ಶುಕ್ರವಾರ, ಸೆಪ್ಟೆಂಬರ್ 17, 2021
24 °C
ಹದಗೆಟ್ಟ ರಸ್ತೆ, ಕೊಳಚೆ ನೀರಿನ ದುರ್ನಾತಕ್ಕೆ ಜನ ಹೈರಾಣ

ಸೌಲಭ್ಯ ವಂಚಿತ ಪ್ರತಾಪುರ

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ತಾಲ್ಲೂಕಿನ ಪ್ರತಾಪುರ ಗ್ರಾಮದ ರಸ್ತೆಗಳು ಹಾಳಾಗಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಕೆಲವೆಡೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಕಲ್ಮಷಯುಕ್ತ ನೀರು ಸರಾಗವಾಗಿ ಮುಂದೆ ಸಾಗುತ್ತಿಲ್ಲ.

ಬಸವಕಲ್ಯಾಣದಿಂದ ಮಹಾರಾಷ್ಟ್ರಕ್ಕೆ ಹೋಗುವ ರಾಜ್ಯ ಹೆದ್ದಾರಿ ಈ ಗ್ರಾಮದ ಮಧ್ಯದಿಂದ ಹಾದು ಹೋಗುತ್ತದೆ. ಆದರೆ, ಈ ರಸ್ತೆಯ ಪಕ್ಕದಲ್ಲಿ ಚರಂಡಿ ನಿರ್ಮಿಸಲಾಗಿಲ್ಲ. ಹೀಗಾಗಿ ಮನೆ ಬಳಕೆಯ ನೀರು ಅಲ್ಲಲ್ಲಿ ಸಂಗ್ರಹಗೊಳ್ಳುತ್ತಿದೆ. ರಸ್ತೆ ಮೇಲೂ ನೀರು ಹರಿದು ಕೆಸರು ಆಗುತ್ತಿದೆ. ತಗ್ಗುಗುಂಡಿಗಳಲ್ಲಿ ವಾರಗಟ್ಟಲೇ ನೀರು ನಿಲ್ಲುತ್ತಿರುವ ಕಾರಣ ಪಾಚಿಗಟ್ಟಿ ದುರ್ಗಂಧ ಬೀರುತ್ತಿದೆ. ಇಲ್ಲಿ ಚರಂಡಿ ನಿರ್ಮಿಸಲು ಗ್ರಾಮಸ್ಥರು ಅನೇಕ ಸಲ ಆಗ್ರಹಿಸಿದರೂ ಪ್ರಯೋಜನ ಆಗಿಲ್ಲ.

ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ್ದಾಗಿದ್ದು ಅವರೇ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮ ಪಂಚಾಯಿತಿಯವರು ಹೇಳುತ್ತಾರೆ. ಆ ಇಲಾಖೆಯವರು ಕೂಡ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ಜನರ ಸಂಕಟ ತಪ್ಪುತ್ತಿಲ್ಲ. ಇನ್ನು ಮುಂದಾದರೂ, ಸಂಬಂಧಿತರು ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬಸವಕಲ್ಯಾಣ ನಗರದಿಂದ ಈ ಗ್ರಾಮದವರೆಗಿನ ರಸ್ತೆಯಲ್ಲಿ ತಗ್ಗುಗುಂಡಿಗಳು ಬಿದ್ದಿವೆ. ಇಲ್ಲಿಂದ ಡೋಮ ಗಣೇಶ ದೇವಸ್ಥಾನಕ್ಕೆ ಹೋಗುವ ರಸ್ತೆ ಹಾಗೂ ನುಲಿ ಚಂದಯ್ಯ ವೃತ್ತದವರೆಗಿನ ರಸ್ತೆಯೂ ಹಾಳಾಗಿದೆ. ಹೀಗಾಗಿ ವಾಹನಗಳ ಓಡಾಟಕ್ಕೆ ತೊಂದರೆ ಆಗುತ್ತಿದೆ.

‘ಈ ಸಂಪರ್ಕ ರಸ್ತೆಗಳ ಸುಧಾರಣೆ ಶೀಘ್ರ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರಾದ ಪಿಂಟು ಕಾಂಬಳೆ ಆಗ್ರಹಿಸಿದ್ದಾರೆ. ಊರ ಹೊರ ಭಾಗದಲ್ಲಿನ ಉರ್ದು ಶಾಲೆಗೆ ಹೋಗುವ ರಸ್ತೆ ಕಚ್ಚಾ ರಸ್ತೆ ಆಗಿರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಅನೇಕರು ಈ ರಸ್ತೆಯ ಮೂಲಕ ಹೊಲಗಳಿಗೂ ಹೋಗುತ್ತಾರೆ. ಆದ್ದರಿಂದ ಇಲ್ಲಿ ಸಿಸಿ ರಸ್ತೆ ನಿರ್ಮಿಸಬೇಕು’ ಎಂದಿದ್ದಾರೆ.

ಇಲ್ಲಿನ ಗ್ರಂಥಾಲಯ ಕಟ್ಟಡ ಶಿಥಿಲಗೊಂಡಿದೆ. ಹೊಸ ಕಟ್ಟಡ ಮಂಜೂರು ಮಾಡಬೇಕು. 2 ಶಾಲಾ ಕೊಠಡಿಗಳಲ್ಲಿ ಮಳೆ ನೀರು ಸೋರುತ್ತಿದೆ. ಅವುಗಳ ದುರಸ್ತಿ ಕೈಗೊಳ್ಳಬೇಕು ಎಂದು ಕೇಳಿಕೊಂಡಿದ್ದಾರೆ.

‘ಶಾಲೆಯಲ್ಲಿನ ಅಡುಗೆ ಕೊಠಡಿಗಳ ಛಾವಣಿ ಪೂರ್ಣ ಪ್ರಮಾಣದಲ್ಲಿ ಶಿಥಿಲಗೊಂಡಿದೆ. ಆದ್ದರಿಂದ ಹೊಸ ಕೊಠಡಿಗಳನ್ನು ನಿರ್ಮಿಸಬೇಕು’ ಎಂದು ಅಡುಗೆ ಸಿಬ್ಬಂದಿ ವಿಮಲಾಬಾಯಿ ಒತ್ತಾಯಿಸಿದ್ದಾರೆ.

‘ಈಚೆಗೆ ಕೆಲ ಸ್ಥಳಗಳಲ್ಲಿನ ತಗ್ಗುಗುಂಡಿಗಳಲ್ಲಿ ಮಣ್ಣು ಹಾಕಿ ಮುಚ್ಚಲಾಗಿದೆ. ಇನ್ನೂ ಈ ಕೆಲಸ ಆಗಬೇಕಾಗಿದೆ. ಇದಲ್ಲದೆ ಎಲ್ಲೆಡೆ ಚರಂಡಿ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲನಗೌಡ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.