ಬುಧವಾರ, ಮಾರ್ಚ್ 22, 2023
32 °C
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಲೆ ಸಲಹೆ

ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಆದರ್ಶವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಆದರ್ಶವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಲೆ ನುಡಿದರು.

ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಪ್ರಯುಕ್ತ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಬೀದರ್ ತಾಲ್ಲೂಕು ಘಟಕದ ವತಿಯಿಂದ ನಗರದ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಶಿಕ್ಷಣದ ಸಬಲೀಕರಣದಲ್ಲಿ ಮಹಿಳಾ ಶಿಕ್ಷಕಿಯರ ಪಾತ್ರ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಾವಿತ್ರಿಬಾಯಿ ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರ ಜ್ಞಾನ ನೀಡಿದ್ದರು. ಸಮಾನತೆ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದರು ಎಂದು ಹೇಳಿದರು.

ಸಾವಿತ್ರಿಬಾಯಿ ಅವರು 1948 ರಲ್ಲಿ ಪುಣೆಯಲ್ಲಿ ದೇಶದ ಮೊದಲ ಮಹಿಳಾ ಶಾಲೆ ಆರಂಭಿಸಿದರು. ಸಾಕಷ್ಟು ವಿರೋಧದ ನಡುವೆಯೂ ಅಕ್ಷರ ದಾಸೋಹದ ಕಾರ್ಯವನ್ನು ಮುಂದುವರಿಸಿದರು. ನಾಲ್ಕು ವರ್ಷಗಳ ಅವಧಿಯಲ್ಲಿ ಮಹಿಳೆಯರಿಗಾಗಿಯೇ 18 ಶಾಲೆಗಳನ್ನು ಶುರು ಮಾಡಿದರು ಎಂದು ಸಂಘದ ಬೀದರ್ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸಂಪತಿ ತಿಳಿಸಿದರು.

ಸಾವಿತ್ರಿಬಾಯಿ ಸಾಮಾಜಿಕ ಕಾರ್ಯಕ್ಕೆ ಅವರ ಪತಿ ಜ್ಯೋತಿಬಾ ಫುಲೆ ಅವರು ಬೆನ್ನೆಲುಬಾಗಿ ನಿಂತಿದ್ದರು ಎಂದು ಹೇಳಿದರು.

ಸಂಘದ 2021ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷೆ ಆಫರೀನ್ ಅಧ್ಯಕ್ಷತೆ ವಹಿಸಿದ್ದರು.

ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ರೆಡ್ಡಿ, ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ಬೆಮಳಗಿ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸಾರಿಕಾ ಗಂಗಾ, ಪ್ರಧಾನ ಕಾರ್ಯದರ್ಶಿ ಭುವನೇಶ್ವರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಸಾಗರ್ ಉಪಸ್ಥಿತರಿದ್ದರು.

ಸಂಪತ್‍ಕುಮಾರಿ ಸ್ವಾಗತಿಸಿದರು. ನಿವೇದಿತಾ ನಿರೂಪಿಸಿದರು. ಸತ್ಯವತಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು