ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಔರಾದ್‌ | ಮೊರಾರ್ಜಿ ಶಾಲೆಗೆ ಇಲ್ಲ ಸ್ವಂತ ಕಟ್ಟಡ

ಮನ್ಮಥಪ್ಪ ಸ್ವಾಮಿ
Published 17 ಡಿಸೆಂಬರ್ 2023, 5:15 IST
Last Updated 17 ಡಿಸೆಂಬರ್ 2023, 5:15 IST
ಅಕ್ಷರ ಗಾತ್ರ

ಔರಾದ್: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಅತ್ಯುತ್ತಮ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿ ಆರಂಭವಾದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ವಂತ ಕಟ್ಟಡ ಸೇರಿದಂತೆ ಮೂಲಸೌಲಭ್ಯಗಳಿಂದ ವಂಚಿತವಾಗಿದೆ.

ಹದಿನೈದು ವರ್ಷಗಳ ಹಿಂದೆ ಆರಂಭವಾದ ವಸತಿ ಶಾಲೆ ಇಂದಿಗೂ ಖಾಸಗಿ ಕಟ್ಟಡದಲ್ಲೇ ನಡೆಯುತ್ತಿದೆ! ಪಟ್ಟಣದ ಉಪ ಕಾರಾಗೃಹದ ಎದುರಿನ 2 ಅಂತಸ್ತಿನ ಮನೆ ಬಾಡಿಗೆ ಪಡೆದು, ಅದರಲ್ಲಿ ಶಾಲೆ ನಡೆಸಲಾಗುತ್ತಿದೆ. 6ರಿಂದ 10ನೇ ತರಗತಿ ವರೆಗೆ 216 ಮಕ್ಕಳು ಇಲ್ಲಿ ಓದುತ್ತಾರೆ. ಮನೆಮಾಲೀಕರು ತರಗತಿ ನಡೆಸಲು ಒಂದಿಷ್ಟು ಕೊಠಡಿಗಳ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಆದರೆ ವಾಸ್ತವ್ಯಕ್ಕೆ ಚಿಕ್ಕ ಕೊಠಡಿಗಳಿವೆ. ಅದರಲ್ಲೇ ಐದಾರು ವಿದ್ಯಾರ್ಥಿಗಳು ಇರಬೇಕು. ಮಲಗಲು ತೊಂದರೆ ಆಗಬಾರದೆಂದು ವಿದ್ಯಾರ್ಥಿಗಳ ಪೆಟ್ಟಿಗೆ ಹಾಗೂ ಇತರೆ ಸಾಮಗ್ರಿಗಳನ್ನು ಮತ್ತೊಂದು ಕೊಠಡಿಯಲ್ಲಿ ಇಡುವ ವ್ಯವಸ್ಥೆ ಮಾಡಲಾಗಿದೆ. ಶಾಲೆ ಎದುರಿನ ಖಾಲಿ ನಿವೇಶನದಲ್ಲಿ ಶೆಡ್ ಹೊಡೆದು ಅದರಲ್ಲಿ ಅಡುಗೆ ಮಾಡಲಾಗುತ್ತಿದೆ.

‘ನಮ್ಮ ಮಕ್ಕಳು ಇಲ್ಲಿ ವಿವಿಧ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಊಟಕ್ಕೆ ಸಮಸ್ಯೆ ಇಲ್ಲ. ಆದರೆ ಉಳಿದುಕೊಳ್ಳಲು ತೊಂದರೆಯಾಗುತ್ತಿದೆ. ಮಲಗಲು ಮಂಚದ ವ್ಯವಸ್ಥೆಯಿಲ್ಲ. ಪೂರ್ಣ ಕಾಲಿಕ ಶಿಕ್ಷಕರ ಕೊರತೆಯೂ ಇದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳು ಓದುವಂತಹ ವಾತಾವರಣ ಈ ಶಾಲೆಯಲ್ಲಿ ಇಲ್ಲ’ ಎಂದು ಪಾಲಕರು ಗೋಳು ತೋಡಿಕೊಂಡಿದ್ದಾರೆ.

‘ನಮ್ಮ ಶಾಲೆಗೆ ಮುಖ್ಯವಾಗಿ ಸ್ವಂತ ಕಟ್ಟಡದ ಸಮಸ್ಯೆಯಿದೆ. ವನಮಾರಪಳ್ಳಿ ಹತ್ತಿರ 9 ಎಕರೆ ಸರ್ಕಾರಿ ಜಮೀನು ಶಾಲೆ ಹೆಸರಿಗೆ ಆಗಿದೆ. ಆದರೆ ಅನುದಾನ ಕೊರತೆಯಿಂದ ಕಟ್ಟಡ ಆಗಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಸುತ್ತಿದ್ದೇವೆ. ಬೇರೆ ಕಡೆ ಇಂತಹ ಕಟ್ಟಡವೂ ಇಲ್ಲ’ ಎಂದು ಪ್ರಾಂಶುಪಾಲ ಬಾಲಾಜಿ ಗಾಯಕವಾಡ ತಿಳಿಸಿದ್ದಾರೆ.

‘ಈ ಬಾಡಿಗೆ ಕಟ್ಟಡಕ್ಕೆ ತಿಂಗಳಿಗೆ ₹72 ಸಾವಿರ ಕೊಡಲಾಗುತ್ತದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಾಡಿಗೆ ಮಾಲೀಕರು ಹೆಚ್ಚುವರಿ ಕೊಠಡಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಆದರೆ ಈ ಹೆಚ್ಚುವರಿ ಬಾಡಿಗೆ ಅನುದಾನ ಎರಡು ವರ್ಷದಿಂದ ಬಂದಿಲ್ಲ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT