ಒಬ್ಬ ಅಧಿಕಾರಿಯೂ ರೈತರ ಬಳಿಗೆ ಹೋಗಿಲ್ಲ: ಕೆ.ಎಸ್‌.ಈಶ್ವರಪ್ಪ ಆರೋಪ

7
ಬಿಜೆಪಿ ಬರ ಅಧ್ಯಯನ

ಒಬ್ಬ ಅಧಿಕಾರಿಯೂ ರೈತರ ಬಳಿಗೆ ಹೋಗಿಲ್ಲ: ಕೆ.ಎಸ್‌.ಈಶ್ವರಪ್ಪ ಆರೋಪ

Published:
Updated:
Deccan Herald

ಬೀದರ್‌: ‘ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಈವರೆಗೂ ಕೆಡಿಪಿ ಸಭೆ ನಡೆಸಿಲ್ಲ. ಒಬ್ಬ ಅಧಿಕಾರಿಯೂ ರೈತರ ಬಳಿಗೆ ಹೋಗಿಲ್ಲ. ರಾಜ್ಯದಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲವಾಗಿದ್ದಾರೆ’ ಎಂದು ಬಿಜೆಪಿ ಬರ ಅಧ್ಯಯನ ತಂಡದ ನೇತೃತ್ವ ವಹಿಸಿರುವ ಶಾಸಕ ಕೆ.ಎಸ್‌.ಈಶ್ವರಪ್ಪ ಆರೋಪಿಸಿದರು.

‘ರಾಜ್ಯ ಸರ್ಕಾರ ನೂರು ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಹಿಂಗಾರು ಬೆಳೆ ನಷ್ಟದ ಸಮೀಕ್ಷೆಯೂ ನಡೆದಿದೆ. ರೈತರಿಗೆ ಬೆಳೆ ವಿಮೆ ಬರಲು ವಿಳಂಬವಾಗಲಿದೆ. ರಾಜ್ಯ ಸರ್ಕಾರ ರೈತರಿಗೆ ಒಂದು ಪೈಸೆ ಸಹ ಬಿಡುಗಡೆ ಮಾಡಿಲ್ಲ’ ಎಂದು ಬರ ಅಧ್ಯಯನಕ್ಕಾಗಿ ಜಿಲ್ಲೆಗೆ ಬಂದ ಸಂದರ್ಭದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದರು.

‘ಬರ ಪೀಡಿತ ತಾಲ್ಲೂಕುಗಳಿಗೆ ತಲಾ ₹ 50 ಲಕ್ಷ ಕೊಡುವುದಾಗಿ ಹೇಳಿ ಕೇವಲ ₹ 25 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಶಾಸಕರ ನಿಧಿಗೆ ₹ 2 ಕೋಟಿ ಒದಗಿಸುವ ಭರವಸೆ ನೀಡಿ ₹ 50 ಲಕ್ಷ ಬಿಡುಗಡೆ ಮಾಡಿದ್ದಾರೆ’ ಎಂದು ತಿಳಿಸಿದರು.

‘ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾದಾಗ ಕೇಂದ್ರ ಸರ್ಕಾರ ತಕ್ಷಣ ₹ 650 ಕೋಟಿ ಬಿಡುಗಡೆ ಮಾಡಿತ್ತು. ಪಕ್ಷಭೇದ ಮರೆತು ಸರ್ಕಾರ, ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು. ರೈತರಲ್ಲಿ ಧೈರ್ಯ ತುಂಬಬೇಕು. ಕೇಂದ್ರದ ಹಣ ಬರುವ ವರೆಗೂ ಕಾಯುತ್ತ ಕುಳಿತರೆ ಸಾವಿರಾರು ಜನ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ಯಾರು?
‘ರಾಹುಲ್‌ ಗಾಂಧಿ ಹಾಗೂ ಸಿದ್ದರಾಮಯ್ಯ ಹಿಂದೂ ಎಂದು ಹೇಳಿಕೊಂಡು ಇದ್ದಕ್ಕಿದ್ದಂತೆ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ. ರಾಮ, ಗೋವು ಹಾಗೂ ದೇಶದ ಸಂಸ್ಕೃತಿಯ ಬಗ್ಗೆ ಕಾಂಗ್ರೆಸ್‌ನವರಿಂದ ತಿಳಿದುಕೊಳ್ಳುವ ಅಗತ್ಯವಿಲ್ಲ. ಮೊನ್ನೆ ತನಕ ಟಿಪ್ಪು ಎಂದವರು ಈಗ ಹಿಂದೂ ಎನ್ನುತ್ತಿದ್ದಾರೆ’ ಎಂದು ಈಶ್ವರಪ್ಪ ಟೀಕಿಸಿದರು.

‘ಸಿದ್ದರಾಮಯ್ಯ ಅವರು ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದರು. ಈಗ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳುತ್ತಿದ್ದಾರೆ. ಇವರನ್ನು ಎಲ್ಲಿಗೆ ಕರೆದುಕೊಂಡು ಹೋಗಿ ಸೇರಿಸಬೇಕು’ ಎಂದು ಪ್ರಶ್ನಿಸಿದರು.

‘ಹಿಂದುತ್ವ ನಾಶ ಮಾಡಿದವರೆಲ್ಲರೂ ನಾಶವಾಗುತ್ತಾರೆ. ಭಾರತೀಯ ಸಂಸ್ಕೃತಿ ನಾಶ ಮಾಡಿರುವ ಕಾರಣ ದೇಶದ 22 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ’ ಎಂದು ಹೇಳಿದರು.

‘ಸತೀಶ ಜಾರಕಿಹೊಳಿ ಅವರು ಎಳ್ಳುನೀರು ಕೊಟ್ಟವರು ರೈತ ನಾಯಕ ಆಗುವುದಿಲ್ಲ ಎಂದು ಹೇಳಿದ್ದಾರೆ. ಡಿ.ಕೆ.ಶಿವಕುಮಾರ ಒಂದು ಹೇಳಿದರೆ, ಜಾರಕಿಹೊಳಿ ಇನ್ನೊಂದು ಹೇಳುತ್ತಿದ್ದಾರೆ. ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆದಿದೆ. ಕಾಂಗ್ರೆಸ್‌ ನಾಯಕರಲ್ಲೇ ತಾಳಮೇಳ ಇಲ್ಲ’ ಎಂದು ಟೀಕಿಸಿದರು.

‘ಸಹಕಾರ ಸಚಿವರ ಹೆಸರಲ್ಲಿ ಹಣ ವಸೂಲಿ ಮಾಡುತ್ತಿರುವ ಆರೋಪಗಳು ಬಂದಿವೆ. ಸಚಿವರು ಸ್ಪಷ್ಟನೆ ನೀಡಬೇಕು ಅಥವಾ ನಿವೃತ್ತ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಸಂಸದ ಭಗವಂತ ಖೂಬಾ, ವಿಧಾನ ಪರಿಷತ್‌ ಸದಸ್ಯ ರವಿಕುಮಾರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಾಬುರಾವ್‌ ಚವ್ಹಾಣ, ಶಾಸಕರಾದ ದತ್ತಾತ್ತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೋಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ತಂಡದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !