ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಕಾಲೇಜು ತಲುಪಲು 2 ಕಿ.ಮೀ ದೂರ ನಡಿಗೆ

ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲ
Published 25 ಫೆಬ್ರುವರಿ 2024, 5:13 IST
Last Updated 25 ಫೆಬ್ರುವರಿ 2024, 5:13 IST
ಅಕ್ಷರ ಗಾತ್ರ

ಬಸವಕಲ್ಯಾಣ: ನಗರದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಳೆ, ಗಾಳಿ ಬಿಸಿಲಲ್ಲಿ 2 ಕಿ.ಮೀ ನಷ್ಟು ನಡಿಗೆಯ ಮೂಲಕವೇ ಕಾಲೇಜಿಗೆ ಹೋಗಿ ಬರಬೇಕಾದ ಪರಿಸ್ಥಿತಿಯಿದೆ.

ತ್ರಿಪುರಾಂತ ಕೆರೆ ದಂಡೆಯಲ್ಲಿನ ಖಾನಾಪುರ ಗ್ರಾಮಕ್ಕೆ ಸಮೀಪದ ನಡುಗಡ್ಡೆಯಂತಿರುವ ಸ್ಥಳದಲ್ಲಿ ಕಾಲೇಜನ್ನು ಸ್ಥಾಫಿಸಲಾಗಿದೆ. ಕಾಲೇಜಿಗೆ ಗ್ರಾಮೀಣ ಭಾಗದ, ಬಡ ಮತ್ತು ಮಧ್ಯಮ ವರ್ಗದವರ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ಅವರಿಗೆ ಹೋಗಿ ಬರಲು ವಾಹನ ವ್ಯವಸ್ಥೆಯಿಲ್ಲ. ಹೀಗಾಗಿ ಕಾಲೇಜನ್ನು ಮೊದಲಿದ್ದ ತ್ರಿಪುರಾಂತ ಕಲ್ಯಾಣ ಮಂಟಪದ ಜಾಗದಲ್ಲಿಯೇ ಕೊಠಡಿಗಳ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹವಿದೆ. ಆದರೆ ಸಂಬಂಧಿಸಿದವರು, ವಿದ್ಯಾರ್ಥಿಗಳ ಸಂಕಷ್ಟದತ್ತ ಲಕ್ಷ್ಯ ವಹಿಸದೇ, ಹೊಸ ಕಟ್ಟಡ ಕಟ್ಟಿದ್ದಾರೆ. ಆದರೆ ಬಸ್‌ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ಕಾಲೇಜು ನಗರದಿಂದ 6 ಕಿ.ಮೀ ದೂರದಲ್ಲಿದೆ. ತಹಶೀಲ್ದಾರ್ ಕಚೇರಿವರೆಗೆ ಮಾತ್ರ ಬಸ್ ಮತ್ತು ಅಟೋಗಳ ವ್ಯವಸ್ಥೆ ಇದ್ದು, ಅಲ್ಲಿಂದ ಅನುಭವ ಮಂಟಪ ರಸ್ತೆ ಮೂಲಕ ಕಾಲೇಜಿಗೆ ನಡೆದುಕೊಂಡೇ ಹೋಗಿ ಬರಬೇಕು.

‘ಈ ಭಾಗದಲ್ಲಿ ಅಟೋ, ಖಾಸಗಿ ವಾಹನ ಹೋಗುವುದಿಲ್ಲ. ಕೆಲ ವಾಹನದವರು ನೂರಾರು ರೂಪಾಯಿ ಬಾಡಿಗೆ ಪಡೆಯುತ್ತಾರೆ. ತ್ರಿಪುರಾಂತ ಕೆರೆ ಅಂಗಳದಿಂದ 1 ಕಿ.ಮೀ ನಷ್ಟು ಕಚ್ಚಾ ರಸ್ತೆ ಇದ್ದು, ರಸ್ತೆಯಲ್ಲಿ ಮಣ್ಣು, ಕಲ್ಲುಗಳಿವೆ. ಮುಳ್ಳಿನ ಕಂಟೆಗಳಿದ್ದು ಭೀತಿಯ ವಾತಾವರಣವಿದ್ದರೂ ಅನಿವಾರ್ಯವಾಗಿ ಇಲ್ಲಿಂದಲೇ ಹೋಗ ಬರಬೇಕಿದೆ’ ಎಂದು ವಿದ್ಯಾರ್ಥಿಗಳಾದ ರಾಜಕುಮಾರ ಮತ್ತು ಸಂಗೀತಾ ಹೇಳಿದ್ದಾರೆ.

‘ವಿದ್ಯಾರ್ಥಿಗಳಿಂದ ಬಸ್ ಡಿಪೋ ಎದುರಲ್ಲಿ ಒಂದು ಸಲ ಧರಣಿ ನಡೆಸಲಾಗಿದೆ. ಶಾಸಕರು, ವಿಧಾನ ಪರಿಷತ್ ಸದಸ್ಯರು, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಅವರಿಗೂ ಮನವಿಪತ್ರ ಸಲ್ಲಿಸಿದ್ದೇವೆ. ಅದರೂ ಯಾರೂ ಸ್ಪಂದಿಸುತ್ತಿಲ್ಲ' ಎಂದು ವಿದ್ಯಾರ್ಥಿನಿಯರಾದ ಮಂಗಲಾ, ಕವಿತಾ ಗೋಳು ತೋಡಿಕೊಂಡಿದ್ದಾರೆ.

‘ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳಿದ್ದಾರೆ. ಈಗ ಎರಡು ಸಲ ಬಸ್ ಬರುತ್ತಿದ್ದರೂ ಇನ್ನೂ ಎರಡು ಸಲ ಬಂದು ಹೋಗುವಂತೆ ವ್ಯವಸ್ಥೆ ಮಾಡಬೇಕು ಎಂದು ಬಸ್ ಘಟಕ ವ್ಯವಸ್ಥಾಪಕರಿಗೆ ನಾನು ಸ್ವತಃ ಭೇಟಿಯಾಗಿ ನಾಲ್ಕು ಸಲ ಮನವಿ ಸಲ್ಲಿಸಿದ್ದೇನೆ. ಆದರೂ ಕ್ರಮ ತೆಗೆದುಕೊಂಡಿಲ್ಲ' ಎಂದು ಕಾಲೇಜಿನ ಪ್ರಾಂಶುಪಾಲ ಬಲರಾಂ ಹುಡೆ ಹೇಳಿದ್ದಾರೆ.

ಬಸವಕಲ್ಯಾಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ತ್ರಿಪುರಾಂತ ಕೆರೆ ಅಂಗಳದಿಂದ ಹೋಗುವ ಕಚ್ಚಾ ರಸ್ತೆ
ಬಸವಕಲ್ಯಾಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ತ್ರಿಪುರಾಂತ ಕೆರೆ ಅಂಗಳದಿಂದ ಹೋಗುವ ಕಚ್ಚಾ ರಸ್ತೆ

400ಕ್ಕೂ ಅಧಿಕ ವಿದ್ಯಾರ್ಥಿಗಳು ಧರಣಿ, ರಸ್ತೆ ತಡೆ ನಡೆಸಿದರೂ ಪ್ರಯೋಜನವಾಗಿಲ್ಲ ನಾಲ್ಕು ಸಲ ಬಸ್ ಸಂಚಾರಕ್ಕೆ ಆಗ್ರಹ

ಕಾಲೇಜಿನವರೆಗೆ ಎರಡು ಸಲ ಮಾತ್ರ ಬಸ್ ವ್ಯವಸ್ಥೆ ಇರುವುದರಿಂದ ನಂತರ ವಿದ್ಯಾರ್ಥಿಗಳು ನಿತ್ಯ 2 ಕಿ.ಮೀ ದೂರ ನಡೆದುಕೊಂಡು ಹೋಗಿ ಬರುವುದು ಅನಿವಾರ್ಯವಾಗಿದೆ

-ಬಲರಾಂ ಹುಡೆ ಪ್ರಾಂಶುಪಾಲ

ಬೆಳಿಗ್ಗೆ 9 ಗಂಟೆಗೆ ಮತ್ತು ಮಧ್ಯಾಹ್ನ 2 ಗಂಟೆಗೆ ಬಸ್ ಸಂಚಾರ ಕಲ್ಪಿಸಲಾಗಿದೆ. ಹೆಚ್ಚಿನ ಬಸ್‌ಗಳ ಬೇಡಿಕೆಯಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ಬಗ್ಗೆ ಸಂಬಂಧಿತರೊಂದಿಗೆ ಚರ್ಚಿಸುತ್ತೇನೆ

-ನಯೀಮ್ ಸಾಬ್ ಬಸ್ ಘಟಕ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT