ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ತೋಟಗಾರಿಕೆ ಕಾಲೇಜಿಗೆ ಕೊನೆಗೂ ದೊರೆತ ಜಮೀನು

49 ಎಕರೆ ಜಮೀನು ಹಸ್ತಾಂತರಿಸಿದ ರೇಷ್ಮೆ ಇಲಾಖೆ
Last Updated 15 ಜನವರಿ 2021, 13:42 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ತೋಟಗಾರಿಕೆ ಕಾಲೇಜಿಗೆ ಕೊನೆಗೂ ಜಮೀನು ದೊರೆತಿದೆ.

ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅವರು ನಡೆಸಿದ ಪ್ರಯತ್ನದ ಕಾರಣ ಸರ್ಕಾರ ಬೀದರ್ ತಾಲ್ಲೂಕಿನ ಕೊಳಾರ(ಕೆ) ಸಮೀಪದ ಸರ್ವೇ ಸಂಖ್ಯೆ 287/1 ರಲ್ಲಿನ ರೇಷ್ಮೆ ಇಲಾಖೆಗೆ ಸೇರಿದ 49 ಎಕರೆ 23 ಗುಂಟೆ ಜಮೀನನ್ನು ತೋಟಗಾರಿಕೆ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ತೋಟಗಾರಿಕೆ ಇಲಾಖೆಗೆ ಉಚಿತವಾಗಿ ಹಸ್ತಾಂತರಿಸಲು ಮಂಜೂರಾತಿ ನೀಡಿದೆ.

‘ತೋಟಗಾರಿಕೆ ಕಾಲೇಜಿಗೆ ಜಮೀನು ಕೊಡಿಸಲು ತಾವು ನಡೆಸಿದ ಪ್ರಯತ್ನ ಫಲ ಕೊಟ್ಟಿದೆ. ಜಮೀನು ಕಾರಣಕ್ಕಾಗಿಯೇ ಜಿಲ್ಲೆಯಿಂದ ಕೈ ತಪ್ಪಿ ಹೋಗಲಿದ್ದ ಕಾಲೇಜನ್ನು ಉಳಿಸಿಕೊಂಡ ಖುಷಿ ತಮಗೆ ಇದೆ’ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘2008 ರಲ್ಲಿ ಬೀದರ್‌ಗೆ ತೋಟಗಾರಿಕೆ ಕಾಲೇಜು ಮಂಜೂರಾದಾಗ ಜಮೀನು ಇರಲಿಲ್ಲ. ಆಗಿನ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಹಳ್ಳದಕೇರಿ ಸಮೀಪ 27 ಎಕರೆ 20 ಗುಂಟೆ ಜಮೀನು ಒದಗಿಸಿದ್ದರು. ನಂತರ ವರ್ಗ ಕೋಣೆ, ಪ್ರಯೋಗಾಲಯ ಹಾಗೂ ವಸತಿಗೃಹ ನಿರ್ಮಿಸಿ ಕಾಲೇಜು ಶುರು ಮಾಡಲಾಗಿತ್ತು’ ಎಂದು ಹೇಳಿದರು.

‘ಭಾರತೀಯ ಕೃಷಿ ಅನುಸಂಧಾನ ಪರಿಷತ್(ಐಸಿಎಆರ್) ನಿಯಮಗಳ ಪ್ರಕಾರ ಕಾಲೇಜಿಗೆ ಕನಿಷ್ಠ 80 ಎಕರೆ ಜಮೀನು ಬೇಕಾಗಿತ್ತು. ಹೀಗಾಗಿ 2013 ರಲ್ಲಿ ಕಾಲೇಜಿಗೆ ಭೇಟಿ ನೀಡಿದ ಐಸಿಎಆರ್ ತಂಡ ನಿಗದಿತ ಸ್ಥಳ ಇಲ್ಲದ ಕಾರಣ ಮಾನ್ಯತೆ ರದ್ದುಪಡಿಸುವ ಎಚ್ಚರಿಕೆ ಕೊಟ್ಟಿತ್ತು’ ಎಂದು ತಿಳಿಸಿದರು.

‘2014 ರಲ್ಲಿ ಕಾಲೇಜು ಸಿಬ್ಬಂದಿ ಜಮೀನಿಗಾಗಿ ಅಂದಿನ ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್ ಅವರ ಮೊರೆ ಹೋದಾಗ ಕಾಲೇಜಿಗೆ ಕೊಳಾರ (ಕೆ) ಬಳಿಯ ರೇಷ್ಮೆ ಇಲಾಖೆಯ ಸರ್ವೇ ಸಂಖ್ಯೆ 287/1 ರಲ್ಲಿನ 40 ಎಕರೆ ಜಮೀನನ್ನು ₹2.24 ಕೋಟಿ ಹಾಗೂ ಅದರಲ್ಲಿನ 20 ವಸತಿಗೃಹಗಳನ್ನು ₹1.34 ಕೋಟಿ ಕಟ್ಟಿ ತೆಗೆದುಕೊಳ್ಳಲು ಸರ್ಕಾರಕ್ಕೆ ಪತ್ರ ಬರೆದಿದ್ದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಜಮೀನು ಹಸ್ತಾಂತರಿಸಲು ನಿರ್ಣಯ ಕೈಗೊಂಡಿತ್ತು’ ಎಂದು ಹೇಳಿದರು.

‘ಮಾರುಕಟ್ಟೆ ದರಕ್ಕಿಂತ ಶೇ 50 ರಷ್ಟು ಕಡಿಮೆ ಹಣ ಕಟ್ಟುವಂತೆ ನಿರ್ಣಯ ಆಗಿತ್ತು. ಆದರೆ, ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಅಷ್ಟೂ ಹಣ ಕಟ್ಟಲು ಸಾಧ್ಯವಾಗದ ಕಾರಣ ನನೆಗುದಿಗೆ ಬಿದ್ದಿತು. 2018 ರಲ್ಲಿ ಕಾಲೇಜಿಗೆ ಭೇಟಿ ಕೊಟ್ಟ ಐಸಿಎಆರ್ ತಂಡ ಮಾನ್ಯತೆ ರದ್ದುಪಡಿಸುವ ಕೊನೆಯ ಎಚ್ಚರಿಕೆ ನೀಡಿದ ನಂತರ ಅನೇಕರು ವಿಷಯ ತಮ್ಮ ಗಮನಕ್ಕೆ ತಂದರು’ ಎಂದು ತಿಳಿಸಿದರು.

‘ಕಾಲೇಜಿಗೆ ಜಮೀನು ಕೊಡಿಸಲು ವಿಧಾನಸಭೆಯಲ್ಲಿ ಧ್ವನಿ ಎತ್ತಿದೆ. ಸಂಬಂಧಪಟ್ಟವರ ಗಮನ ಸೆಳೆದೆ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹಾಗೂ ಹಿಂದಿನ ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ ಅವರು ರೇಷ್ಮೆ ಇಲಾಖೆ ಜಾಗದಲ್ಲಿ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸಲು ಮುಂದಾದಾಗ ಏನಾಗುವುದೋ ಎನ್ನುವ ಆತಂಕ ಎದುರಾಗಿತ್ತು. ಆದರೂ, ಪ್ರಯತ್ನ ಮುಂದುವರಿಸಿದೆ. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ನೇತೃತ್ವದಲ್ಲಿ ನಡೆದ ಬಾಗಲಕೋಟೆ ವಿಶ್ವವಿದ್ಯಾಲಯದ ಸಭೆಯಲ್ಲಿ ಕಾಲೇಜು ಜಮೀನಿನ ವಿಷಯವು ಸೇರ್ಪಡೆಯಾಗುವಂತೆ ನೋಡಿಕೊಂಡೆ. ಸಂಬಂಧಪಟ್ಟ ಅಧಿಕಾರಿಗಳಿಗೆ ವಸ್ತುಸ್ಥಿತಿ ಮನವರಿಕೆ ಮಾಡಿದೆ’ ಎಂದು ವಿವರಿಸಿದರು.

‘ಸರ್ಕಾರ ಜನವರಿ 7 ರಂದು 82 ಎಕರೆ ಪೈಕಿ 49 ಎಕರೆ 23 ಗುಂಟೆ ಜಮೀನು ತೋಟಗಾರಿಕೆ ಇಲಾಖೆಗೆ ಮಂಜೂರು ಮಾಡಿದೆ. ಉಳಿದ ಜಮೀನಿನಲ್ಲಿ ರೇಷ್ಮೆ ಸಂಶೋಧನ ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದು, ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಜಿಲ್ಲೆಗೆ ಕೃಷಿ ಕಾಲೇಜು ಮಂಜೂರು ಮಾಡಿಸುವ ದಿಸೆಯಲ್ಲೂ ಪ್ರಯತ್ನ ಮಾಡಲಾಗುವುದು’ ಎಂದು ತಿಳಿಸಿದರು.

ಟೀಂ ಯುವಾದ ವಿನಯ ಮಾಳಗೆ ಸುದ್ದಿಗೋಷ್ಠಿಯಲ್ಲಿ ಇದ್ದರು.


ಸದ್ಯದ ಸ್ಥಳದಲ್ಲೇ ಜಿಲ್ಲಾ ಆಡಳಿತ ಕಚೇರಿ ನಿರ್ಮಿಸಿ

ಬೀದರ್: ಸಾರ್ವಜನಿಕರ ಅನುಕೂಲಕ್ಕಾಗಿ ಸದ್ಯ ಇರುವ ಜಿಲ್ಲಾಧಿಕಾರಿ ಕಚೇರಿ ಸ್ಥಳದಲ್ಲೇ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿ ಜತೆಗೆ ಪಕ್ಕದ ನಗರಸಭೆ ಜಾಗವನ್ನೂ ಪಡೆದು ಸಂಕೀರ್ಣ ನಿರ್ಮಾಣ ಮಾಡಬೇಕು. ಈಶ್ವರ ಖಂಡ್ರೆ ಅವರು ಪೌರಾಡಳಿತ ಸಚಿವರಾಗಿದ್ದಾಗ ನಗರಸಭೆ ಕಟ್ಟಡ ನಿರ್ಮಾಣಕ್ಕೆ ₹5 ಕೋಟಿ ಅನುದಾನ ಒದಗಿಸಿದ್ದು, ನೂರ್ ಕಾಲೇಜು ಬಳಿ ಇರುವ ವಕ್ಫ್ ಮಂಡಳಿಗೆ ಸೇರಿದ ಇಲ್ಲವೇ ಸರ್ಕಾರಿ ಜಾಗದಲ್ಲಿ ನಗರಸಭೆ ಕಚೇರಿ ನಿರ್ಮಿಸಬಹುದು ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣವನ್ನು ನಗರದ ಹೊರವಲಯದಲ್ಲಿ ನಿರ್ಮಿಸುವುದನ್ನು ಒಪ್ಪಲಾಗದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT