ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಜಿಲ್ಲೆಯಲ್ಲಿ 30,505 ಎಕರೆ ಭೂ ಕಬಳಿಕೆ!

ಪ್ರಭಾವಿಗಳು, ಭೂಮಾಫಿಯಾಗಳು, ಅಧಿಕಾರಿಗಳ ಶಾಮೀಲಿನಿಂದ ಕೃತ್ಯ; ಒತ್ತುವರಿ ತೆರವಿಗೆ ನಿರಾಸಕ್ತಿ
Last Updated 19 ಸೆಪ್ಟೆಂಬರ್ 2022, 5:31 IST
ಅಕ್ಷರ ಗಾತ್ರ

ಬೀದರ್‌: ಪ್ರಭಾವಿಗಳು, ಭೂಮಾಫಿಯಾಗಳು ಹಾಗೂ ಕೆಲ ಭ್ರಷ್ಟ ಅಧಿಕಾರಿಗಳಿಂದಾಗಿ ಜಿಲ್ಲೆಯಲ್ಲಿ ಒಟ್ಟು 30,505 ಎಕರೆ ಭೂ ಕಬಳಿಕೆಯಾಗಿರುವುದು ಬೆಳಕಿಗೆ ಬಂದಿದೆ. ಭೂಮಾಫಿಯಾಗಳು ಐತಿಹಾಸಿಕ ಸ್ಮಾರಕವಿರುವ ಜಾಗ ಹಾಗೂ ಉದ್ಯಾನಗಳನ್ನೂ ಬಿಟ್ಟಿಲ್ಲ. ಹಲವು ವರ್ಷಗಳಿಂದ ಜಿಲ್ಲೆಯಲ್ಲೇ ಬೀಡು ಬಿಟ್ಟಿರುವ ಅಧಿಕಾರಿಗಳಿಗೆ ಈ ವಿಷಯ ಗೊತ್ತಿದ್ದರೂ ಅವರು ಜಾಣ ಮೌನ ವಹಿಸಿರುವ ಕಾರಣ ಸರ್ಕಾರಿ ಜಮೀನು ಒತ್ತುವರಿ ಮುಂದುವರಿದಿದೆ.

ಜಿಲ್ಲೆಯಲ್ಲಿರುವ 90,294 ಎಕರೆ ಸರ್ಕಾರಿ ಜಮೀನು ಪೈಕಿ 30,505 ಎಕರೆ ಕಬಳಿಕೆಯಾಗಿದೆ. ಸಾರ್ವಜನಿಕರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕೇವಲ 3,833 ಎಕರೆ ಜಮೀನನಲ್ಲಿಯ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ. ಉಳಿದ ಜಮೀನು ಭೂಮಾಫಿಯಾಗಳ ಅಧೀನದಲ್ಲಿಯೇ ಇದೆ. ಬೀದರ್ ತಾಲ್ಲೂಕಿನಲ್ಲಿ ಒಟ್ಟು 20,364 ಎಕರೆ ಸರ್ಕಾರಿ ಜಮೀನು ಇದೆ. 7,699 ಎಕರೆ ಜಮೀನು ಅತಿಕ್ರಮಣವಾಗಿದೆ. ಇದರಲ್ಲಿ 756 ಎಕರೆ ಜಮೀನು ಅತಿಕ್ರಮಣ ತೆರವುಗೊಳಿಸಲಾಗಿದೆ. ಬೀದರ್‌ನಲ್ಲಿ 940 ಎಕರೆ ಹಾಗೂ ಕಮಲನಗರದಲ್ಲಿ 141 ಎಕರೆ ಜಮೀನು ಒತ್ತುವರಿ ತೆರವು ಬಾಕಿ ಇದೆ. ಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 96 ಪ್ರಕರಣಗಳು ನ್ಯಾಯಾಲಯದಲ್ಲಿ ಇವೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳೇ ಹೇಳುತ್ತಾರೆ.

ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಜಿಲ್ಲಾಡಳಿತದ ಮೂಲಕ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಮೇಲೆ ಒತ್ತಡ ಹಾಕಿದರೂ ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡುತ್ತಿಲ್ಲ. ಸರ್ಕಾರಿ ಭೂ ಕಬಳಿಕೆ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು. ಆದರೆ, ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ಸಹ ಭೂ ಕಬಳಿಕೆಗೆ ಕಾರಣವಾಗಿದೆ.

70 ವರ್ಷಗಳಲ್ಲಿ ಬೀದರ್ ಜಿಲ್ಲೆಗೆ ಇಬ್ಬರೇ ಖಡಕ್ ಅಧಿಕಾರಿಗಳು ಬಂದು ಹೋಗಿದ್ದಾರೆ. ಅವರೆಂದರೆ ಒಬ್ಬರು ಮುನಿಶ್‌ ಮೌದ್ಗಿಲ್‌, ಇನ್ನೊಬ್ಬರು ಹರ್ಷ ಗುಪ್ತ. ಇವರು ಜಿಲ್ಲಾಧಿಕಾರಿಯಾಗಿದ್ದ ಅವಧಿ ಬಿಟ್ಟರೆ ಉಳಿದವರ ಅವಧಿಯಲ್ಲಿ ಹೆಚ್ಚು ಭೂಮಿ ಅತಿಕ್ರಮಣ ಆಗಿದೆ. ಕೆಲ ಕಡೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಕಬಳಿಕೆ ಮಾಡಲಾಗಿದೆ. ಅನೇಕ ಕಡೆ ಅರಣ್ಯ ಇಲಾಖೆ ಭೂಮಿಯನ್ನು ಕಬಳಿಸಲಾಗಿದೆ.

ಜಿಲ್ಲೆಯಲ್ಲಿ ಭೂಮಾಫಿಯಾ ವ್ಯಾಪಕವಾಗಿ ಬೆಳೆದಿದೆ. ಸರ್ಕಾರಿ ಕಚೇರಿ ಗಳಲ್ಲೇ ಆಸ್ತಿ ವಹಿಗಳನ್ನು ಸರಿಯಾಗಿ ನಿರ್ವಹಿಸಿಲ್ಲ. ಭೂಮಾಫಿಯಾಗಳ ವಿರುದ್ಧ ಸಾರ್ವಜನಿಕರು ಪೊಲೀಸರಿಗೆ ದೂರು ಕೊಟ್ಟರೂ ಸಿವಿಲ್‌ ಮ್ಯಾಟರ್‌ ಎಂದು ಹೇಳಿ ನ್ಯಾಯಾಲಯದತ್ತ ಬೊಟ್ಟು ಮಾಡುತ್ತಿದ್ದಾರೆ. ಇದರಿಂದ ಭೂಮಾಫಿಯಾಗಳಿಗೆ ಭಯವೇ ಇಲ್ಲದಂತಾಗಿದೆ. ಇದನ್ನು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯೂ ಒಪ್ಪಿಕೊಂಡಿದೆ.

ಬೀದರ್‌ ನಗರದ ಜ್ಯೋತಿ ಕಾಲೊನಿಯಲ್ಲಿ ವೈದ್ಯರೊಬ್ಬರು ರಸ್ತೆ ಅತಿಕ್ರಮಣ ಮಾಡಿ ಬಾಳೆ ತೋಟ ಮಾಡಿದ್ದಾರೆ. ನಗರದ 130 ಉದ್ಯಾನ ಗಳಲ್ಲಿ ಜಾಗ ಒತ್ತುವರಿ ಮಾಡಿ ಮಂದಿರ ನಿರ್ಮಾಣ ಮಾಡಲಾಗಿದೆ. ಹಿಂದೆ ನಗರಸಭೆಯ ಅಧಿಕಾರಿಗಳೇ ಇದಕ್ಕೆ ಸಹಕಾರ ನೀಡಿದ್ದಾರೆ. ಅತಿಕ್ರಮಣ ತೆರವಿಗೆ ಜಿಲ್ಲೆಯ ಅನೇಕ ಸಂಘಟನೆಗಳು ಜಿಲ್ಲಾಡಳಿತಕ್ಕೆ ಹಲವು ಬಾರಿ ಲಿಖಿತ ಮನವಿ ಸಲ್ಲಿಸಿವೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ ಎಂದು ವಿಶ್ವ ಕನ್ನಡಿಗರ ಸಂಸ್ಥೆಯ ರಾಜ್ಯ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಹಾಗೂ ಮುಖಂಡ ಸಂತೋಷ ಜೋಳದಾಬಕೆ ಬೇಸರ ವ್ಯಕ್ತಪಡಿಸುತ್ತಾರೆ. ಮಂಗಲಪೇಟೆ, ಚಿದ್ರಿ, ಯದಲಾಪುರದಲ್ಲಿ ಕೆಲವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಕೊಂಡಂತೆ ಮಾಡಿ ಅದನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಪೊಲೀಸ್‌ ಠಾಣೆಗಳಲ್ಲೂ ದೂರು ದಾಖಲಿವೆ. ಹುಮನಾಬಾದ್ ತಾಲ್ಲೂಕಿನಲ್ಲಿ ಪುರಸಭೆ ವತಿಯಿಂದ 1,200 ನಿವೇಶನಗಳನ್ನು ಅಕ್ರಮವಾಗಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾಗಿದೆ. ಇದೆಲ್ಲ ಅಧಿಕಾರಿಗಳ ಕಣ್ಣೆದುರೇ ನಡೆಯುತ್ತಿದ್ದರೂ ಕೇಳುವವರಿಲ್ಲ.

ಅಧಿಕಾರಿಗಳು ಒತ್ತುವರಿಯನ್ನು ಸೂಕ್ಷ್ಮವಾಗಿ ಗಮನಿಸುವುದರ ಜತೆಗೆ ಜಮೀನಿನ ರಕ್ಷಣೆ ಮಾಡಬೇಕು. ಭೂಕಬಳಿಕೆಗೆ ಸಂಬಂಧಿಸಿದ ಸಾರ್ವಜನಿಕರ ದೂರುಗಳಿಗೆ ಅಧಿಕಾರಿ ಗಳು ಸ್ಪಂದಿಸದಿದ್ದರೆ ನೇರವಾಗಿ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿಗೆ ದೂರು ಕೊಡಬೇಕು ಎಂದು ಸಮಿತಿಯ ಅಧ್ಯಕ್ಷ ಕೆ.ಜಿ.ಬೋಪಯ್ಯ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಹಿರಂಗವಾಗಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT