ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ ಸಾಕಾಣಿಕೆದಾರರಿಗೆ ಶೀಘ್ರ ಟಗರು ವಿತರಣೆ: ಪಶು ಸಂಗೋಪನೆ ಸಚಿವ ವೆಂಕಟರಾವ್

Last Updated 24 ಸೆಪ್ಟೆಂಬರ್ 2018, 14:38 IST
ಅಕ್ಷರ ಗಾತ್ರ

ಬೀದರ್‌: ‘ಕುರಿ ಸಾಕಾಣಿಕೆದಾರರಿಗೆ ಶೀಘ್ರದಲ್ಲೇ ನಾರಿ ಸುವರ್ಣ ತಳಿಯ ಟಗರು ವಿತರಿಸಲಾಗುವುದು. ಇದಕ್ಕಾಗಿಯೇ ₹ 1 ಕೋಟಿ ಕಾಯ್ದಿರಿಸಲಾಗಿದೆ’ ಎಂದು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದರು.

ನಗರದ ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆ ಹಾಗೂ ನಂತರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನಾರಿ ಸುವರ್ಣ ತಳಿಯ ಕುರಿಗಳು ವರ್ಷದಲ್ಲಿ ಏಕಕಾಲಕ್ಕೆ ಎರಡರಿಂದ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತವೆ. ಕನಿಷ್ಠ 25 ಕುರಿಗಳನ್ನು ಹೊಂದಿರುವ ಸಾಕಾಣಿಕೆದಾರರು ಅಥವಾ ಸೊಸೈಟಿಗಳಿಗೆ ಆದ್ಯತೆ ಮೇಲೆ ಟಗರು ವಿತರಿಸಲಾಗುವುದು’ ಎಂದು ಹೇಳಿದರು.

‘ಮಹಾರಾಷ್ಟ್ರದ ಫಲ್ಟಾನ್‌ನಲ್ಲಿನ ನಿಬಂಕರ್‌ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಪಶ್ಚಿಮ ಬಂಗಾಳದ ಗೆರೋಲ್‌, ಮಹಾರಾಷ್ಟ್ರದ ಡೆಕ್ಕೋರಿ ಮತ್ತು ಮಡ್ಲ್ಯಾಳ್‌, ಕರ್ನಾಟಕದ ಬಂಡೂರು, ಇಸ್ರೇಲ್‌ನ ಅವಾಸಿ ಈ ಐದು ಕುರಿ ತಳಿಗಳ ಜೀನ್ಸ್‌ನಿಂದ ಹೊಸ ತಳಿ ಸೃಷ್ಟಿಸಲಾಗಿದೆ. ರಾಜ್ಯದಲ್ಲಿ ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನಲ್ಲಿ ಈ ತಳಿ ಅಭಿವೃದ್ಧಿ ಪಡಿಸಲಾಗಿದೆ’ ಎಂದು ಹೇಳಿದರು.

‘ಬಿದಿರಿನಿಂದ ಶೆಡ್‌ ನಿರ್ಮಿಸಿ ಅದರಲ್ಲೇ ಮೇವು ಹಾಕಿ ಸಾಕಬಹುದು. ವಿಶಾಲವಾದ ಜಾಗ ಇದ್ದರೆ ಇನ್ನೂ ಉತ್ತಮವಾಗಿ ಬೆಳೆಯುತ್ತವೆ. ಮಾಮೂಲಿ ಕುರಿಗಳಿಗೆ ನೀಡುವ ಔಷಧೋಪಚಾರವನ್ನೇ ಈ ತಳಿಗೂ ನೀಡಲಾಗುತ್ತದೆ. ಈ ತಳಿಯ ಕುರಿಗಳು ಹೆಚ್ಚು ಹಾಲು ಕೊಡುತ್ತವೆ. ಈ ಕುರಿಗಳ ಮಾಂಸವೂ ರುಚಿಯಾಗಿರುತ್ತದೆ’ ಎಂದು ತಿಳಿಸಿದರು.

‘ಬ್ರ್ಯಾಂಡ್‌ ಮಾಡಿ ಮಾರಾಟ ಮಾಡುವುದರಿಂದ ಇದರಿಂದ ಕುರಿಗಾರರಿಗೆ ಉತ್ತಮ ಬೆಲೆ ದೊರೆಯಲಿದೆ. ಹೆಚ್ಚು ತೂಕ ಇರುವ ಕುರಿಗಳಿಗೆ ಹೆಚ್ಚು ಬೆಲೆ ಸಿಗಲಿದೆ. ಮೊದಲ ಹಂತದಲ್ಲಿ ವಿಭಾಗಗಳಲ್ಲಿ ಒಂದು ಸೊಸೈಟಿ ಆರಂಭಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ಉಪ ನಿರ್ದೇಶಕ ರವಿಕುಮಾರ ಭೂರೆ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಗೌತಮ ಅರಳಿ, ಸಹಾಯಕ ನಿರ್ದೇಶಕರಾದ ಓಂಕಾರ ಪಾಟೀಲ, ನರಸಪ್ಪ, ಕೋಳಿ ಸಾಕಾಣಿಕೆ ಕೇಂದ್ರದ ಯೋಗೇಂದ್ರ ಕುಲಕರ್ಣಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ಅಧಿಕಾರಿ ಡಾ.ಶೇಷಪ್ಪ ಇದ್ದರು.

ಕಚೇರಿಗಳ ಗಣಕೀಕರಣ
‘ರಾಜ್ಯದ ಎಲ್ಲ ಪಶು ಸಂಗೋಪನೆ ಇಲಾಖೆಯ ಕಚೇರಿಗಳನ್ನು ಗಣಕೀಕರಣಗೊಳಿಸಿ ಕೇಂದ್ರಿಕೃತಗೊಳಿಸಲಾಗುವುದು. ಇದರಿಂದ ಪಶು ಆಸ್ಪತ್ರೆಗಳಲ್ಲಿ ಲಭ್ಯವಿರುವ ಔಷಧ, ಬೇಕಿರುವ ಔಷಧ ಮತ್ತಿತರ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಶೀಘ್ರ ಅನುದಾನ ಬಿಡುಗಡೆಗೂ ಅನುಕೂಲವಾಗಲಿದೆ’ ಎಂದು ಪಶು ಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದರು.

‘ಜಾನುವಾರು ವಿಮೆ ಮಾಡಿಸಲು ಶೀಘ್ರ ಆ್ಯಪ್‌ ಪರಿಚಯಿಸಲಾಗುವುದು. ಜಾನುವಾರು ಮಾಲೀಕರು ಮೊಬೈಲ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಜಾನುವಾರಿನ ಪ್ರತಿಯೊಂದು ಮಾಹಿತಿಯನ್ನು ದಾಖಲಿಸಬಹುದು. ಇದು ಕಚೇರಿಯ ವೈಬ್‌ಸೈಟ್‌ನಲ್ಲಿ ದಾಖಲಾಗುವುದರಿಂದ ನಿಖರ ಮಾಹಿತಿ ದೊರೆಯಲಿದೆ’ ಎಂದು ಹೇಳಿದರು.

‘ಬೀದರ್‌ ಜಿಲ್ಲೆಯಲ್ಲಿ 1.30 ಲಕ್ಷ ಜಾನುವಾರುಗಳ ಪೈಕಿ 50 ಸಾವಿರ ಜಾನುವಾರುಗಳಿಗೆ ಕಿವಿಯೊಲೆಗಳನ್ನು ಅಳವಡಿಸಲಾಗಿದೆ. ಇದರಿಂದ ಜಾನುವಾರು ಕಳುವಾದರೂ ಅದು ಎಲ್ಲಿದೆ ಎನ್ನುವ ಮಾಹಿತಿ ದೊರೆಯಲಿದೆ’ ಎಂದು ತಿಳಿಸಿದರು.

ಮೇವು ಬ್ಯಾಂಕ್‌ಗೆ ಜಾಗ ಗುರುತಿಸಿ
ಜಿಲ್ಲೆಯಲ್ಲಿ ಕಡಿಮೆ ಮಳೆಯಾಗಿರುವ ಕಾರಣ ಮೇವಿನ ಅಭಾವ ಉಂಟಾಗುವ ಮೊದಲೇ ಮೇವು ಬ್ಯಾಂಕ್‌ ಸ್ಥಾಪನೆ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ 3,64,949 ಜಾನುವಾರು ಇವೆ. ಪ್ರಸ್ತುತ 15 ವಾರಗಳಿಗೆ ಸಾಕಾಗುವಷ್ಟು ಮೇವಿನ ಲಭ್ಯತೆ ಇದೆ. 2018–2019ನೇ ಸಾಲಿನಲ್ಲಿ ಕುರಿಗಾಹಿ ಸುರಕ್ಷಾ ಯೋಜನೆಯಡಿ 720 ಫಲಾನುಭವಿಗಳಿಗೆ ₹ 35.62 ಲಕ್ಷ ಪರಿಹಾರ ಧನ ವಿತರಿಸಲಾಗಿದೆ ಎಂದು ಇಲಾಖೆಯ ಉಪ ನಿರ್ದೇಶಕ ರವಿಕುಮಾರ ಭೂರೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT