ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಿಲ ಭಾರತ ಮಟ್ಟದಲ್ಲಿ ಕಾರ್ತಿಕ ರೆಡ್ಡಿಗೆ 9ನೇ ರ್‍ಯಾಂಕ್

ನೀಟ್‍ನಲ್ಲಿ ‘ಶಾಹೀನ್’ ಹೊಸ ವಿಕ್ರಮ
Last Updated 16 ಅಕ್ಟೋಬರ್ 2020, 17:02 IST
ಅಕ್ಷರ ಗಾತ್ರ

ಬೀದರ್: ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಇಲ್ಲಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ ರೆಡ್ಡಿ 9ನೇ ರ್‍ಯಾಂಕ್ ಗಳಿಸಿ ಅಮೋಘ ಸಾಧನೆ ಮಾಡಿದ್ದಾರೆ.

ರಾಜ್ಯದಲ್ಲೇ ಅತಿಹೆಚ್ಚು ಅಂದರೆ 710 ಅಂಕಗಳನ್ನು ಪಡೆದಿದ್ದಾರೆ. ಎಂ.ಡಿ. ಅರ್ಬಾಜ್ ಅಹಮ್ಮದ್ 700 ಅಂಕಗಳೊಂದಿಗೆ ಅಖಿಲ ಭಾರತ ಮಟ್ಟದಲ್ಲಿ 85ನೇ ರ್‍ಯಾಂಕ್ ಪಡೆದಿದ್ದಾರೆ.

ನೀಟ್‍ನಲ್ಲಿ ಕಾಲೇಜು ವಿದ್ಯಾರ್ಥಿಗಳು ರಾಜ್ಯದಲ್ಲೇ ಹೊಸ ವಿಕ್ರಮ ಸಾಧಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು, ಪ್ರಸಕ್ತ ವರ್ಷ ಕಾಲೇಜಿನ ಸುಮಾರು 400 ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯದ ಒಟ್ಟು ವೈದ್ಯಕೀಯ ಸೀಟುಗಳಲ್ಲಿ ಕಾಲೇಜು ಶೇ 10 ರಷ್ಟು ಸೀಟುಗಳನ್ನು ಗಳಿಸುವ ನಿರೀಕ್ಷೆ ಇದೆ. ಕಳೆದ ವರ್ಷ ಕಾಲೇಜು ಶೇ 8.32 ರಷ್ಟು ಸ್ಥಾನಗಳನ್ನು ಪಡೆದಿದೆ ಎಂದು ಹೇಳಿದ್ದಾರೆ.

ಕಾಲೇಜು 2016 ರಲ್ಲಿ ಸರ್ಕಾರಿ ಕೋಟಾದಡಿ 152, 2017 ರಲ್ಲಿ 201, 2018 ರಲ್ಲಿ 304 ಹಾಗೂ 2019 ರಲ್ಲಿ 327 ಸ್ಥಾನಗಳನ್ನು ಪಡೆದಿದೆ. ನೀಟ್‍ನಲ್ಲಿ 2016 ರಲ್ಲಿ ವಚನಶ್ರೀ ಪಾಟೀಲ 332ನೇ ರ್ಯಾಂಕ್ ಹಾಗೂ 2018 ರಲ್ಲಿ ವಿನೀತ್ ಮೇಗೂರ್ 342ನೇ ರ್ಯಾಂಕ್ ಗಳಿಸಿ ಸಾಧನೆ ತೋರಿದ್ದರು ಎಂದು ತಿಳಿಸಿದ್ದಾರೆ.

ಏಕಾಗ್ರತೆ, ಶಿಸ್ತು ಸೇರಿದಂತೆ ಕಾಲೇಜಿನಲ್ಲಿ ಇರುವ ಉತ್ತಮ ಶೈಕ್ಷಣಿಕ ವಾತಾವರಣ, ಆಡಳಿತ ಮಂಡಳಿ, ಉಪನ್ಯಾಸಕರ ಮಾರ್ಗದರ್ಶನ, ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಪಾಲಕರ ಸಹಕಾರದಿಂದಾಗಿ ನೀಟ್‍ನಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಸಾಧಕ ವಿದ್ಯಾರ್ಥಿಗಳಲ್ಲಿ ಹಾಸ್ಟೆಲ್‍ನಲ್ಲಿ ವಾಸವಾಗಿದ್ದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ಎರಡು ದಶಕಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಜಿಲ್ಲೆಯ ಚಿತ್ರಣ ಬದಲಾಗಿದೆ. ಹಿಂದೆ ಪಿಯುಸಿ ಶಿಕ್ಷಣಕ್ಕಾಗಿ ಜಿಲ್ಲೆಯ ವಿದ್ಯಾರ್ಥಿಗಳು ಧಾರವಾಡ, ಮಂಗಳೂರು, ಬೆಂಗಳೂರು ಮೊದಲಾದ ಕಡೆಗೆ ಹೋಗುತ್ತಿದ್ದರು. ಇದೀಗ ಅಲ್ಲಿನ ವಿದ್ಯಾರ್ಥಿಗಳೇ ಬೀದರ್‍ನತ್ತ ಮುಖ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಬೀದರ್‍ನ ಹಿಂದುಳಿದ ಹಣೆಪಟ್ಟಿ ಕಳಚಿದೆ. ನೀಟ್‍ನಲ್ಲಿ ಉತ್ತಮ ರ್ಯಾಂಕ್, ಕೆಸಿಇಟಿಯಲ್ಲಿ ಒಂದಂಕಿಯ ರ್‍ಯಾಂಕ್‌ಗಳು ಬರುತ್ತಿರುವ ಕಾರಣ ಬೀದರ್‍ನ ಘನತೆ ಹೆಚ್ಚಿದೆ. ಹಿಂದೆ ವೈದ್ಯರ ಮಕ್ಕಳೇ ವೈದ್ಯರಾಗುವ ಕಾಲ ಇತ್ತು. ಇದೀಗ ಬಡವರ ಮಕ್ಕಳೂ ವೈದ್ಯರಾಗುತ್ತಿದ್ದಾರೆ. ಶೈಕ್ಷಣಿಕ ಜಾಗೃತಿ ಹಾಗೂ ಗುಣಮಟ್ಟದ ಶಿಕ್ಷಣದಿಂದಾಗಿ ಈ ಬದಲಾವಣೆ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಔರಾದ್ ತಾಲ್ಲೂಕಿನ ಪುಟ್ಟ ಗ್ರಾಮ ತೋರಣಾದಲ್ಲಿ 30 ಜನ ವೈದ್ಯರಿದ್ದಾರೆ. ಇವರಲ್ಲಿ ಬಹುತೇಕರು ಶಾಹೀನ್ ಕಾಲೇಜು ವಿದ್ಯಾರ್ಥಿಗಳೇ ಆಗಿದ್ದಾರೆ ಎಂದು ಅಭಿಮಾನದಿಂದ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT