ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಸಂಪುಟದಲ್ಲಿ ಸ್ಥಾನ ಪಡೆದ ಅದೃಷ್ಟ ರಾಜಕಾರಣಿ ಪ್ರಭು ಚವಾಣ್

Last Updated 21 ಆಗಸ್ಟ್ 2019, 7:41 IST
ಅಕ್ಷರ ಗಾತ್ರ

ಔರಾದ್ (ಬೀದರ್‌ ಜಿಲ್ಲೆ): ರಾಜಕೀಯ ಹಿನ್ನೆಲೆ ಇಲ್ಲದ ಬಡ ಕೃಷಿ ಕಾರ್ಮಿಕ ಕುಟುಂಬದಿಂದ ಬಂದ ಪ್ರಭು ಚವಾಣ್ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವರಾಗುವ ಮೂಲಕ ಅದೃಷ್ಟ ರಾಜಕಾರಣಿ ಎನಿಸಿಕೊಂಡಿದ್ದಾರೆ.

ಔರಾದ್ ವಿಧಾನಸಭಾ ಮೀಸಲು ಕ್ಷೇತ್ರದಲ್ಲಿ ಸತತ ಮೂರನೇ ಬಾರಿ ಶಾಸಕರಾಗುವ ಮೂಲಕ ಪಕ್ಷದಲ್ಲಿ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. 2018ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಬಿಜೆಪಿಯಿಂದ ಪ್ರಭು ಚವಾಣ್ ಒಬ್ಬರೇ ಆಯ್ಕೆಯಾಗಿದ್ದಾರೆ.

ಔರಾದ್ ತಾಲ್ಲೂಕಿನ ಬೊಂತಿ ತಾಂಡಾದಲ್ಲಿ 1969ರಲ್ಲಿ ಭಾಮಲಾ ಚವಾಣ್ ಹಾಗೂ ಮೋತಾಬಾಯಿ ಅವರಿಗೆ ಮೂರನೇ ಮಗನಾಗಿ ಜನಿಸಿದರು. ಪ್ರಭು ಚವಾಣ್ 1995ರಲ್ಲಿ ಬೊಂತಿ ತಾಂಡಾದ ಸಕ್ಕುಬಾಯಿ ಅವರನ್ನು ವಿವಾಹವಾದರು. ಮಕ್ಕಳಾದ ಪ್ರತೀಕ್ ಹಾಗೂ ಪುತ್ರಿ ಇಬ್ಬರೂ ಮಹಾರಾಷ್ಟ್ರದಲ್ಲೇ ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ.

ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ದೇಗಲೂರು ತಾಲ್ಲೂಕಿನ ಹಣೆಗಾಂವ್ ಬಳಿ ಆಶ್ರಮ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದಿದ್ದಾರೆ. ಪದವಿ ಪೂರ್ವ ಶಿಕ್ಷಣವನ್ನು ಇಲ್ಲಿಯೇ ಪೂರ್ಣಗೊಳಿಸಿದ್ದಾರೆ.

ಕಿತ್ತು ತಿನ್ನುವ ಬಡತನದಿಂದಾಗಿ ಓದು ಮುಂದುವರಿಸಲು ಸಾಧ್ಯವಾಗದೆ ಉದ್ಯೋಗ ಅರಸಿ ಮುಂಬೈಗೆ ಹೋದರು. ಅಲ್ಲಿ 10 ವರ್ಷಗಳ ಕಾಲ ಗುತ್ತಿಗೆದಾರರ ಕೈಯಲ್ಲಿ ಕೆಲಸ ಮಾಡಿ ನಂತರ ಗುಜರಿ ಸಾಮಗ್ರಿಗಳ ವ್ಯವಹಾರ ನಡೆಸುತ್ತ ‘ಪ್ರಭು ಎಂಟರ್‌ಪ್ರೈಸಸ್‌’ ಹೆಸರಿನ ಕಂಪನಿ ಆರಂಭಿಸಿದರು. ಇದೇ ಅವಧಿಯಲ್ಲಿ ರಾಜಕೀಯ ನಂಟು ಬೆಳೆಸಿಕೊಂಡರು.

ಮುಂಬೈನಲ್ಲಿ ಬಿಜೆಪಿಯ ಠಾಣೆ ನಗರ ಘಟಕದ ಅಧ್ಯಕ್ಷರಾಗಿ, ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದರು. ಇವರ ಪಕ್ಷ ನಿಷ್ಠೆ ಮತ್ತು ಕ್ರಿಯಾಶೀಲತೆಯ ಅಂದಿನ ಪ್ರಭಾವಿ ಬಿಜೆಪಿ ಮುಖಂಡ ಗೋಪಿನಾಥ ಮುಂಡೆ ಅವರಲ್ಲಿ ಆತ್ಮೀಯತೆ ಬೆಳೆಯುವಂತೆ ಮಾಡಿತು. ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಯಲ್ಲಿ ಔರಾದ್ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟ ದಿನವೇ ಚವಾಣ್ ಅವರ ಅದೃಷ್ಟದ ಬಾಗಿಲು ತೆರೆಯಿತು. 2008, 2013 ಮತ್ತು 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರು.

2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರಭು ಚವಾಣ್ ಮೊದಲ ಬಾರಿಗೆ ಶಾಸಕರಾಗಿದ್ದರು. ಆಗ ಅವರಿಗೆ ಕನ್ನಡ ಮಾತನಾಡಲು ಸಹ ಬರುತ್ತಿರಲಿಲ್ಲ. ಆದರೂ ಯಡಿಯೂರಪ್ಪ ಅವರಿಗೆ ಈ ಶಾಸಕರ ಮೇಲೆ ಕಾಳಜಿ ಇತ್ತು. ಅಂದು ಕಲಬುರ್ಗಿಯಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಔರಾದ್ ಪಟ್ಟಣದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಇದು ಚವಾಣ್‌ ಅವರ ವರ್ಚಸ್ಸು ಹೆಚ್ಚಿಸಿಕೊಳ್ಳಲು ನೆರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT