ಬಸವಕಲ್ಯಾಣ: ವೇಗವಾಗಿ ಹೋಗುತಿದ್ದ ವಾಹನದ ಚಾಲಕನಿಗೆ ಪ್ರಶ್ನಿಸಿದಕ್ಕೆ ಯುವಕನಿಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಿದ ಘಟನೆ ತಾಲ್ಲೂಕಿನ ಮೋರಖಂಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಶ್ರೀನಿವಾಸ ಬಿರಾದಾರ (35) ಕೊಲೆಯಾದವರು. ಕೃಷಿಕರಾಗಿರುವ ಇವರು ಬಿಜೆಪಿ ಬೂತ್ ಘಟಕದ ಅಧ್ಯಕ್ಷರಾಗಿದ್ದರು.
ಗ್ರಾಮದ ಸಮೀಪದಲ್ಲಿ ರಸ್ತೆ ಸುಧಾರಣಾ ಕಾರ್ಯ ನಡೆಯುತ್ತಿದ್ದು, ಅಲ್ಲಿಗೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ವೇಗವಾಗಿ ಹೋಗುತ್ತಿತ್ತು. ಹೀಗಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ಶ್ರೀನಿವಾಸ ಅವರ ಮೈಮೇಲೆ ಕೆಸರು ಸಿಡಿದಿತ್ತು.
ಇದರಿಂದ ಕೋಪಗೊಂಡ ಶ್ರೀನಿವಾಸ ಚಾಲಕನಿಗೆ ಈ ಬಗ್ಗೆ ವಿಚಾರಿಸಿದ್ದಾನೆ. ಆಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಟಿಪ್ಪರ್ ನಿಲ್ಲಿಸಿದ ಚಾಲಕ ಕೈಯಲ್ಲಿ ರಾಡ್ ಹಿಡಿದುಕೊಂಡು ಬಂದು ಈತನ ತಲೆಗೆ ಹೊಡೆದಿದ್ದಾನೆ. ಬಲವಾದ ಪೆಟ್ಟಾಗಿದ್ದರಿಂದ ಬಿರಾದಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದ ಊರಿನ ಯುವಕರು ಹಾಗೂ ಪೊಲೀಸರು ಟಿಪ್ಪರ್‌ನ್ನು ಬೆನ್ನಟ್ಟಿ ಚಾಲಕ ಶಿವರಾಜ ಬನಸೂಡೆ ಎಂಬಾತನನ್ನು ಹಿಡಿದಿದ್ದಾರೆ. ಈ ಸಂಬಂಧ ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆದಿದೆ.