ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ವರ್ಷದಿಂದ ‘ಸಖಿ’ಗಿಲ್ಲ ಆಡಳಿತಾಧಿಕಾರಿ

ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಎಲ್ಲಾ ರೀತಿಯ ನೆರವು ಕಲ್ಪಿಸುವ ಕೇಂದ್ರ
Published 2 ಆಗಸ್ಟ್ 2023, 6:41 IST
Last Updated 2 ಆಗಸ್ಟ್ 2023, 6:41 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ವೈದ್ಯಕೀಯ ವಿಜ್ಞಾನಗಳ ಸಂಶೋಧನಾ ಸಂಸ್ಥೆಯಲ್ಲಿರುವ (ಬ್ರಿಮ್ಸ್‌) ‘ಸಖಿ ಒನ್‌ ಸ್ಟಾಪ್‌’ ಸೆಂಟರ್‌ನಲ್ಲಿ ವರ್ಷದಿಂದ ಆಡಳಿತಾಧಿಕಾರಿ ಹುದ್ದೆ ಖಾಲಿ ಉಳಿದಿದೆ. ಆದರೆ, ಅತಿ ಮಹತ್ವದ ಆ ಹುದ್ದೆ ಭರ್ತಿಗೆ ಮೀನಮೇಷ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಕುಟುಂಬದಲ್ಲಿ, ಸಮಾಜದಲ್ಲಿ ಹಾಗೂ ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ, ಮಾನಸಿಕ, ದೈಹಿಕ ಹಲ್ಲೆ, ಲೈಂಗಿಕ ಶೋಷಣೆ, ಅವಹೇಳನದಂತಹ ಘಟನೆಗಳು ಜರುಗಿದಾಗ ಅಂತಹವರಿಗೆ ಒಂದೇ ಸೂರಿನಲ್ಲಿ ಎಲ್ಲಾ ರೀತಿಯ ನೆರವು ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ದೇಶದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ‘ಸಖಿ ಒನ್‌ ಸ್ಟಾಪ್‌’ ಸೆಂಟರ್‌ಗಳನ್ನು ಆರಂಭಿಸಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ರಾಷ್ಟ್ರೀಯ ಮಹಿಳಾ ಸಶಕ್ತೀಕರಣ ಮಿಷನ್‌ ಹಾಗೂ ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನೆಯಡಿ 2015ರ ಏಪ್ರಿಲ್‌ 1ರಂದು ‘ಸಖಿ’ ಜಾರಿಗೊಳಿಸಿತು. 2022–23ರಲ್ಲಿ ಹಾಲಿ ಕೇಂದ್ರ ಸರ್ಕಾರವು ‘ಮಿಷನ್‌ ಶಕ್ತಿ’ ಯೋಜನೆಯಡಿ ಸೇರಿಸಿ, ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದೆ. 

ನಗರದ ಬ್ರಿಮ್ಸ್‌ ಆವರಣದಲ್ಲಿ ‘ಸಖಿ’ಗಾಗಿಯೇ ಪ್ರತ್ಯೇಕ ಸುಸಜ್ಜಿತವಾದ ಕಟ್ಟಡವಿದೆ. ಆದರೆ, ಇದರ ಮೇಲುಸ್ತುವಾರಿ ನೋಡಿಕೊಳ್ಳಬೇಕಾದ ಆಡಳಿತಾಧಿಕಾರಿಯೇ ಇಲ್ಲದಿರುವುದರಿಂದ ಕೇಂದ್ರ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ಇಷ್ಟೇ ಅಲ್ಲ, ಮಹಿಳಾ ಸಂತ್ರಸ್ತೆಯರ ಗೋಳು ಆಲಿಸಿ, ಪರಿಹಾರ ಕಲ್ಪಿಸುವುದಕ್ಕಾಗಿಯೇ ಬ್ರಿಮ್ಸ್‌ ಆವರಣದಲ್ಲಿ ಇಂತಹದ್ದೊಂದು ‘ಸಖಿ’ ಕೇಂದ್ರ ಇದೆ ಎನ್ನುವುದೇ ಬಹುತೇಕರಿಗೆ ಗೊತ್ತಿಲ್ಲ. ಇದರ ಬಗ್ಗೆ ಹೆಚ್ಚಿನ ಪ್ರಚಾರದ ಕೊರತೆಯೂ ಪ್ರಮುಖ ಕಾರಣ ಎಂದು ಗೊತ್ತಾಗಿದೆ.

‘ಬೀದರ್‌ ಜಿಲ್ಲೆಯಲ್ಲಿ ‘ಸಖಿ’ ಬಹಳ ನಿಷ್ಕ್ರಿಯವಾಗಿದೆ ಎಂಬ ವಿಷಯ ನನ್ನ ಗಮನಕ್ಕೂ ಬಂದಿದೆ. ಒಂದು ವರ್ಷದಿಂದ ಆಡಳಿತಾಧಿಕಾರಿಯೇ ಅಲ್ಲಿಲ್ಲ. ಪೋಕ್ಸೊ, ಬಾಲ್ಯ ವಿವಾಹ, ಅತ್ಯಾಚಾರಕ್ಕೊಳಗಾದವರು ಸೇರಿದಂತೆ ಮಾನಸಿಕವಾಗಿ ನೊಂದವರಿಗೆ ಈ ಕೇಂದ್ರ ನೆರವು ನೀಡಬೇಕು. ಆದರೆ, ಆ ರೀತಿ ಕೆಲಸಗಳಾಗುತ್ತಿಲ್ಲ ಎಂದು ಗೊತ್ತಾಗಿದೆ. ಇದು ದುರದೃಷ್ಟಕರ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ತಿಳಿಸಿದರು.

‘ಜನವರಿಯಲ್ಲಿ ಕೇಂದ್ರ ಸುಪರ್ದಿಗೆ ಪಡೆದು ಅಲ್ಲಿ ಕೆಲಸ ಆರಂಭಿಸಲಾಗಿದೆ. ಆಡಳಿತಾಧಿಕಾರಿ ಬರುವವರೆಗೆ ಅವರ ಕೆಲಸವನ್ನು ಎಫ್‌ಡಿಎ ನೋಡಿಕೊಳ್ಳುತ್ತಿದ್ದಾರೆ. ಆಡಳಿತಾಧಿಕಾರಿ ಹುದ್ದೆಗೆ ಅರ್ಜಿಗಳನ್ನು ಕರೆದು, ಸ್ವೀಕರಿಸಲಾಗಿದೆ. ಅವುಗಳ ಪರಿಶೀಲನೆ ನಡೆಯುತ್ತಿದೆ. ಆಡಳಿತಾಧಿಕಾರಿ ಹುದ್ದೆ ಹೊರತುಪಡಿಸಿ ಬೇರೆ ಎಲ್ಲಾ ಸಿಬ್ಬಂದಿ, ಸೌಕರ್ಯ ಇದೆ. ಯಾರೇ ಬಂದರೂ ಎಲ್ಲಾ ನೆರವು ನೀಡಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ‘ಪ್ರಜಾವಾಣಿ’ಗೆ ತಿಳಿಸಿದರು.

4 ತಿಂಗಳಲ್ಲಿ 31 ಜನ
ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ‘ಸಖಿ’ ಕೇಂದ್ರಕ್ಕೆ 31 ಮಹಿಳೆಯರು ದಾಖಲಾಗಿದ್ದರು. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಈ ಸಂಖ್ಯೆ ತೀರ ಕಡಿಮೆ ಇದೆ. ಏಪ್ರಿಲ್‌ನಲ್ಲಿ ನಾಲ್ವರು ಮೇನಲ್ಲಿ10 ಜೂನ್‌ನಲ್ಲಿ 5 ಹಾಗೂ ಜುಲೈನಲ್ಲಿ 12 ಜನ ‘ಸಖಿ’ ಕೇಂದ್ರದಲ್ಲಿ ದಾಖಲಾಗಿ ಇದರ ನೆರವು ಪಡೆದುಕೊಂಡಿದ್ದಾರೆ.  ನಗರದ ‘ಸಖಿ’ ಕೇಂದ್ರದಲ್ಲಿ ಒಟ್ಟು ಐದು ಹಾಸಿಗೆಗಳಿಗೆ ವ್ಯವಸ್ಥೆ ಇದೆ. ಯಾವುದೇ ಘಟನೆ ನಡೆದು ಸಂತ್ರಸ್ತ ಮಹಿಳೆ ಬಂದರೆ ತುರ್ತು ಸೇವೆಗಳನ್ನು ನೀಡಬೇಕು. ವೈದ್ಯಕೀಯ ಚಿಕಿತ್ಸೆ ಕೊಡಬೇಕು. ಪೊಲೀಸರು ವಕೀಲರು ಸ್ಥಳಕ್ಕೆ ಬಂದು ಕಾನೂನು ನೆರವು ನೀಡಬೇಕು. ಆಘಾತಕ್ಕೆ ಒಳಗಾದರೆ ಮನಃಶಾಸ್ತ್ರಜ್ಞರನ್ನು ಕರೆಸಿ ಆಪ್ತ ಸಮಾಲೋಚನೆ ನಡೆಸಬೇಕು.ವಿಡಿಯೊ ಕಾನ್ಪರೆನ್ಸ್‌ ಸವಲತ್ತು ಕೂಡ ಕಲ್ಪಿಸಿಕೊಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದರ ಮೇಲುಸ್ತುವಾರಿ ನೋಡಿಕೊಳ್ಳುತ್ತದೆ.
ಆಡಳಿತಾಧಿಕಾರಿ ಹುದ್ದೆಗೆ ಎಂ.ಎಸ್‌.ಡಬ್ಲ್ಯೂ ಪೂರ್ಣಗೊಳಿಸಿ ಐದು ವರ್ಷ ಅನುಭವ ಇರಬೇಕು. ಅಂತಹವರು ಸಿಗದಕ್ಕೆ ಹುದ್ದೆ ಖಾಲಿ ಉಳಿದಿದೆ.
–ಪ್ರಭಾಕರ ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
‘ಸಖಿ’ ಬಹಳ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಬೇಕು. ಇದು ಮಹತ್ವದ ಕೇಂದ್ರ. ಈ ಕುರಿತು ಸರ್ಕಾರದ ಗಮನ ಸೆಳೆಯುವೆ. 
–ಶಶಿಧರ ಕೋಸಂಬೆ ಸದಸ್ಯ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಬ್ರಿಮ್ಸ್‌ನಲ್ಲಿ ಜಾಗ ಕಲ್ಪಿಸುವುದಷ್ಟೇ ನಮ್ಮ ಕೆಲಸ. ರೋಗಿಗಳು ಬಂದರೆ ವೈದ್ಯಕೀಯ ಚಿಕಿತ್ಸೆ ನೀಡುತ್ತೇವೆ. ಮಿಕ್ಕುಳಿದ ಕೆಲಸ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೋಡುತ್ತದೆ.
–ಶಿವಕುಮಾರ ಶೆಟಕಾರ ನಿರ್ದೇಶಕ ಬ್ರಿಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT