ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ ಮೀಸಲಾತಿ: ಸೆ.18ಕ್ಕೆ ಧರಣಿ

ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಫರ್ನಾಂಡಿಸ್ ಎಚ್ಚರಿಕೆ
Last Updated 12 ಸೆಪ್ಟೆಂಬರ್ 2020, 13:55 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಸದಾಶಿವ ಆಯೋಗದ ವರದಿ ಜಾರಿಗೊಳಿಸಿ ಮಾದಿಗರಿಗೆ ಒಳ ಮೀಸಲಾತಿ ಒದಗಿಸಲು ಒತ್ತಾಯಿಸಿ ಸೆ. 18 ರಂದು ಬೆಂಗಳೂರಿನಲ್ಲಿ ಧರಣಿ ಆಯೋಜಿಸಲಾಗಿದೆ’ ಎಂದು ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಫರ್ನಾಂಡಿಸ್ ಹಿಪ್ಪಳಗಾಂವ್ ತಿಳಿಸಿದ್ದಾರೆ.

ಇಲ್ಲಿನ ಕೆಇಬಿ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಮಾದಿಗ ದಂಡೋರ ಹೋರಾಟ ಸಮಿತಿ ತಾಲ್ಲೂಕು ಕಾರ್ಯಕರ್ತರ ಸಮಾವೇಶ ಹಾಗೂ ಸಮಿತಿಯ ನೂತನ ಅಧ್ಯಕ್ಷ ಸಂಜೀವ ಸಂಗನೂರೆ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇದಕ್ಕೂ ಮೊದಲು ಸೆ. 14 ರಂದು ರಾಜ್ಯದ ಎಲ್ಲ ಶಾಸಕರುಗಳ ಮನೆಗೆ ಹೋಗಿ ಮನವಿಪತ್ರ ಸಲ್ಲಿಸಲಾಗುತ್ತದೆ. ಎಲ್ಲರೂ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ಅನಿವಾರ್ಯವಾದರೂ ದಲಿತ ವರ್ಗಕ್ಕೆ ಸೇರಿದವರೆಲ್ಲರೂ ಒಗ್ಗಟ್ಟಿನಿಂದ ಇರಬೇಕು. ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ದಲಿತೋದ್ಧಾರಕ ಆಗಿದ್ದಾರೆ. ಅವರ ಸಂದೇಶ ಎಲ್ಲರೂ ಪಾಲಿಸಬೇಕು. ಸಂಘಟನೆಯ ಪದಾಧಿಕಾರಿಗಳು ಸಮಾಜದ ಮೇಲೆ ಅನ್ಯಾಯವಾದರೆ ಪ್ರತಿಭಟಿಸಬೇಕು’ ಎಂದು ಸಲಹೆ ನೀಡಿದರು.

ತಾಲ್ಲೂಕು ಅಸ್ಪೃಶ್ಯತಾ ನಿವಾರಣಾ ಸಮನ್ವಯ ಸಮಿತಿ ಅಧ್ಯಕ್ಷ ಮನೋಹರ ಮೈಸೆ ಮಾತನಾಡಿ,‘ದಲಿತ ವರ್ಗದವರೆಲ್ಲರೂ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಆದ್ದರಿಂದ ಒಬ್ಬರ ಹಿತಕ್ಕಾಗಿ ಇನ್ನೊಂದು ವರ್ಗದವರು ಸಹಕಾರ ನೀಡುವುದು ಅಗತ್ಯವಾಗಿದೆ’ ಎಂದರು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮೇತ್ರೆ ಮಾತನಾಡಿ, ‘ಡಾ.ಬಿ.ಆರ್.ಅಂಬೇಡ್ಕರ್ ಅವರ ರಥ ಮುಂದುವರೆಸಬೇಕು. ಅಂದು ಬಿಕ್ಕಟ್ಟಿನ ಪರಿಸ್ಥಿತಿ ಇದ್ದರೂ ಅವರು ಸಮಾಜೋದ್ಧಾರಕ್ಕಾಗಿ ಧೈರ್ಯದಿಂದ ಪ್ರಯತ್ನಿಸಿದ್ದಾರೆ. ಇಂದು ಸಕಲ ಸೌಲಭ್ಯಗಳಿದ್ದು ದಲಿತರ ಸಂಖ್ಯೆಯೂ ಅಧಿಕಗೊಂಡಿದೆ. ಆದರೆ, ಹೋರಾಟದ ಕಿಚ್ಚು ಮೊದಲಿನಂತಿಲ್ಲ’ ಎಂದರು.

ಹಿರಿಯರಾದ ಸೂರ್ಯಕಾಂತ ಮದಕಟ್ಟಿ ಮಾತನಾಡಿ, `ರಾಜಕೀಯದಲ್ಲಿದ್ದು ಸಮಾಜ ಸಂಘಟನೆ ಸಾಧ್ಯವಿಲ್ಲ. ಅಂಥವರು ಇತರರಿಗೆ ಸಹಕಾರ ನೀಡುವುದು ಅನಿವಾರ್ಯ' ಎಂದರು. ಅಂಬೇಡ್ಕರ್ ವೈಯ್ಸ್ ಸಂಘಟನೆ ಅಧ್ಯಕ್ಷ ಸುರೇಶ ಮೋರೆ ಮಾತನಾಡಿ, `ದಲಿತ ವರ್ಗದವರು ದೇಶ ಆಳಬೇಕಾಗಿದೆ. ಅದಕ್ಕಾಗಿ ಒಗ್ಗಟ್ಟಾಗಿ ವೇದಿಕೆ ನಿರ್ಮಿಸಬೇಕಿದೆ' ಎಂದು ಹೇಳಿದರು.

ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ಹೆಗಡೆ, ಶಿಕ್ಷಕರ ಕ್ಷೇಮಾಭ್ಯುದಯ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ ಉಮಾಪುರೆ, ಶಿರೋಮಣಿ ನೀಲನೋರ ಮಾತನಾಡಿದರು. ನಗರಸಭೆ ಸದಸ್ಯ ಮಾರುತಿ ಲಾಡೆ, ಸಂಜೀವ ಸಂಗನೂರೆ, ಮನೋಹರ ಮೋರೆ, ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ ನಾಗನಾಥ ವಾಡೇಕರ್, ತಾಲ್ಲೂಕು ಪಂಚಾಯಿತಿ ಸದಸ್ಯ ಗುರುನಾಥ ಸೋನಕೆ, ನೀಲಕಂಠ ಭೆಂಡೆ, ದತ್ತು ಲಾಡೆ, ಅಶೋಕ ಸಂಗನೂರೆ, ಮನೋಜ ತಂಬುರ್ಜೆ, ರಮೇಶ ಚೌಧರಿ, ರಾಜೀವ ಮುಜನಾಯಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT