ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಗ್ರಾಹಕರ, ಗುತ್ತಿಗೆದಾರ ಹಿತ ಕಾಪಾಡಿ

Last Updated 1 ಡಿಸೆಂಬರ್ 2021, 4:14 IST
ಅಕ್ಷರ ಗಾತ್ರ

ಬೀದರ್: ವಿದ್ಯುತ್ ಗುತ್ತಿಗೆದಾರರ ಹಾಗೂ ಗ್ರಾಹಕರ ಹಿತ ಕಾಪಾಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಆಗ್ರಹಿಸಿದೆ.

ಸಂಘದ ಅಧ್ಯಕ್ಷ ವಿಜಯಕುಮಾರ ಗುಡ್ಡದ, ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ ನೇತೃತ್ವದ ನಿಯೋಗ ಮಂಗಳವಾರ ಬೆಂಗಳೂರಿನಲ್ಲಿ ಇಂಧನ ಸಚಿವ ವಿ.ಸುನೀಲಕುಮಾರ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿ, ಇಂಧನ ಇಲಾಖೆಯ ವಿವಿಧ ಆದೇಶ ಹಾಗೂ ಕ್ರಮಗಳಿಂದ ಗ್ರಾಹಕರಿಗೆ ಹಾಗೂ ವಿದ್ಯುತ್ ಗುತ್ತಿಗೆದಾರರಿಗೆ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದ್ದಾರೆ

ತಾತ್ಕಾಲಿಕ ವಿದ್ಯುತ್ ನೂತನ ಸಂಪರ್ಕ ಹಾಗೂ ನವೀಕರಣಕ್ಕೆ ಭೂಗತ ಕೇಬಲ್ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ನಿಯಮ ಮಾಡಿದ್ದು, ಇದರಿಂದ ಗ್ರಾಹಕರಿಗೆ, ಗುತ್ತಿಗೆದಾರರಿಗೆ ಬಹಳಷ್ಟೂ ತೊಂದರೆಯಾಗುತ್ತಿದೆ. ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲು ಸಹ ಹಲವು ನಿಯಮ ಮಾಡಲಾಗಿದೆ. ಅಲ್ಲದೇ ಸಂಪರ್ಕ ನೀಡಲು 15 ದಿನ ವಿಳಂಬ ಮಾಡಲಾಗುತ್ತಿದೆ. ತಾತ್ಕಾಲಿಕ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ ದಿನದಂತೆ ನೀಡಬೇಕು ಹಾಗೂ ತಾತ್ಕಾಲಿಕ ಸಂಪರ್ಕ ನಿಗದಿಗೊಳಿಸಿದ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ವಿದ್ಯುತ್ ಅವಘಡ ಸಂಭವಿಸಿದರೆ ಗುತ್ತಿಗೆದಾರನ ಮೇಲೆ ಎಫ್ಐಆರ್ ಹಾಕಿ, ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಲಾಗುತ್ತಿದೆ. ಈ ನಿಯಮ ಬದಲಾವಣೆ ಮಾಡಬೇಕು. ₹5 ಲಕ್ಷ ವರೆಗಿನ ವಿದ್ಯುತ್ ಕಾಮಗಾರಿಯನ್ನು ಸ್ಥಳೀಯ ಗುತ್ತಿಗೆದಾರರಿಗೆ ಟೆಂಡರ್ ಕರೆಯದೆ ನೀಡಬೇಕು. ಕೈಗಾರಿಕೆಗಳಿಗೆ ಈ ಹಿಂದೆ ಇದ್ದ ನಿಯಮಗಳಂತೆ ವಿದ್ಯುತ್ ಸಂಪರ್ಕ ನೀಡಿದ್ದಲ್ಲಿ ಕೈಗಾರಿಕೆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಇಲಾಖೆಗೆ ಸಹ ನಷ್ಟ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯದ ವಿವಿಧ ವಿದ್ಯುತ್ ಸರಬ ರಾಜು ಕಂಪನಿ ಅಧಿಕಾರಿಗಳು ನಿಯಮಾವಳಿ ಗಾಳಿಗೆ ತೂರಿ ಕಂಪನಿ ಕೆಲಸದ ಸಮಯದಲ್ಲಿ ವಿದ್ಯುತ್ ಕಾಮಗಾರಿಗಳನ್ನು ಮಾಡುತ್ತಿದ್ದಾರೆ. ಅನುಮತಿ ಪಡೆದ ಗುತ್ತಿಗೆದಾರರು ಪರದಾಡಬೇಕಾಗಿದೆ. ಅಂಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಸರ್ಕಾರದ ನಿಯಮ ಪ್ರಕಾರ ಎಲ್ಲ ಅಧಿಕಾರಿ, ನೌಕರರನ್ನು ಎರಡು ವರ್ಷಗಳಿಗೊಮ್ಮೆ ವರ್ಗಾವಣೆ ಕಡ್ಡಾಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸಂಘದ ಪ್ರಧಾನ ಕಾರ್ಯದರ್ಶಿ ಜಿ. ರುದ್ರೇಶ, ಉಪಾಧ್ಯಕ್ಷ ರಮೇಶ ಎಸ್., ಬಿ.ವಿ. ನರಸಿಂಹಯ್ಯ, ಸಂಘಟನಾ ಕಾರ್ಯದರ್ಶಿ ಬಿ.ಎಲ್. ವೆಂಕಟೇಶ, ಖಜಾಂಚಿ ಬಿ.ಎಸ್. ಚಂದ್ರಕುಮಾರ, ಪ್ರಮುಖರಾದ ಲಕ್ಷ್ಮಿನಾರಾಯಣ, ಎನ್. ಸುರೇಶ,ವಿ. ಶಾಂತಕುಮಾರ, ಆರ್.ಆನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT