ಬುಧವಾರ, ಡಿಸೆಂಬರ್ 7, 2022
21 °C

ಘೋಡವಾಡಿಯ ಲಕ್ಷ್ಮಿ ಮೇತ್ರೆಗೆ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗಲ್ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಅತ್ಯುತ್ತಮ ಸೇವೆಗೆ ಕೊಡುವ 2021ನೇ ಸಾಲಿನ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗಲ್ ಪ್ರಶಸ್ತಿ ಹುಮನಾಬಾದ್‌ ತಾಲ್ಲೂಕಿನ ಘಾಟಬೋರಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಘೋಡವಾಡಿ ಉಪ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಲಕ್ಷ್ಮಿ ಮೇತ್ರೆ ಅವರಿಗೆ ಲಭಿಸಿದೆ.

ನವೆಂಬರ್ 7ರಂದು ಬೆಳಿಗ್ಗೆ 11 ಗಂಟೆಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲಕ್ಷ್ಮಿ ಮೇತ್ರೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಬೀದರ್‌ನ ಸರ್ಕಾರಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಶುಶ್ರೂಷಕಿಯರ ತರಬೇತಿ ಹಾಗೂ ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಎಂ.ಎ ಪದವಿ ಪಡೆದು 2004ರ ಅಕ್ಟೋಬರ್ 28ರಂದು ಔರಾದ್ ತಾಲ್ಲೂಕಿನ ತೋರಣಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಸೇವೆಗೆ ಸೇರಿದರು. ನಂತರ 2017ರ ಅಗಸ್ಟ್‌ನಲ್ಲಿ ಘಾಟಬೋರಳಕ್ಕೆ ವರ್ಗಾವಣೆಗೊಂಡು ಅಲ್ಲಿಯೇ ಸೇವೆ ಮುಂದುವರಿಸಿದ್ದಾರೆ.

2004ರ ಮೇ ನಲ್ಲಿ ಕಮಲನಗರ ತಾಲ್ಲೂಕಿನ ಖತಗಾಂವದ ವಿಜಯಕುಮಾರ ಮೇತ್ರೆಯವರೊಂದಿಗೆ ಮದುವೆ ಆಗಿತ್ತು. ಆದರೆ, ಐದು ತಿಂಗಳಲ್ಲೇ ಪತಿಯನ್ನು ಕಳೆದುಕೊಂಡರು. ಆರೋಗ್ಯ ಸೇವೆಯಲ್ಲಿ ಸಮರ್ಪಿಸಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿದರು. 2014ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಕಿರಿಯ ಆರೋಗ್ಯ ಸಹಾಯಕಿ ಪ್ರಶಸ್ತಿ ಲಭಿಸಿದೆ. ಅಖಿಲ ಕರ್ನಾಟಕ ಖಾಸಗಿ ಶುಶ್ರೂಷಾಧಿಕಾರಿಗಳ ಸಂಘದ ಪ್ರಶಸ್ತಿಯೂ ದೊರಕಿದೆ.

ದೇಶದ 51 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕದಿಂದ ಘೋಡವಾಡಿ ಉಪ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಲಕ್ಷ್ಮಿ ಮೇತ್ರೆ ಹಾಗೂ ಚಿಕ್ಕಮಗಳೂರಿನ ಲಿಂಗದಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಸಂಜೀದಾ ಬಾನು ಆಯ್ಕೆಯಾಗಿದ್ದಾರೆ.

ತಾಯಿ, ಮಗುವಿಗೆ ಉತ್ತಮ ಸೇವೆ ನೀಡಿದ ಹಾಗೂ ಬೀದರ್ ಜಿಲ್ಲೆಯ ಹುಮನಾಬಾದ್‌ ತಾಲ್ಲೂಕಿನ ಘಾಟಬೋರಾಳ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದ ಸಂದರ್ಭದಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಕ್ಕಾಗಿ ಲಕ್ಷ್ಮಿ ಮೇತ್ರೆ ಅವರು ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗಲ್ ಪ್ರಶಸ್ತಿಗೆ ಆಯ್ಯೆಯಾಗಿದ್ದಾರೆ ಎಂದು ಡಿಎಚ್ಒ ಡಾ.ರತಿಕಾಂತ ಸ್ವಾಮಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು