ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಸೂರ: ಗಡಿಭಾಗದಲ್ಲಿ ಮಾದರಿ ಸರ್ಕಾರಿ ಪ್ರೌಢಶಾಲೆ

ಗುರುಪ್ರಸಾದ ಮೆಂಟೇ
Published 16 ಮೇ 2024, 5:35 IST
Last Updated 16 ಮೇ 2024, 5:35 IST
ಅಕ್ಷರ ಗಾತ್ರ

ಹುಲಸೂರ: ಶಿಕ್ಷಕರು ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ಶ್ರಮಿಸಿದರೆ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಬೆಳೆಯುತ್ತವೆ. ಇದಕ್ಕೆ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಉತ್ತಮ ಉದಾಹರಣೆ.

ಹೈಟೆಕ್‌ ದರ್ಜೆಯ ಕಲಿಕಾ ಸೌಲಭ್ಯ ಒಳಗೊಂಡಿರುವ ಈ ಪ್ರೌಢಶಾಲೆ, ಹುಲಸೂರ ವಲಯದಲ್ಲಿ ಹೆಚ್ಚು ದಾಖಲಾತಿ ಹೊಂದಿದ ಶಾಲೆಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ನಾಲ್ಕು ವರ್ಷಗಳ ಹಿಂದೆ ಇಲ್ಲಿ 86 ವಿದ್ಯಾರ್ಥಿಗಳಿದ್ದರು. ಆದರೆ, ಈಗ 8 ರಿಂದ 10ನೇ ತರಗತಿಯವರೆಗೆ 135 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ.

2008ರಲ್ಲಿ ಈ ಶಾಲೆ ಸ್ಥಾಪನೆಯಾಗಿದ್ದು, ಆರ್‌ಎಂಎಸ್ಎ ಶಿಕ್ಷಣ ಅಭಿಯಾನ ಅಡಿಯಲ್ಲಿ 10 ತರಗತಿ ಕೊಠಡಿಗಳಿರುವ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು, ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಕೊಠಡಿ ಮತ್ತು 4 ಸಾವಿರಕ್ಕೂ ಅಧಿಕ ಪುಸ್ತಕಗಳಿರುವ ಗ್ರಂಥಾಲಯ ಇಲ್ಲಿದೆ.

ತಾಲ್ಲೂಕಿನಲ್ಲಿ ಈಗ ಅದು ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಪೈಪೋಟಿ ನಡೆಸುತ್ತಿದೆ. ಉಚಿತ ಪಠ್ಯಪುಸ್ತಕ, ಶೌಚಾಲಯ, ಪ್ರಯೋಗಾಲಯ, ಆಟದ ಮೈದಾನ, ಕೈತೋಟ, ಕಂಪ್ಯೂಟ‌ರ್ ಕೋಣೆ ಹೊಂದಿದೆ.

‘ನಮ್ಮಲ್ಲಿ ಸೇವೆ ಸಲ್ಲಿಸುತ್ತಿರುವ 10 ಮಂದಿ ಶಿಕ್ಷಕರೂ ಸ್ನಾತಕೋತ್ತರ ಪದವೀಧರರಾಗಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ದೈಹಿಕ ಶಿಕ್ಷಕರ ಕೊರತೆ ಇದೆ. ಈ ಕೊರತೆಯನ್ನು ಇತರೆ ವಿಷಯ ಬೋಧನೆಯ ಶಿಕ್ಷಕರೇ ತುಂಬುತ್ತಿದ್ದಾರೆ. ಅವರೊಂದಿಗೆ ನಾಲ್ಕು ಜನ ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. 2024 ನೇ ಈ ಶಾಲೆಯ ಫಲಿತಾಂಶ ಶೇ 78.12 ಆಗಿದೆ’ ಎಂದು ಮುಖ್ಯಶಿಕ್ಷಕ ಸೂರ್ಯಕಾಂತ ಪಾಟೀಲ ಪ್ರಜಾವಾಣಿಗೆ ತಿಳಿಸಿದರು.

ಸ್ಟಡಿ ಕಾರ್ನರ್: ಈ ಶಾಲೆಯಲ್ಲಿ ತಿಂಗಳಿಗೊಮ್ಮೆ ಮಧ್ಯಾಹ್ನದ ಬಿಸಿಯೂಟಕ್ಕೆ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಿ, ಮಕ್ಕಳಿಗೆ ಉಣಬಡಿಸಲಾಗುತ್ತದೆ. ಕೊಠಡಿಯೊಂದರಲ್ಲಿ ಪ್ರತಿ ವಿಷಯದ 'ಸ್ಟಡಿ ಕಾರ್ನರ್' ರೂಪಿಸಲಾಗಿದ್ದು, ಆಯಾ ವಿಷಯಗಳಿಗೆ ಸಂಬಂಧಿಸಿದ ಹಳೆಯ ಪ್ರಶ್ನೆಪತ್ರಿಕೆಗಳು, ಪುಸ್ತಕಗಳು, ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಲಭ್ಯವಿವೆ. ಪ್ರತಿ ಶನಿವಾರ ಯೋಗ ತರಗತಿ ನಡೆಸಲಾಗುತ್ತದೆ

ವಿಶೇಷ ತರಗತಿ: ಪ್ರತಿದಿನ ಶಾಲೆ ಆರಂಭಕ್ಕೂ ಮುನ್ನ, ಹಾಗೂ ಶಾಲೆಯ ಅವಧಿ ಮುಗಿದ ನಂತರ, ಒಂದು ತಾಸು ಆಯಾ ವಿಷಯಕ್ಕೆ ಸಂಬಂಧಿಸಿ ಗುಂಪು ಚರ್ಚೆ ಮಾಡಿ ವಿದ್ಯಾರ್ಥಿಗಳಲ್ಲಿನ ಶೈಕ್ಷಣಿಕ ಗೊಂದಲ ಬಗೆಹರಿಸಲಾಗುತ್ತಿದೆ.

ದಿಕ್ಸೂಚಿ ಸಹಕಾರಿ: ತಾಲ್ಲೂಕು ಪಂಚಾಯತ್‌ ಇಒ ಮಹದೇವ್ ಬಾಬಳಗಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೆರವಿನೊಂದಿಗೆ ಗ್ರಾಮೀಣ ಮಕ್ಕಳಿಗೆ ಅನುಕೂಲ ಆಗಲಿ ಎಂದು ತಾಲ್ಲೂಕಿನ ಎಲ್ಲಾ ಸರ್ಕಾರಿ ಪ್ರೌಢಶಾಲೆಗೆ ಉಚಿತ ದಿನಪತ್ರಿಕೆ ಪೂರೈಸಲಾಗುತ್ತದೆ. ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಬರುವ ‘ದಿಕ್ಸೂಚಿ’ ಪರೀಕ್ಷಾ ಮಾರ್ಗದರ್ಶಿಯು ಸಹಕಾರಿಯಾಗಿ ಮಕ್ಕಳು ಹೆಚ್ಚು ಅಂಕಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.

2024ನೇ ಸಾಲಿನ ಫಲಿತಾಂಶ: ಪಟ್ಟಣದ ಸರ್ಕಾರಿ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 78.12 ರಷ್ಟು ಫಲಿತಾಂಶ ಲಭಿಸಿದೆ. ಶಾಲೆಯ ವಿದ್ಯಾರ್ಥಿನಿ ರಾಜಲಕ್ಷ್ಮಿ ರಾಜಕುಮಾರ ಶೇ 95.68 ಅಂಕ ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದರು. ಅಶ್ವಿನಿ ಬಸವರಾಜ (ಶೇ 94.88 ) ಎರಡನೇ ಸ್ಥಾನ ಪಡೆದಿದ್ದರು.

ವಿದ್ಯಾರ್ಥಿಗಳಿಗೆ ಸಿರಿಧಾನ್ಯದ ಮಾಹಿತಿ ನೀಡುತ್ತಿರುವ ಸಂಪನ್ಮೂಲ ವ್ಯಕ್ತಿಗಳು
ವಿದ್ಯಾರ್ಥಿಗಳಿಗೆ ಸಿರಿಧಾನ್ಯದ ಮಾಹಿತಿ ನೀಡುತ್ತಿರುವ ಸಂಪನ್ಮೂಲ ವ್ಯಕ್ತಿಗಳು
ಶಾಲೆಯಲ್ಲಿ ಮಾದರಿ ಪೌಷ್ಟಿಕ ಕೈತೋಟ ನಿರ್ಮಾಣ ಜೂನ್ ತಿಂಗಳಿಂದ ಮಕ್ಕಳ ಕಲಿಕೆಗೆ ಆಟೊಮೊಬೈಲ್ ಶಿಕ್ಷಣ ಹೆಚ್ಚು ಅಂಕ ಗಳಿಸಲು ಪ್ರಜಾವಾಣಿ ದಿಕ್ಸೂಚಿ
ಎಸ್‌ಡಿಎಂಸಿ ಸದಸ್ಯರುಜನಪ್ರತಿನಿಧಿಗಳು ಅಧಿಕಾರಿಗಳು ಶಿಕ್ಷಕರು ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ಶಾಲೆ ಪ್ರಗತಿಯತ್ತ ಸಾಗಿದೆ.
ಸೂರ್ಯಕಾಂತ ಪಾಟೀಲ ಮುಖ್ಯಶಿಕ್ಷಕ
ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬರುವ ಎಸ್‌ಎಸ್‌ಎಲ್‌ಸಿ ದಿಕ್ಸೂಚಿ ನನ್ನ ಹಾಗೂ ನನ್ನ ಸಹಪಾಠಿಗಳ ಅಂಕ ಹೆಚ್ಚುಗಳಿಸುವಲ್ಲಿ ನೆರವಾಗಿದೆ. ದಿನಪತ್ರಿಕೆ ಓದುವ ಅವಕಾಶ ಕಲ್ಪಿಸಿಕೊಟ್ಟ ತಾ.ಪಂ. ಇಒ ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಧನ್ಯವಾದಗಳು.
ರಾಜಲಕ್ಷ್ಮಿ ರಾಜಕುಮಾರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ
ಮೂಲಭೂತ ಸೌಕರ್ಯದ ಜೊತೆಗೆ ಶಿಕ್ಷಕರ ಕಳಕಳಿ ಶಾಲೆಯ ಪ್ರಗತಿಗೆ ಕಾರಣ. ಮಕ್ಕಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸುವ ವ್ಯವಸ್ಥೆ ಇದೆ.
ರಾಜಕುಮಾರ ಚಾಂಗ್ಲುರೆ ಎಸ್‌ಡಿಎಂಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT