ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಲೋಕಸಭಾ ಕ್ಷೇತ್ರ | ತೀವ್ರ ವಿರೋಧದ ಮಧ್ಯೆಯೂ ಖೂಬಾಗೆ ಟಿಕೆಟ್!

ಬಿಜೆಪಿ ಶಾಸಕರ ವಿರೋಧ ಲೆಕ್ಕಿಸದೆ ಹಾಲಿ ಸಂಸದರಿಗೆ ಮಣೆ
Published 14 ಮಾರ್ಚ್ 2024, 5:20 IST
Last Updated 14 ಮಾರ್ಚ್ 2024, 5:20 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಯಾರಿಗೆ ಸಿಗಲಿದೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

ಬಿಜೆಪಿ ವರಿಷ್ಠರು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರ ಮೇಲೆ ಭರವಸೆ ಇಟ್ಟು ಮತ್ತೊಮ್ಮೆ ಅವರಿಗೆ ಟಿಕೆಟ್‌ ಘೋಷಿಸಿದ್ದಾರೆ. ಬುಧವಾರ ಸಂಜೆ ಖೂಬಾ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ಭಗವಂತ ಖೂಬಾ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್‌ ಕೊಡಬಾರದು ಎಂದು ಸ್ವಪಕ್ಷೀಯ ಶಾಸಕರಾದ ಪ್ರಭು ಚವಾಣ್‌, ಶರಣು ಸಲಗರ, ಮಾಜಿಶಾಸಕ ಸುಭಾಷ ಕಲ್ಲೂರ ಪಟ್ಟು ಹಿಡಿದಿದ್ದರು. ಪ್ರಭು ಚವಾಣ್‌ ಅವರು ಪಕ್ಷದ ಸಮಾರಂಭದಲ್ಲೇ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು. ಪಕ್ಷದ ಎಲ್ಲಾ ಹಂತದ ನಾಯಕರನ್ನು ಭೇಟಿ ಮಾಡಿ, ಖೂಬಾ ಅವರನ್ನು ಮತ್ತೆ ಕಣಕ್ಕಿಳಿಸಬಾರದು ಎಂದು ಹಕ್ಕೊತ್ತಾಯ ಮಾಡಿದ್ದರು. ಆದರೆ, ಬಿಜೆಪಿ ಹೈಕಮಾಂಡ್‌ ಹಾಲಿ ಹಾಗೂ ಮಾಜಿ ಶಾಸಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ಇದರೊಂದಿಗೆ ಭಗವಂತ ಖೂಬಾ ಅವರು ಮೇಲುಗೈ ಸಾಧಿಸಿದ್ದಾರೆ.

ಇತ್ತೀಚೆಗೆ ಜಿಲ್ಲೆಗೆ ಬಂದಿದ್ದ ಬಿಜೆಪಿ ವೀಕ್ಷಕರೆದುರು ಟಿಕೆಟ್‌ ಆಕಾಂಕ್ಷಿಗಳು, ಬಿಜೆಪಿ ಶಾಸಕರು ಖೂಬಾ ಅವರಿಗೆ ಟಿಕೆಟ್‌ ಕೊಡದಂತೆ ಒತ್ತಾಯಿಸಿದ್ದರು. ಅದು ಕೂಡ ಫಲ ಕೊಟ್ಟಿಲ್ಲ.


ಆಕಾಂಕ್ಷಿಗಳಿಗೆ ನಿರಾಸೆ: ಭಗವಂತ ಖೂಬಾ ವಿರುದ್ಧ ಸ್ವಪಕ್ಷೀಯ ಶಾಸಕರು, ಕೆಲ ಮುಖಂಡರು ವಿರೋಧದ ದನಿ ಎತ್ತಿದ್ದರಿಂದ ಅವರಿಗೆ ಟಿಕೆಟ್‌ ಕೈತಪ್ಪುವುದು ಖಚಿತವೆಂದು ಬಿಜೆಪಿಯ ಹಲವು ಮುಖಂಡರು ಭಾವಿಸಿದ್ದರು. ಅದಕ್ಕಾಗಿ ಬೆಂಗಳೂರು, ನವದೆಹಲಿಯಲ್ಲಿ ಲಾಬಿ ಶುರು ಮಾಡಿದ್ದರು. ಮಠಾಧೀಶರು, ತಮ್ಮ ಆಪ್ತ ಮುಖಂಡರ ಮೂಲಕ ಒತ್ತಡ ಹಾಕಿಸುವ ಕೆಲಸ ಪ್ರಾರಂಭಿಸಿದ್ದರು. ಆದರೆ, ಇದ್ಯಾವುದನ್ನೂ ಬಿಜೆಪಿ ಹೈಕಮಾಂಡ್‌ ಲೆಕ್ಕಕ್ಕೆ ತೆಗೆದುಕೊಂಡಿಲ್ಲ.

ಬೀದರ್‌ ಲೋಕಸಭಾ ಕ್ಷೇತ್ರದ ಟಿಕೆಟ್‌ ಮೇಲೆ ಬಿಜೆಪಿಯ 20ಕ್ಕೂ ಹೆಚ್ಚು ಮುಖಂಡರು ಕಣ್ಣಿಟ್ಟಿದ್ದರು. ಮುಖಂಡರಾದ ಗುರುನಾಥ ಕೊಳ್ಳೂರ, ನಾಗರಾಜ ಕರ್ಪೂರ, ಚನ್ನಬಸವ ಬಳತೆ, ಪದ್ಮಾಕರ ಪಾಟೀಲ, ಸುಭಾಷ ಕಲ್ಲೂರ ಅದರಲ್ಲಿ ಪ್ರಮುಖರು. ಟಿಕೆಟ್‌ ಕೈತಪ್ಪಿದ್ದರಿಂದ ಎಲ್ಲರಿಗೂ ತೀವ್ರ ನಿರಾಸೆಯಾಗಿದೆ.

ಭಗವಂತ ಖೂಬಾ
ಭಗವಂತ ಖೂಬಾ

ಖೂಬಾಗೆ ಏಕೆ ಟಿಕೆಟ್‌?

ಸ್ವಪಕ್ಷೀಯ ಹಾಲಿ ಹಾಗೂ ಮಾಜಿಶಾಸಕರ ವಿರೋಧದ ನಡುವೆಯೂ ಬಿಜೆಪಿ ಹೈಕಮಾಂಡ್‌ ಹಾಲಿ ಸಂಸದ ಭಗವಂತ ಖೂಬಾ ಅವರಿಗೆ ಮುಂಬರುವ ಚುನಾವಣೆಗೆ ಬೀದರ್‌ ಲೋಕಸಭಾ ಕ್ಷೇತ್ರದ ಟಿಕೆಟ್‌ ಘೋಷಿಸಿರುವುದು ಹಲವು ಮುಖಂಡರಿಗೆ ಅಚ್ಚರಿ ಮೂಡಿಸಿದೆ. ಖೂಬಾ ಅವರು 2014ರಲ್ಲಿ ಎದುರಿಸಿದ ಮೊದಲ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಅವರನ್ನು ಸೋಲಿಸಿದ್ದರು. 2019ರಲ್ಲಿ ಈಶ್ವರ ಬಿ. ಖಂಡ್ರೆ ಅವರನ್ನು ಮಣಿಸಿದ್ದರು. ಇಬ್ಬರು ಪ್ರಭಾವಿ ಮುಖಂಡರನ್ನು ಸೋಲಿಸಿದಕ್ಕಾಗಿ ಅವರಿಗೆ ಕೇಂದ್ರ ಸಚಿವರಾಗಿಯೂ ಮಾಡಲಾಯಿತು. ಫಸಲ್‌ ಬಿಮಾ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದರಿಂದ ಖೂಬಾ ಅವರು ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದು ಮಂತ್ರಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಜಿಲ್ಲೆಯಲ್ಲಿ ಕಾಂಗ್ರೆಸ್‌ ಹಾಗೂ ಸಚಿವ ಈಶ್ವರ ಬಿ. ಖಂಡ್ರೆ ವಿರುದ್ಧ ಯಾವುದೇ ರಾಜಿಯಿಲ್ಲದೆ ವಿರೋಧದ ದನಿ ಎತ್ತುತ್ತ ಬಂದಿದ್ದಾರೆ. ಎರಡು ಅವಧಿಯಲ್ಲಿ ಗಂಭೀರ ಸ್ವರೂಪದ ಭ್ರಷ್ಟಾಚಾರದ ಆರೋಪಗಳು ಅವರ ವಿರುದ್ಧ ಕೇಳಿ ಬರಲಿಲ್ಲ. ಇಷ್ಟೆಲ್ಲ ಇದ್ದರೂ ಕೇಂದ್ರ ಸಚಿವ ಖೂಬಾ ಅವರಿಗೆ ಟಿಕೆಟ್‌ ಕೊಡದಿದ್ದರೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಅವರಿಗೆ ಮಣೆ ಹಾಕಿದೆ. ಇದೆಲ್ಲ ಖೂಬಾ ಅವರಿಗೆ ಟಿಕೆಟ್‌ ಸಿಗಲು ನೆರವಾಗಿದೆ. ಆದರೆ ಸಂಸದರಾದ ಎರಡು ಅವಧಿಯಲ್ಲಿ ಖೂಬಾ ಅವರು ಸ್ಥಳೀಯ ಮುಖಂಡರನ್ನು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅವರನ್ನು ಬೆಳೆಸಿಲ್ಲ. ಒರಟಾಗಿ ವರ್ತಿಸುತ್ತಾರೆ ಎಂಬ ಆರೋಪ ಸ್ವಪಕ್ಷೀಯರದ್ದು.

ಚವಾಣ್‌ ಸಲಗರ ವಿರೋಧವೇಕೆ?

ಬಿ. ನಾರಾಯಣ ಅವರ ನಿಧನದ ನಂತರ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ನಂತರ ಶರಣು ಸಲಗರ ಅವರೊಂದಿಗೆ ಭಗವಂತ ಖೂಬಾ ಸಂಬಂಧ ಹಳಸಿತು. ಇನ್ನು 2023ರ ಮೇನಲ್ಲಿ ನಡೆದ ಚುನಾವಣೆಯಲ್ಲಿ ತಮ್ಮ ವಿರುದ್ಧ ಕಾರ್ಯಕರ್ತರನ್ನು ಎತ್ತಿ ಕಟ್ಟಿದ್ದಾರೆ. ಸೋಲಿಸಲು ಪ್ರಯತ್ನಿಸಿದ್ದಾರೆ. ಜಾತಿ ಕಾರಣಕ್ಕಾಗಿ ಕೀಳಾಗಿ ಕಾಣುತ್ತಾರೆ ಎಂದು ಔರಾದ್‌ ಶಾಸಕ ಪ್ರಭು ಚವಾಣ್‌ ಆರೋಪ. ತಮ್ಮ ಜೊತೆ ಸರಿಯಾಗಿ ವರ್ತಿಸುವುದಿಲ್ಲ ಎನ್ನುವುದು ಸಲಗರ ಆರೋಪ. ಈ ಕಾರಣಕ್ಕಾಗಿಯೇ ಇಬ್ಬರು ಶಾಸಕರು ಭಗವಂತ ಖೂಬಾ ಅವರಿಗೆ ಟಿಕೆಟ್‌ ಕೊಡುವುದನ್ನು ವಿರೋಧಿಸುತ್ತ ಬಂದಿದ್ದರು. ಇನ್ನು ಮಾಜಿಶಾಸಕ ಸುಭಾಷ ಕಲ್ಲೂರ ‘ನಾವೇ ಬೆಂಬಲಿಸಿ ಬೆಳೆಸಿದ್ದರೂ ನಮ್ಮನ್ನು ಕಡೆಗಣಿಸುತ್ತಿದ್ದಾರೆ’ ಎಂದು ಆರೋಪಿಸಿ ಖೂಬಾ ವಿರುದ್ಧ ತೊಡೆ ತಟ್ಟಿದ್ದರು.

ಮುಂದಿನ ದಾರಿ ಸುಲಭವಲ್ಲ...

ಭಗವಂತ ಖೂಬಾ ಅವರಿಗೆ ಟಿಕೆಟ್‌ ಘೋಷಿಸಿ ಅವರ ಬೆಂಬಲಕ್ಕೆ ಬಿಜೆಪಿ ಹೈಕಮಾಂಡ್‌ ನಿಂತಿದೆ. ಆದರೆ ಸ್ವಪಕ್ಷೀಯ ಹಾಲಿ ಮಾಜಿ ಶಾಸಕರು ಕೆಲ ನಾಯಕರು ಮುನಿಸಿಕೊಂಡಿರುವುದರಿಂದ ಅವರ ಮುಂದಿನ ಹಾದಿ ಸುಲಭವಲ್ಲ. ‘ಭಗವಂತ ಖೂಬಾ ಅವರಿಗೆ ವೈಯಕ್ತಿಕ ವರ್ಚಸ್ಸು ಇಲ್ಲ. ಹಿಂದಿನ ಎರಡೂ ಚುನಾವಣೆಗಳಲ್ಲಿ ಅವರು ಮೋದಿ ‘ಗಾಳಿ’ಯಲ್ಲಿ ಗೆದ್ದಿದ್ದಾರೆ. ಈ ಸಲವೂ ಅದೇ ‘ಗಾಳಿ’ಯಲ್ಲಿ ಗೆಲ್ಲಬೇಕು. ಪಕ್ಷದ ವರಿಷ್ಠರು ಹೇಳಿದರೂ ಅವರ ಪರ ಚುನಾವಣೆಯಲ್ಲಿ ಹಾಲಿ ಮಾಜಿ ಶಾಸಕರು ಮುಖಂಡರು ಸಕ್ರಿಯರಾಗಿ ಕೆಲಸ ಮಾಡುವುದು ಅನುಮಾನ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪಕ್ಷದ ಹಿರಿಯ ಮುಖಂಡರು. ‘ಹಿಂದಿನ ತಪ್ಪಿನಿಂದ ಎಚ್ಚೆತ್ತುಕೊಂಡು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಖೂಬಾ ಅವರು ಮಾಡಬೇಕು. ಇಲ್ಲವಾದಲ್ಲಿ ಚುನಾವಣೆಯಲ್ಲಿ ಸಮಸ್ಯೆ ಆಗಬಹುದು’ ಎಂದರು.

ಬೆಂಬಲಿಗರಿಂದ ಸಂಭ್ರಮಾಚರಣೆ

ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಭಗವಂತ ಖೂಬಾ ಅವರ ಬೆಂಬಲಿಗರು ಪಕ್ಷದ ಕಾರ್ಯಕರ್ತರು ನಗರದಲ್ಲಿ ಬುಧವಾರ ಸಂಜೆ ಸಂಭ್ರಮಾಚರಣೆ ಮಾಡಿದರು. ಖೂಬಾ ಅವರ ಕಚೇರಿ ಬಳಿ ಸೇರಿದ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಖೂಬಾ ಅವರಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಕೂಗಿದರು. ಆನಂತರ ನಗರದ ಬಸವೇಶ್ವರ ವೃತ್ತ ಭಗತ್‌ ಸಿಂಗ್‌ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಿಹಿ ಹಂಚಿ ಖುಷಿಪಟ್ಟರು. ಖೂಬಾ ಅವರ ಆಪ್ತ ಸಹಾಯಕ ಅಮರ ಹಿರೇಮಠ ನಾಗಭೂಷಣ ಕಮಠಾಣೆ ರಾಕೇಶ್ ಪಾಟೀಲ ಡಾಕುಳಗಿ ದಿನೇಶ್ ಮೂಲಗೆ ಸುರೇಶ್ ಮಾಶೆಟ್ಟಿ ಪ್ರಶಾಂತ್ ಸಿಂದೋಲ್‌ ಸಂಜು ಶಿವಕುಮಾರ್ ಸ್ವಾಮಿ ಚಂದ್ರಯ್ಯ ಸ್ವಾಮಿ ಕನಕ ಮಲ್ಲೇಶಿ ಆಕಾಶ್ ರೆಡ್ಡಿ ಆಣದೂರು ನರೇಶ್ ಪಾಲಂ ಭೀಮು ಮೈಲೂರ್‌ ಜ್ಞಾನೇಶ್ವರ ಪಾಟೀಲ ಹೊಳಸಮುದ್ರ ಜಗನ್ನಾಥ ಜಮಾದಾರ್ ಸಂಜು ಕುಮಾರ್ ಪಾಟೀಲ ಜ್ಯಾಂತಿ ಹಾಜರಿದ್ದರು.

‘ಪ್ರಾಮಾಣಿಕ ಸೇವೆಗೆ ಸಂದ ಟಿಕೆಟ್‌’

‘ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ನಾನು ಮಾಡಿರುವ ಪ್ರಾಮಾಣಿಕ ಸೇವೆ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಪಕ್ಷ ನನಗೆ ಮೂರನೇ ಸಲ ಚುನಾವಣೆಗೆ ಟಿಕೆಟ್‌ ನೀಡಿದೆ’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಪ್ರತಿಕ್ರಿಯಿಸಿದ್ದಾರೆ. ಕ್ಷೇತ್ರದಲ್ಲಿ ಜನರ ಬೆಂಬಲ ಜಾತಿ ಮತ ಪಂಥಗಳನ್ನು ಪರಿಗಣಿಸದೇ ಎಲ್ಲರೊಂದಿಗೆ ನಾನು ಹೊಂದಿರುವ ವಿಶ್ವಾಸ ಅಭಿವೃದ್ಧಿ ಕಾರ್ಯಗಳು ಕೇಂದ್ರದ ಯೋಜನೆಗಳ ಅನುಷ್ಠಾನ ಪರಿಗಣಿಸಿ ಪಕ್ಷದ ವರಿಷ್ಠರು ಟಿಕೆಟ್‌ ಕೊಟ್ಟಿದ್ದಕ್ಕೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದಿದ್ದಾರೆ. ಕ್ಷೇತ್ರದ ಎಲ್ಲ ಶಾಸಕರು ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಿ ಕ್ಷೇತ್ರದಲ್ಲಿ ಪಕ್ಷ ಕನಿಷ್ಠ 2 ಲಕ್ಷ ಮತಗಳ ಅಂತರದಿಂದ ಜಯಶಾಲಿಯಾಗುವ ಭರವಸೆ ನನಗಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT