಿನ ಗೋವರ್ಧನ ತಾಂಡಾ ಸಮೀಪ ನಿರ್ಮಾಣಗೊಳ್ಳುತ್ತಿರುವ ಕೊಂಗಳಿ ಏತ ನೀರಾವರಿ ಯೋಜನೆಯ ಕಾಮಗಾರಿ 2020ರ ಮಾರ್ಚ್ 26ಕ್ಕೆ ಮುಗಿಯಬೇಕಿತ್ತು. ಆದರೆ, ಹೆಚ್ಚುವರಿ 45 ತಿಂಗಳು ಉರುಳಿದರೂ ಇನ್ನೂ ಮುಗಿದಿಲ್ಲ.

‘ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಬೃಹತ್ ನೀರಾವರಿ ಯೋಜನೆಗಳು
ಎರಡು ವರ್ಷದೊಳಗೆ ಪೂರ್ಣಗೊಳ್ಳುತ್ತವೆ. ಆದರೆ, ಇದು ಏಕೆ ಪೂರ್ಣವಾಗಿಲ್ಲ? ನಿರಾಸಕ್ತಿ ಎದ್ದು ಕಾಣುತ್ತಿದೆ. ಗುತ್ತಿಗೆದಾರ ಯಾರೇ ಇರಲಿ. ಕಾಮಗಾರಿ ಸ್ಥಳದಲ್ಲೇ ಅವರು ಠಿಕಾಣಿ ಹೂಡಿ ಹಗಲು-ರಾತ್ರಿ ಕೆಲಸ ಮಾಡಬೇಕು’ ಎಂದು ಕ್ಷೇತ್ರದ ಶಾಸಕ ಶರಣು ಸಲಗರ ಅವರು ಎಚ್ಚರಿಕೆ ನೀಡಿದ್ದರು.

ಯೋಜನೆ ಟೆಂಡರ್ ಕೈಗೆತ್ತಿಕೊಂಡಿರುವ ಮಂಗಳೂರಿನ ಒಷಿಯನ್ ಕನಸ್ಟ್ರಕ್ಷನ್ ಕಂಪನಿಯ ಗುತ್ತಿಗೆದಾರರೊಂದಿಗೆ ಹಾಗೂ ಸಹಾಯಕ ಎಂಜಿನಿಯರ್‌ ಎಚ್.ಡಿ. ಪಾಟೀಲ ಮತ್ತು ಯೋಜನೆಗೆ ಸಂಬಂಧಿಸಿದ ಇನ್ನಿತರ ಸಿಬ್ಬಂದಿಯವರೊಂದಿಗೆ ಶಾಸಕರು ಸತತ ಕರೆ ಮಾಡಿ ಕಾಮಗಾರಿ ಪೂರ್ಣಗೊಳಿಸಲು ತಾಕೀತು ಮಾಡಿದರೂ ಅವರ ಮಾತಿಗೆ ಬೆಲೆ ಇಲ್ಲದಂತಾಗಿದೆ. ಮೇಲಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡದಿರುವುದು ವಿಪರ್ಯಾಸ.

‘ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಿದೆ. ಈ ನಡುವೆ ಬತ್ತಿ ಹೋಗಿರುವ ಹತ್ತಾರು ಕೆರೆಗಳು ಹಾಗೂ ಸಾವಿರಾರು ರೈತರು ಈ ಯೋಜನೆಯನ್ನೇ ನಂಬಿ ಕುಳಿತ್ತಿದ್ದಾರೆ. ರೈತರ ಹಾಗೂ ಜನಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಈ ಯೋಜನೆ ರೂಪಿಸಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ’ ಎಂದು ರೈತರು ದೂರಿದ್ದಾರೆ.

ಏತ ನೀರಾವರಿ ಯೋಜನೆಗೆ ಜಮೀನು ನೀಡಿರುವ ಹಲವು ರೈತರು ‘ನಮ್ಮ ಖಾತೆಗೆ ಹಣ ಜಮೆ ಮಾಡಿಲ್ಲ’ ಎಂದು ‘ಪ್ರಜಾವಾಣಿ’ ಎದುರು ಗೋಳು ತೋಡಿಕೊಂಡರು.

‘ನಮ್ಮ ಜಮೀನು ಕೊಂಗಳಿ ಏತ ನೀರಾವರಿ ಯೋಜನೆ ಕಾಮಗಾರಿಗೆ ನೀಡಲಾಗಿದೆ. ಆದರೆ, ಇಲಾಖೆಯವರು ಇದುವರೆಗೆ ಹಣ ಕೊಟ್ಟಿಲ್ಲ. ಜಮೀನಿನ ಹಣ ಶೀಘ್ರವೇ ಬಿಡುಗಡೆ ಮಾಡಬೇಕು. ಜಿಲ್ಲಾಡಳಿತ ಈ ವಿಷಯದ ಕುರಿತು ಗಮನ ಹರಿಸಿ ರೈತರ ನೆರವಿಗೆ ಮುಂದಾಗಬೇಕು’ ಎಂದು ಕೊಂಗಳಿ ಗ್ರಾಮದರೈತರಾದ ಶಿನಾಬಾಯಿ ತುಕಾರಾಮ, ದಾದರಾವ ಮದಕಟ್ಟೆ, ಸುಮನಬಾಯಿ ಬಿರಾದಾರ ಹಾಗೂ ಜಮಖಂಡಿ ಗ್ರಾಮದ ರೈತರಾದ ರಂಜನಾ ನಾಗನಾಥ, ದಿಲೀಪ ಗಣಪತರಾವ, ಬಾಲಾಜಿ ಶೆಡೋಳೆ, ದಾದರಾವ ಬಿರಾದಾರ ಮನವಿ ಮಾಡಿದರು.

ವರ್ಷಗಳೇ ಕಳೆದರೂ ಕಾಮಗಾರಿ ಪೂರ್ಣಗೊಳ್ಳದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ಅಧಿವೇಶನದಲ್ಲಿ ಧ್ವನಿ ಎತ್ತಬೇಕು. ಕಾಮಗಾರಿ ಶೀಘ್ರ ಪೂರ್ಣಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ
ಮಲ್ಲಿಕಾರ್ಜುನ ಸ್ವಾಮಿ,ಜಿಲ್ಲಾಧ್ಯಕ್ಷ, ಕರ್ಣಾಟಕ ರಾಜ್ಯ ರೈತ ಸಂಘ, ಬೀದರ್
ಕೆರೆಗಳಲ್ಲಿ ನೀರಿನ ಪ್ರಮಾಣ ಕುಸಿತ
ಹುಲಸೂರ ತಾಲ್ಲೂಕಿನ ಬೇಲೂರ, ಗುತ್ತಿ, ಮಿರಕಲ್‌, ನಾರಾಯಣಪುರ, ತ್ರಿಪುರಾಂತ, ಬೇಟಬಾಲ್ಕುಂದ, ಧನ್ನೂರ ಸೇರಿ 8 ಕೆರೆಗಳ ಪ್ರದೇಶ ಮಳೆಯಾಶ್ರಿತವಾಗಿವೆ. ರೈತರು ಕೆರೆ ಮತ್ತು ಕುಂಟೆಗಳ ನೀರನ್ನು ಬಳಸಿಕೊಂಡೇ ವಿವಿಧ ಬೆಳೆ, ಕಬ್ಬು, ತರಕಾರಿ ಬೆಳೆದು ಜೀವನ ಸಾಗಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಜೊತೆಗೆ ಕೆರೆಗಳಲ್ಲಿ ಹೂಳು ತುಂಬಿಕೊಂಡು ನೀರಿನ ಸಂಗ್ರಹ ಪ್ರಮಾಣ ಕುಸಿತ ಕಂಡಿದೆ. ಇದರಿಂದ ಈ ಭಾಗದಲ್ಲಿ ಅಂತರ್ಜಲವೂ ಕಡಿಮೆಯಾಗಿದೆ. ಆದ್ದರಿಂದ ನೀರಾವರಿ ಇಲಾಖೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತಂದಿದೆ.
1,500 ಎಕರೆ ನೀರಾವರಿ ಸೌಲಭ್ಯ
₹188 ಕೋಟಿ ಯೋಜನೆ ವೆಚ್ಚ ಇರುವ ಕೊಂಗಳಿ ಏತ ನೀರಾವರಿ ಯೋಜನೆಯ ಅಡಿಯಲ್ಲಿ ಬರುವ ಬೇಲೂರ ಗ್ರಾಮದ ಕೆರೆಗೆ ನೀರು ತುಂಬಿಸುವ ಮೂಲಕ ಸುತ್ತಲಿನ ಹಳ್ಳಿಗಳಲ್ಲಿ ಮಳೆಯಾಶ್ರಿತ ಸುಮಾರು 1,500 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ದನ–ಕರುಗಳಿಗೆ ಮತ್ತು ನಾಗರಿಕರ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT