ಸೋಮವಾರ, ನವೆಂಬರ್ 29, 2021
20 °C
ಕಲ್ಯಾಣ ಪರ್ವದ ಧರ್ಮಚಿಂತನ ಗೋಷ್ಠಿ

ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ತೆಲಂಗಾಣದಲ್ಲೂ ಶಕ್ತಿ ಪ್ರದರ್ಶನ: ಮಾತೆ ಗಂಗಾದೇವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವ ಕಲ್ಯಾಣ: `ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಬೃಹತ್ ಮೆರವಣಿಗೆ ನಡೆಸಿದಂತೆ ತೆಲಂಗಾಣದಲ್ಲಿ ಕೂಡ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶಿಸುವುದು ಲಿಂಗೈಕ್ಯ ಮಾತೆ ಮಹಾದೇವಿಯವರ ಕನಸಾಗಿತ್ತು. ಆ ಕನಸನ್ನು ನನಸು ಮಾಡುವುದಕ್ಕಾಗಿ ಪ್ರಯತ್ನಿಸಲಾಗುವುದು’ ಎಂದು ಕೂಡಲ ಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದ್ದಾರೆ.

ನಗರದ ಬಸವ ಮಹಾಮನೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 20ನೇ ಕಲ್ಯಾಣ ಪರ್ವದ ಧರ್ಮಚಿಂತನ ಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ತೆಲಂಗಾಣದ ಲಿಂಗಾಯತರನ್ನು ಒಗ್ಗೂಡಿಸುವ ಸದುದ್ದೇಶದಿಂದ ಈ ಕಾರ್ಯಕ್ರಮದಲ್ಲಿ ಬರೀ ಅಲ್ಲಿನ ಲಿಂಗಾಯತ ಧರ್ಮೀಯರನ್ನು ಹಾಗೂ ರಾಜಕೀಯ ಮುಖಂಡರನ್ನು ಆಹ್ವಾನಿಸಿ ಚಿಂತನ ಮಂಥನ ನಡೆಸಲಾಗಿದೆ. ಅಲ್ಲಿನವರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿರುವುದನ್ನು ನೋಡಿದರೆ, ಮುಂದೆ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೈದರಾಬಾದ್‌ನಲ್ಲಿ ಹಮ್ಮಿಕೊಳ್ಳುವ ಹೋರಾಟ ಯಶಸ್ವಿ ಆಗುವುದು ನಿಶ್ಚಿತ’ ಎಂದರು.

‘ಬಸವಾದಿ ಶರಣರು ಕಾಯಕ, ದಾಸೋಹ ತತ್ವ ನೀಡಿದ್ದಾರೆ. ವಚನ ಸಾಹಿತ್ಯ ಬರೆದು ಜನ ಜಾಗೃತಿಗೈದಿದ್ದಾರೆ. ಅವರ ಸಂದೇಶದ ಪ್ರಚಾರ ಮತ್ತು ಪ್ರಸಾರ ಹೆಚ್ಚಾಗಿ ಆಗಬೇಕಾಗಿದೆ. ತೆಲಂಗಾಣ ಒಳಗೊಂಡು ದೂರದೂರದ ಲಿಂಗಾಯತರಿಗೆ ಬಸವತತ್ವ ತಿಳಿಸಿ ಒಗ್ಗಟ್ಟು ಮೂಡಿಸಬೇಕಾಗಿದೆ’ ಎಂದರು.

ಬೆಂಗಳೂರಿನ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, `ಬಸವಣ್ಣನವರ ಕಾಲದಲ್ಲಿ ಗಣಪರ್ವ ನಡೆಸುತ್ತಿದ್ದರು. ಅದನ್ನೇ ಈಗ ಕಲ್ಯಾಣ ಪರ್ವವನ್ನಾಗಿ ನಡೆಸಲಾಗುತ್ತಿದೆ. ಲಿಂಗಾಯತ ಧರ್ಮದ ಪ್ರಚಾರದ ಉದ್ದೇಶ ಇದರಲ್ಲಿ ಅಡಗಿದೆ’ ಎಂದರು.

ಸಿದ್ದರಾಮೇಶ್ವರ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಮಾತೆ ಜ್ಞಾನೇಶ್ವರಿ, ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಶಿವಪುರ, ಮುಖಂಡ ಬಸವರಾಜ ಬುಳ್ಳಾ ಇದ್ದರು.

ಸಂಸದ ಬಿ.ಬಿ.ಪಾಟೀಲ ದೀಪ ಬೆಳಗಿಸಿದರು. ಎಂ.ಸಂಗಮೇಶ್ವರ ಧ್ವಜಾರೋಹಣಗೈದರು. ಶಂಕರೆಪ್ಪ ಪಾಟೀಲ ಜಹೀರಾಬಾದ ಅಧ್ಯಕ್ಷತೆ ವಹಿಸಿದ್ದರು. ವಿವಿಧೆಡೆಯ ಅನೇಕ ಭಕ್ತರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು