ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಗವಂತ ಖೂಬಾಗೆ ಮಲ್ಲಿಕಾರ್ಜುನ ಖೂಬಾ ಬೆಂಬಲದಿಂದ ಶಕ್ತಿ ಹೆಚ್ಚಳ: ಶಾಸಕ ಶರಣು ಸಲಗರ

ಮಂಠಾಳ ಕಾರ್ಯಕ್ರಮದಲ್ಲಿ ಶಾಸಕ ಶರಣು ಸಲಗರ ಹೇಳಿಕೆ
Published 10 ಏಪ್ರಿಲ್ 2024, 15:41 IST
Last Updated 10 ಏಪ್ರಿಲ್ 2024, 15:41 IST
ಅಕ್ಷರ ಗಾತ್ರ

ಬಸವಕಲ್ಯಾಣ:`ಜೆಡಿಎಸ್ ಮುಖಂಡ ಮಲ್ಲಿಕಾರ್ಜುನ ಖೂಬಾ ಕೂಡ ಇಂದಿನಿಂದ ಪ್ರಚಾರ ಕೈಗೊಳ್ಳುತ್ತಿರುವ ಕಾರಣ ಅಭ್ಯರ್ಥಿ ಭಗವಂತ ಖೂಬಾ ಅವರ ಶಕ್ತಿ ಹೆಚ್ಚಿದೆ’ ಎಂದು ಶಾಸಕ ಶರಣು ಸಲಗರ ಹೇಳಿದ್ದಾರೆ.

ತಾಲ್ಲೂಕಿನ ಮಂಠಾಳದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ನಾನು ಸಹ ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಮಲ್ಲಿಕಾರ್ಜುನ ಖೂಬಾ, ಇನ್ನೊಬ್ಬ ಮಾಜಿ ಶಾಸಕ ಎಂ.ಜಿ.ಮುಳೆ ಮತ್ತು ನಾನು ಒಗ್ಗೂಡಿ ಶ್ರಮಿಸುವುದರಿಂದ ಈ ಸಲ ಈ ತಾಲ್ಲೂಕಿನಲ್ಲಿ ಬಿಜೆಪಿಗೆ ಅತ್ಯಧಿಕ ಮತಗಳು ದೊರಕುವುದು ನಿಶ್ಚಿತ. ದೇಶದ ಸುರಕ್ಷತೆಗಾಗಿ ಮತ್ತು ಭಯೋತ್ಪಾದಕ ಚಟುವಟಿಕೆ ನಡೆಸುವವರನ್ನು ದೂರ ಇಡುವುದಕ್ಕಾಗಿ ನರೇಂದ್ರ ಮೋದಿ ಅವರನ್ನು ಇನ್ನೊಮ್ಮೆ ಪ್ರಧಾನಿ ಮಾಡುವುದು ಎಲ್ಲರ ಕರ್ತವ್ಯವಾಗಿದೆ’ ಎಂದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿ, ‘ನಾನು ಚಿಕ್ಕವನಿದ್ದಾಗಲೂ ಬಿಜೆಪಿಯ ರಾಮಚಂದ್ರ ವೀರಪ್ಪ ಅವರ ಪರ ಪ್ರಚಾರ ಕೈಗೊಂಡಿದ್ದೆ. ಈಗ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯಿಂದ ನಮ್ಮ ಶಕ್ತಿ ಅಧಿಕಗೊಂಡಿದೆ. ನರೇಂದ್ರ ಮೋದಿ 73ನೇ ವಯಸ್ಸಿನಲ್ಲೂ ರಜೆ ಪಡೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೂಡ 91 ನೇ ವರ್ಷದಲ್ಲೂ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಅವರೊಂದಿಗೆ ನಾವೆಲ್ಲರೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕಾಗಿದೆ. ಭಗವಂತ ಖೂಬಾ ಗೆಲ್ಲಿಸುವುದು ನನ್ನ ಗುರಿಯಾಗಿದ್ದು ಕುತ್ತಿಗೆ ಕಡಿದರೂ ನಾನು ಆಡಿದ ಮಾತಿಗೆ ತಪ್ಪುವವನಲ್ಲ’ ಎಂದರು.

ಅಭ್ಯರ್ಥಿ ಭಗವಂತ ಖೂಬಾ ಮಾತನಾಡಿ, ‘ಲಿಂಗಾಯತ ಮತ ವಿಭಜನೆ ಮಾಡುವುದಕ್ಕಾಗಿ ಸಚಿವ ಈಶ್ವರ ಖಂಡ್ರೆ ಸತತವಾಗಿ ಪ್ರಯತ್ನಿಸುತ್ತಿದ್ದು ಅದು ಅಸಾಧ್ಯವಾಗಿದೆ. 10 ವರ್ಷದಲ್ಲಿ ಖೂಬಾ ಸಾಧನೆ ಶೂನ್ಯ ಎಂದು ಅವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಬೀದರ್ ಜಿಲ್ಲೆಗೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಬಂದಿದ್ದು ಇದುವರೆಗೆ ಶಾಸಕರಾದ ಅವರ ಕುಟುಂಬದವರ ನಿಷ್ಕಾಳಜಿಯಿಂದಲೇ ಎಂಬುದನ್ನು ಅವರು ಮರೆತಿದ್ದಾರೆ’ ಎಂದರು.

ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ಪುಷ್ಪರಾಜ್ ಹಾರಕೂಡೆ, ಜೆಡಿಎಸ್ ಕಾರ್ಯಾಧ್ಯಕ್ಷ ಆಕಾಶ ಖಂಡಾಳೆ, ಸುಧೀರ ಕಾಡಾದಿ, ಮಾಧವರಾವ್ ಹಸೂರೆ, ಪ್ರದೀಪ ಗಡವಂತೆ, ಜಗನ್ನಾಥ ಜಮಾದಾರ, ಸೂರ್ಯಕಾಂತ ಚಿಲ್ಲಾಬಟ್ಟೆ, ದಿಗಂಬರ ಜಲ್ದೆ, ಶಂಕರ ನಾಗದೆ, ಜ್ಞಾನೇಶ್ವರ ಮುಳೆ, ಸಂಜೀವ ಸಂಗನೂರೆ, ರತಿಕಾಂತ ಕೊಹಿನೂರ, ಶಾಂತವಿಜಯ ಪಾಟೀಲ, ಶರಣಪ್ಪ ಪರೆಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT