ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಸಂಬಂಧಿ ದೂರುಗಳಿದ್ದರೆ ಕೊಡಿ: ದೀಪಂಕರ್ ಮೋಹಪಾತ್ರ

ಬೀದರ್‌ ಲೋಕಸಭೆ ಚುನಾವಣಾ ಸಾಮಾನ್ಯ ವೀಕ್ಷಕರಾದ ದೀಪಂಕರ್ ಮೋಹಪಾತ್ರ
Published 24 ಏಪ್ರಿಲ್ 2024, 4:41 IST
Last Updated 24 ಏಪ್ರಿಲ್ 2024, 4:41 IST
ಅಕ್ಷರ ಗಾತ್ರ

ಬೀದರ್‌: ‘ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಏಜೆಂಟರು ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೆ ಚುನಾವಣಾ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರ ಗಮನಕ್ಕೆ ತರಬೇಕು’ ಎಂದು ಚುನಾವಣಾ ಸಾಮಾನ್ಯ ವೀಕ್ಷಕ ದೀಪಂಕರ್ ಮೋಹಪಾತ್ರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಏಜೆಂಟರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗಾಗಲೇ ಬೀದರ್‌ ಲೋಕಸಭಾ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನೋಡಿಕೊಳ್ಳಬೇಕು. ಏಪ್ರಿಲ್ 25, 30 ಹಾಗೂ ಮೇ 4ನೇ ತಾರೀಖು ತಮ್ಮ ಪಕ್ಷದ ಖರ್ಚು ವೆಚ್ಚಗಳ ಮಾಹಿತಿಯನ್ನು ಚುನಾವಣಾ ವೆಚ್ಚ ವೀಕ್ಷಕರಿಗೆ ನೀಡಬೇಕು ಎಂದು ಸೂಚಿಸಿದರು.

ಈಗಾಗಲೇ ಚುನಾವಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಒಟ್ಟು 1,528 ಮತಗಟ್ಟೆಗಳ ಪೈಕಿ 328 ಕ್ರಿಟಿಕಲ್ ಮತಗಟ್ಟೆಗಳಿವೆ. ಇವುಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ರಾಜಕೀಯ ಪಕ್ಷಗಳ ಸಭೆ, ಸಮಾರಂಭ ಹಾಗೂ ಮೆರವಣಿಗೆ ನಡೆಸುವ ಸಂದರ್ಭದಲ್ಲಿ ಚುನಾವಣಾ ಆಯೋಗದ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.

85 ವರ್ಷ ಮೇಲಿನವರಿಗೆ ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೆ ಮತದಾನ ಮಾಡಲು ಅವಕಾಶ ನೀಡಲಾಗಿದೆ. ತುರ್ತು ಅಗತ್ಯ ಸೇವೆ ಹಾಗೂ ಚುನಾವಣಾ ಕರ್ತವ್ಯದ ಮೇಲೆ ಇರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಮತದಾನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮತದಾನದಿಂದ ಯಾರು ಹೊರಗೆ ಉಳಿಯಬಾರದು ಎಂಬುದು ಚುನಾವಣಾ ಆಯೋಗದ ಉದ್ದೇಶವಾಗಿದೆ. ಬೀದರ್‌ ಲೋಕಸಭಾ ಚುನಾವಣಾ ಕ್ಷೇತ್ರದಲ್ಲಿ ಚುನಾವಣೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ಶಾಂತಿ ಹಾಗೂ ಸುವ್ಯವಸ್ಥಿತವಾಗಿ ನಡೆಯುವಂತೆ ಎಲ್ಲರೂ ನೋಡಿಕೊಳ್ಳಬೇಕೆಂದು ತಿಳಿಸಿದರು.

ಚುನಾವಣಾ ವೆಚ್ಚ ವೀಕ್ಷಕ ಎಸ್. ಈಶ್ವರ, ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ, ಚುನಾವಣಾ ತಹಶೀಲ್ದಾರ್‌ ಅಣ್ಣಾರಾವ್ ಪಾಟೀಲ, ಡಿವೈಎಸ್ಪಿ ಶಿವನಗೌಡ ಪಾಟೀಲ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿ ಮಹೇಶ ಗೋರನಾಳಕರ್, ಪಕ್ಷೇತರ ಅಭ್ಯರ್ಥಿಗಳಾದ ದಿಲೀಪ್‌ ಕಾಡವಾದ, ಬಲಭೀಮ ಉಣ್ಣೆ, ರಾಮವಿಲಾಸ ರಾಮುಲಾಲಜಿ ನಾವಂದರ, ರೌಫ್‌ ಅಬ್ದುಲ್‌ ಗನಿ ಹಾಜರಿದ್ದರು.

ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆಗೆ ಸೂಚನೆ

‘ಕ್ರಿಟಿಕಲ್ (ದುರ್ಬಲ) ಮತಗಟ್ಟೆ ಕೇಂದ್ರಗಳ ಪಟ್ಟಿ ಮಾಡಿ ಅಲ್ಲಿ ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಪೊಲೀಸ್ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು’ ಎಂದು ಚುನಾವಣೆ ಪೊಲೀಸ್ ವೀಕ್ಷಕ ಜೆ.ಎಸ್. ರಜಪೂತ ಹೇಳಿದರು. ಕ್ರಿಟಿಕಲ್ ಮತಗಟ್ಟೆಗಳಲ್ಲಿ ಒಂದುವೇಳೆ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಿದರೆ ಏನು ಮಾಡಬೇಕು ಎಂಬ ಯೋಜನೆ ಮುಂಚಿತವಾಗಿ ರೂಪಿಸಬೇಕು. ಆ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಯಾರಾದರೂ ರೌಡಿ ಶೀಟರ್ ಅಥವಾ ಸಮಾಜ ವಿರೋಧಿ ಶಕ್ತಿಗಳಿದ್ದರೆ ಅಂತಹವರನ್ನು ಗುರುತಿಸಿ ಪಟ್ಟಿಮಾಡಿ ಅವರನ್ನು ಮುಂಚಿತವಾಗಿ ಎಚ್ಚರಿಕೆ ನೀಡಬೇಕು. ಪೊಲೀಸ್ ಅಧಿಕಾರಿಗಳು ಎಚ್ಚರಿಕೆಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್. ಎಲ್ ಮಾತನಾಡಿ ಈಗಾಗಲೇಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಬೀದರ್ ಸಾರ್ವತ್ರಿಕ ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ಆಗಮಿಸುವ ಅರೆಸೇನಾ ಪಡೆಗಳಿಗೆ ಉಳಿದುಕೊಳ್ಳಲು ಜಿಲ್ಲೆಯ ವಿವಿಧ ವಸತಿ ನಿಲಯಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ಯಾವುದೇ ಸಿಬ್ಬಂದಿ ಕೊರತೆ ಇಲ್ಲ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT