ಬೀದರ್: ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವುದೇ ನಮ್ಮ ಮುಂದಿನ ಮುಖ್ಯ ಗುರಿ ಎಂದು ನಗರದ ಬಿ.ವಿ. ಭೂಮರಡ್ಡಿ ಕಾಲೇಜು ಮೈದಾನದಲ್ಲಿ ಬುಧವಾರ ಸಂಜೆ ಕಿಕ್ಕಿರಿದು ಸೇರಿದ ಜನಸ್ತೋಮದ ನಡುವೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸ್ವಾಮೀಜಿಗಳು ಘೋಷಿಸಿದರು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವ ಸಂಸ್ಕೃತಿ ಅಭಿಯಾನದ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಅಭಿಯಾನಕ್ಕೆ ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಯ ಅಪಾರ ಸಂಖ್ಯೆಯ ಶರಣ–ಶರಣೆಯರು ಆಗಮಿಸಿದ್ದರು. 237 ಮೇಣದ ಬತ್ತಿಗಳಿಂದ ಕೂಡಿದ ಬಸವ ಸಂಸ್ಕೃತಿ ಎಂದು ಕನ್ನಡದಲ್ಲಿ ಬರೆದಿದ್ದ ಅಕ್ಷರಗಳನ್ನು ಬೆಳಗಿಸಿ ಒಕ್ಕೂಟದ ಸ್ವಾಮೀಜಿಗಳು ಕಾರ್ಯಕ್ರಮ ಉದ್ಘಾಟಿಸಿದರು. ‘ಬಸವ ಸಂಸ್ಕೃತಿಯ ಪ್ರಕಾರವೇ ಬದುಕುತ್ತೇವೆ’ ಎಂಬ ಸಂಕಲ್ಪ ಮಾಡಿದರು.

ಅಭಿಯಾನ ಸಮಿತಿ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ಘೋಷಿಸಬೇಕೆಂಬ ಹತ್ತಾರು ವರ್ಷಗಳ ಬೇಡಿಕೆ ಈಡೇರಿದೆ. ಅದಕ್ಕಾಗಿ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡಬೇಕು. ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಯಾವ ರೀತಿ ರಾಷ್ಟ್ರಮಟ್ಟದಲ್ಲಿ ಆಚರಿಸಲಾಗುತ್ತದೋ ಅದೇ ರೀತಿ ಬಸವಣ್ಣನವರ ಜಯಂತಿ ಕೂಡ ಆಚರಿಸಬೇಕು ಎಂದು ಹಕ್ಕೊತ್ತಾಯ ಮಾಡಿದರು.

ಬಳಿಕ ಮಾತನಾಡಿದ ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಬೀದರ್ ಜಿಲ್ಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರುವ ಮೂಲಕ ಲಿಂಗಾಯತರ ಶಕ್ತಿ ಏನೆಂಬುದನ್ನು ತೋರಿಸಿದ್ದೀರಿ. ಇದೇ ಉತ್ಸಾಹ, ಹುಮ್ಮಸ್ಸಿನಿಂದ ಅಕ್ಟೋಬರ್ 5ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲೂ ಭಾಗವಹಿಸಬೇಕು. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕೆಂಬ ನಮ್ಮ ಗುರಿ, ಕೂಗು ರಾಜ್ಯ, ರಾಷ್ಟ್ರಮಟ್ಟಕ್ಕೆ ಕೇಳಿಸಬೇಕು ಎಂದು ಹೇಳಿದರು.

ಸಾಣೇಹಳ್ಳಿ ತರಳಬಾಳು ಸಂಸ್ಥಾನ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೆಂಗಳೂರಿನಲ್ಲಿ ನಡೆಯಲಿರುವ ಸಮಾರೋಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೊಡಬೇಕೆಂಬ ಹಕ್ಕೊತ್ತಾಯ ಮಾಡೋಣ ಎಂದರು. ಇದಕ್ಕೆ ಇತರೆ ಸ್ವಾಮೀಜಿಗಳು ದನಿಗೂಡಿಸಿ, ಒಗ್ಗಟ್ಟು ಪ್ರದರ್ಶಿಸಿದರು.

ಬೆಳಗಾವಿ ಹಾರುಗೇರಿಯ ಸಾಹಿತಿ ವಿ.ಎಸ್. ಮಾಳಿ ಅವರು ‘ಅನುಭವ ಮಂಟಪ ಮಹಾಮನೆ’ ಕುರಿತು ಮಾತನಾಡಿ, ಬಸವಣ್ಣನವರು ಬಿಜ್ಜಳ ಅರಸನ ಅರಮನೆಗೆ ಪರ್ಯಾಯವಾಗಿ ಅನುಭವ ಮಂಟಪ ಎಂಬ ಮಹಾಮನೆ ಕಟ್ಟಿದರು. ಅದು ಭೌತಿಕ ಕಟ್ಟಡವಾಗಿರಲಿಲ್ಲ. ಚಿಂತನ–ಮಂಥನದ ಕೇಂದ್ರವಾಗಿತ್ತು. ಅಲ್ಲಿ ಎಲ್ಲರೂ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಿದ್ದರು. ನಿರಂಕುಶ ಆಡಳಿತದಲ್ಲಿ ಅರಸ ಕೈಗೊಳ್ಳುವಂತೆ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ ಎಂದರು.

ಬಿಜ್ಜಳ ಸಾಮ್ರಾಜ್ಯ ವಿಸ್ತರಣೆಗೆ ಸೈನ್ಯ ಕಟ್ಟಿದರೆ, ಬಸವಣ್ಣ ಕಾಯಕ ಜೀವಿಗಳ ಸಂಘ ಕಟ್ಟಿದರು. ದೇವಾಲಯಕ್ಕೆ ಪರ್ಯಾಯವಾಗಿ ದೇಹವೇ ದೇಗುಲ ಎಂಬ ಅರಿವು ಮೂಡಿಸಿದರು. ವಿಶ್ವಮಾನ್ಯ ತತ್ವಗಳನ್ನು ಕೊಟ್ಟಿರುವ ಬಸವಣ್ಣನವರ ಸಂದೇಶಗಳು ಸದಾ ಪ್ರಸ್ತುತ ಎಂದು ಹೇಳಿದರು.

ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ, ಬೆಂಗಳೂರಿನ ಚನ್ನಬಸವಾನಂದ ಸ್ವಾಮೀಜಿ, ಪೌರಾಡಳಿತ ಸಚಿವ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ಶಶೀಲ್ ಬಿ. ನಮೋಶಿ, ಪ್ರಮುಖರಾದ ಬಸವರಾಜ ಬುಳ್ಳಾ, ಬಾಬುವಾಲಿ, ರಜನೀಶ ವಾಲಿ ಇದ್ದರು. ಸುವರ್ಣಾ ಧನ್ನೂರ ಬಸವ ಗುರುಪೂಜೆ ಮಾಡಿದರು. ಭಾಲ್ಕಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಸುರೇಶಕುಮಾರ ಪಾಟೀಲ, ನವಲಿಂಗ ಪಾಟೀಲ ನಿರೂಪಿಸಿದರೆ, ರಾಜೇಂದ್ರ ಜೊನ್ನಿಕೇರಿ ವಂದಿಸಿದರು.

‘ಜನಗಣತಿಯಲ್ಲಿ ಲಿಂಗಾಯತ ಎಂದೇ ಬರೆಸಿ’

‘ಮುಂಬರುವ ಜನಗಣತಿಯಲ್ಲಿ ಲಿಂಗಾಯತರೆಲ್ಲರೂ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ಸ್ಪಷ್ಟವಾಗಿ ನಮೂದಿಸಬೇಕು. ಜಾತಿ ಕಾಲಂನಲ್ಲಿ ನಿಮ್ಮ ಉಪಜಾತಿಗಳ ಹೆಸರು ದಾಖಲಿಸಬೇಕು’ ಎಂದು ಸಾಣೇಹಳ್ಳಿ ತರಳಬಾಳು ಸಂಸ್ಥಾನ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಎಲ್ಲರೂ ಒಂದೇ ರೀತಿ ಜನಗಣತಿಯಲ್ಲಿ ಬರೆಸಿದರೆ ಕರ್ನಾಟಕ ರಾಜ್ಯದಲ್ಲಿ 60 ಲಕ್ಷ ಲಿಂಗಾಯತರ ಜನಸಂಖ್ಯೆ ಇದೆ ಎಂದು ಹೇಳುತ್ತಿರುವುದು ಸುಳ್ಳಾಗುತ್ತದೆ. ಆಗ ನಿಖರ ಸಂಖ್ಯೆ ಎಷ್ಟೆಂಬುದು ಗೊತ್ತಾಗುತ್ತದೆ ಎಂದರು.

ಲಿಂಗಾಯತರು ಎಲ್ಲ ರೀತಿಯ ಮೌಢ್ಯಗಳನ್ನು ಬಿಟ್ಟು ಬಸವ ಸಂಸ್ಕೃತಿಯಂತೆ ಬದುಕುತ್ತೇವೆ ಎಂಬ ಸಂಕಲ್ಪ ಮಾಡಬೇಕು. ಬಸವಣ್ಣನ ಭಾವಚಿತ್ರ ಬಿಟ್ಟು ಬೇರೆ ಯಾವ ಭಾವಚಿತ್ರವೂ ಮನೆಯಲ್ಲಿ ಇಡಬಾರದು. ಇಷ್ಟಲಿಂಗ ಪೂಜೆ ಬಿಟ್ಟು ಬೇರೆ ಯಾವ ಪೂಜೆಯೂ ಮಾಡಬಾರದು. ಆಗ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗುತ್ತದೆ ಎಂದು ತಿಳಿಸಿದರು.

ಹುಲಸೂರಿನ ಶಿವಾನಂದ ಸ್ವಾಮೀಜಿ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಸ್ಥಾಪಿಸಿ, ಇಷ್ಟಲಿಂಗ ಕೊಟ್ಟಿದ್ದಾರೆ. ಬಸವಣ್ಣ ನಮ್ಮ ಧರ್ಮಗುರು, ವಚನ ಸಾಹಿತ್ಯ ನಮ್ಮ ಧರ್ಮ ಗ್ರಂಥ ಎಂದು ಹೇಳಿದರು.

‘ಬಸವ ಸಂಸ್ಕೃತಿಗೆ ಬೀದರ್ ತಾಯಿ ಬೇರು’

‘ಬಸವ ಸಂಸ್ಕೃತಿಗೆ ಬೀದರ್ ಜಿಲ್ಲೆ ತಾಯಿ ಬೇರು. ಈ ಬೇರಿಗೆ ಗೆದ್ದಲ ಹತ್ತಿದರೆ ಎಲ್ಲ ಬಿದ್ದು ಹೋಗುತ್ತದೆ’ ಎಂದು ಬೈಲೂರು–ಮುಂಡರಗಿ ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಹೇಳಿದರು.

ರಾಜ್ಯದ ಇತರೆ ಜಿಲ್ಲೆಗಳಲ್ಲಿ ಬಸವ ಸಂಸ್ಕೃತಿ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ವ್ಯವಸ್ಥೆ ಇದೆ. ಆದರೆ, ಬೀದರ್ ಜಿಲ್ಲೆ ಸಂಪೂರ್ಣ ಭಿನ್ನವಾದುದು. ಬೀದರ್ ಜಿಲ್ಲೆಯ ಬೇರು ಎಂದೂ ಹಾಳಾಗಬಾರದು. ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಬಸವ ಸಂಸ್ಕೃತಿ ಸದಾ ಜೀವಂತವಾಗಿರಬೇಕು ಎಂದರು.

ಬಸವರಾಜ ಧನ್ನೂರಗೆ ಜವಾಬ್ದಾರಿ

ಬೆಂಗಳೂರಿನಲ್ಲಿ ಅಕ್ಟೋಬರ್ 5ರಂದು ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭ ಆಯೋಜಿಸುವ ಜವಾಬ್ದಾರಿಯನ್ನು ಬಸವರಾಜ ಧನ್ನೂರ ಅವರಿಗೆ ವಹಿಸಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಘೋಷಿಸಿ, ಅವರನ್ನು ಗೌರವಿಸಿದರು.

‘ಬಸವರಾಜ ಧನ್ನೂರ ಅವರಿಗೆ ಸಮಾರೋಪ ಸಮಾರಂಭದ ಸಂಪೂರ್ಣ ಜವಾಬ್ದಾರಿ ವಹಿಸಲು ಮಠಾಧಿಪತಿಗಳ ಒಕ್ಕೂಟದಿಂದ ತೀರ್ಮಾನಿಸಲಾಗಿದೆ’ ಎಂದು ಡಂಬಳ–ಗದಗ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಘೋಷಿಸಿದರು.

ಬಸವ ರಥದ ಭವ್ಯ ಮೆರವಣಿಗೆ

ಬೀದರ್: ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ನಗರದಲ್ಲಿ ಬುಧವಾರ ಸಂಜೆ ಬಸವ ರಥದ ಮೆರವಣಿಗೆ ನಡೆಯಿತು.

12ನೇ ಶತಮಾನದ ಬಸವಾದಿ ಶರಣರ ಮೂರ್ತಿಗಳನ್ನು ಅಲಂಕರಿಸಿದ ವಾಹನದಲ್ಲಿ ಇರಿಸಿ ಮೆರವಣಿಗೆ ಮಾಡಲಾಯಿತು. ವಿವಿಧ ಜಾನಪದ ಕಲಾ ತಂಡಗಳು ಅದರ ಮೆರುಗು ಹೆಚ್ಚಿಸಿದವು. ಮಕ್ಕಳು ಬಾಲ ಶರಣರ ವೇಷದಲ್ಲಿ ಗಮನ ಸೆಳೆದರು. ಮಹಿಳೆಯರು ಇಳಕಲ್ ಸೀರೆ ಧರಿಸಿದರೆ, ಪುರುಷರು ಶ್ವೇತ ವರ್ಣದ ಅಂಗಿ ಹಾಗೂ ಧೋತರ ಧರಿಸಿಕೊಂಡು, ರುದ್ರಾಕ್ಷಿ ಮಾಲೆ ಹಾಕಿಕೊಂಡು ತಲೆಯ ಮೇಲೆ ವಚನ ಸಾಹಿತ್ಯ ಹೊತ್ತು ಹೆಜ್ಜೆ ಹಾಕಿದರು.

ಮಾರ್ಗದುದ್ದಕ್ಕೂ ಬಸವಾದಿ ಶರಣರ ಪರ ಜೈಘೋಷ ಹಾಕಿದರು. ನಗರದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಬೊಮ್ಮಗೊಂಡೇಶ್ವರ ವೃತ್ತ, ಚನ್ನಮ್ಮ ವೃತ್ತದ ಮೂಲಕ ಹಾದು ಬಿ.ವಿ. ಭೂಮರಡ್ಡಿ ಕಾಲೇಜು ತಲುಪಿತು. ಮಾರ್ಗದುದ್ದಕ್ಕೂ ಮೆರವಣಿಗೆ ಮೇಲೆ ಹೂಮಳೆಗರೆದು ಸ್ವಾಗತಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮೆರವಣಿಗೆಗೆ ಚಾಲನೆ ನೀಡಿದರು. ಕಾಂಗ್ರೆಸ್ ಮುಖಂಡ ರಾಜಶೇಖರ ಪಾಟೀಲ ಹುಮನಾಬಾದ್, ರಾಜ್ಯದ ವಿವಿಧ ಭಾಗಗಳ ಮಠಾಧೀಶರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.